

ನವದೆಹಲಿ: ಕರೊನಾ ಸಂಕಷ್ಟ, ಲಾಕ್ಡೌನ್ ಕಾರಣಕ್ಕೆ ವೇತನದ ವಿಚಾರದಲ್ಲಿ ಕಿರಿಕ್ ಮಾಡಿಕೊಂಡು ಉದ್ಯೋಗ ಕಳೆದುಕೊಂಡಾತ ಮತ್ತೆ ಪುನಃ ಅಲ್ಲೇ ಉದ್ಯೋಗ ಗಿಟ್ಟಿಸಿಕೊಳ್ಳುವ ಸಲುವಾಗಿ ಆ ಕಂಪನಿಯ ಡೇಟಾಬೇಸ್ ಅನ್ನೇ ಹ್ಯಾಕ್ ಮಾಡಿದ ಘಟನೆ ದೆಹಲಿಯಿಂದ ವರದಿಯಾಗಿದೆ.
ಡೇಟಾಬೇಸ್ ಹ್ಯಾಕ್ ಮಾಡಿದಾತನ ಹೆಸರು ವಿಕೇಶ್ ಶರ್ಮಾ. ಡೇಟಾಬೇಸ್ ಹ್ಯಾಕ್ಗೆ ಒಳಗಾದ ಕಂಪನಿಯ ಸಿಇಒ ನೀಡಿದ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಐಪಿ ಅಡ್ರೆಸ್ಸಿನ ಜಾಡು ಹಿಡಿದು ಹೋಗಿ ವಿಕೇಶ್ ಶರ್ಮಾನನ್ನು ಗುರುವಾರ ಬಂಧಿಸಿದ್ದಾರೆ. ತನಿಖೆ ವೇಳೆ ಹ್ಯಾಕ್ ಮಾಡಿದ್ದೇಕೆ ಎಂಬ ವಿಚಾರ ಬಹಿರಂಗವಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, ವಿಕೇಶ್ ಶರ್ಮಾ ಎಂ.ಎಸ್ಸಿ(ಐಟಿ) ಶಿಕ್ಷಣ ಪಡೆದಿದ್ದು, ಕಂಪನಿಯಲ್ಲಿ ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಲಾಕ್ಡೌನ್ ವೇಳೆ ವೇತನ ಕಡಿತಗೊಳಿಸಿದ್ದಕ್ಕಾಗಿ ಅಸಮಾಧಾನ ತೋಡಿಕೊಂಡಾಗ ಆತನನ್ನು ಕೆಲಸದಿಂದಲೇ ವಜಾಗೊಳಿಸಿದ್ದರು. ಈ ನೋವಿಗೆ ಪ್ರತೀಕಾರ ತೀರಿಸಬೇಕೆಂದು ಹವಣಿಸಿದ ಶರ್ಮಾ ಕಂಪನಿಯ ಹಲವಾರು ಡೇಟಾಗಳನ್ನು ಡಿಲೀಟ್ ಮಾಡಿದ್ದ. ಇದರಿಂದಾಗಿ ಕಂಪನಿಗೆ ತೊಂದರೆಯಾಗಿ ಪುನಃ ಕೆಲಸಕ್ಕೆ ಸೇರಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದ. ಅದೀಗ ತಲೆಕೆಳಗಾಗಿದೆ.
ಕಂಪನಿಯ ಸಿಇಒ ಕೊಟ್ಟಿರುವ ದೂರಿನ ಪ್ರಕಾರ, ವಿಕೇಶ್ ಶರ್ಮಾ ಒಟ್ಟು 18,000 ರೋಗಿಗಳ ಡೇಟಾವನ್ನು ಡಿಲೀಟ್ ಮಾಡಿದ್ದ. ಅಷ್ಟೇ ಅಲ್ಲ, ಮೂರು ಲಕ್ಷ ರೋಗಿಗಳ ಬಿಲ್ಲಿಂಗ್ ಮಾಹಿತಿಯೂ ನಾಪತ್ತೆಯಾಗಿದೆ. ಅದಲ್ಲದೇ 22,000 ತಪ್ಪು ಮಾಹಿತಿಗಳನ್ನು ಎಂಟ್ರಿ ಮಾಡಿ ಕಂಪನಿಗೆ ಸಾಕಷ್ಟು ನಷ್ಟ ಉಂಟುಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ. (ಏಜೆನ್ಸೀಸ್)