

ಬೆಂಗಳೂರು: ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಸದಸ್ಯರಿಂದ ಹಣ ಪಾವತಿಸಿಕೊಳ್ಳುವಾಗ ಇರುವ ಉತ್ಸಾಹ ನಿವೇಶನ ನೀಡುವಾಗ ಇರುವುದಿಲ್ಲ. ಮತ್ತೊಮದೆಡೆ, ಸೊಸೈಟಿ ಅಕ್ರಮದ ಬಗ್ಗೆ ದೂರು ನೀಡಿದರೂ, ನಿಗದಿತ ಅವಧಿಯಲ್ಲಿ ದೂರು ಇತ್ಯರ್ಥವಾಗುವುದಿಲ್ಲ. ನಿವೇಶನಕ್ಕೆ ಮೊತ್ತ ಪಾವತಿಸಿರುವವರು ಹಣವೂ ಇಲ್ಲದೆ, ನಿವೇಶನವೂ ಸಿಗದೆ ಬೇಸತ್ತಿದ್ದಾರೆ. ಗರಿಷ್ಠ ಮೂರು ತಿಂಗಳಲ್ಲಿ ಪ್ರಕರಣ ಇತ್ಯರ್ಥಪಡಿಸುತ್ತೇವೆ ಎನ್ನುವ ಸಹಕಾರ ಇಲಾಖೆಯ ಅಧಿಕಾರಿಗಳು, 10ರಿಂದ 12 ವರ್ಷ ಕಳೆದರೂ ಸದಸ್ಯರಿಗೆ ನ್ಯಾಯ ದೊರಕಿಸಿಕೊಟ್ಟಿಲ್ಲ.
ಐಟಿಐ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ 600ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, 28 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. 2004ರಲ್ಲಿ ಹಣ ಪಡೆದಿರುವ ಸೊಸೈಟಿ ಸದಸ್ಯರಿಗೆ ನಗರೂರು ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡುವುದಾಗಿ ತಿಳಿಸಲಾಗಿತ್ತು. 17 ವರ್ಷ ಕಳೆದರೂ, ಈವರೆಗೆ ನಿವೇಶನ ಹಂಚಿಕೆ ಮಾಡಿಲ್ಲ ಎಂದು ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಸದಸ್ಯರು ಆರೋಪಿಸಿದ್ದಾರೆ.
ನಿದ್ದೆಯಿಂದ ಎದ್ದು ಬನ್ನಿ: ಸಹಕಾರ ಇಲಾಖೆ ಅಧಿಕಾರಿಗಳು ನಿದ್ದೆಯಿಂದ ಎದ್ದು ಜನರಿಗೆ ನ್ಯಾಯ ಕಲ್ಪಿಸಿ ಎಂದು ನೊಂದ ಸೊಸೈಟಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವ ಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರೊಬ್ಬರು ಸಹಕಾರ ಸಂಘಗಳ ನಿಬಂಧಕರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ. ‘2011ರಲ್ಲೇ ಕೋರ್ಟ್ ನನ್ನ ಪರವಾಗಿ ತೀರ್ಪು ನೀಡಿದ್ದು, ನಿವೇಶನ ನೀಡಲು ಸೂಚಿಸಿದೆ. ಅದರ ಪರ ಕ್ರಮವಹಿಸದೇ ಇರುವುದು ಅನ್ಯಾಯ. ಪ್ರತಿ ಬಾರಿ ಈ ಕುರಿತು ಧ್ವನಿ ಎತ್ತಿದಾಗ ಅಧಿಕಾರಿಗಳ ಸಭೆ ಕರೆಯುವುದು ಆಗಿದೆಯೇ ಹೊರತು ಯಾವುದೇ ಕ್ರಮವಹಿಸಿಲ್ಲ’ ಎಂದು ದೂರಿದ್ದಾರೆ.
ಲೆಕ್ಕ ನೀಡದ ಇಲಾಖೆ: ಸಹಕಾರ ಸಂಘಗಳ ವಿರುದ್ಧ ದೂರು ದಾಖಲಾಗಿರುವ ಮತ್ತು ಇತ್ಯರ್ಥವಾಗಿರುವ ಪ್ರಕರಣಗಳ ಅಂಕಿ-ಅಂಶಗಳ ಮಾಹಿತಿ ನೀಡಲು ನಿಬಂಧಕರ ಕಚೇರಿ ಹಿಂದೇಟು ಹಾಕುತ್ತಿದೆ. ರಾಜ್ಯದಲ್ಲಿ ಇರುವ ಸಹಕಾರ ಸಂಘ, ಮುಚ್ಚಿ ಹೋಗಿರುವುದು, ಮುಚ್ಚುತ್ತಿರುವುದು, 5ರಿಂದ 10 ವರ್ಷದಿಂದ ನಿವೇಶನ ನೀಡದೆ ಇರುವ ಸೊಸೈಟಿಗಳ ಮಾಹಿತಿಯನ್ನು ಇದೇ ನಿಬಂಧಕರ ಕಚೇರಿ ನೀಡಿದೆ. ಆದರೆ, ಸೊಸೈಟಿ ವಿರುದ್ಧ ದಾಖಲಾಗಿರುವ ದೂರು, ಇತ್ಯರ್ಥವಾಗಿರುವ ದೂರು, ಇತ್ಯರ್ಥವಾಗದೇ ಇರುವ ಅಂಕಿ-ಅಂಶಗಳನ್ನು ಕೇಳಿದರೆ, ‘ಇಲ್ಲ. ಇದು ತಾಲೂಕು, ಜಿಲ್ಲಾ ಮಟ್ಟದಲ್ಲಿ ದಾಖಲಾಗುತ್ತದೆ. ಇಲ್ಲಿಗೆ ಬರುವುದಿಲ್ಲ’ ಎಂದು ಅಧಿಕಾರಿಗಳು ಸಿದ್ಧ ಉತ್ತರ ನೀಡಿ ಜಾರಿಕೊಳ್ಳುತ್ತಾರೆ.
ನಿವೃತ್ತಿಯಾದರೂ ಸಿಗದ ನಿವೇಶನ: ನೌಕರಿಯಲ್ಲಿದ್ದ ವೇಳೆ ನಿವೇಶನ ಕ್ಕಾಗಿ ಅರ್ಜಿ ಸಲ್ಲಿಸಿದ ನೌಕರರಲ್ಲಿ ಬಹುತೇಕರು ನಿವೃತ್ತಿ ಹೊಂದಿ 10 ವರ್ಷಗಳು ಕಳೆದಿದೆ. ಈಗ ಅವರು ನಿವೇಶನಕ್ಕಾಗಿ ಪಾವತಿಸಿದ ಠೇವಣಿಯನ್ನು ಪಡೆಯಲು ಕೋರ್ಟ್, ಕಚೇರಿ ಅಲೆಯುವಂತಾಗಿದೆ. ಈ ಸಂಬಂಧ ಸದಸ್ಯರು 2018ರಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ದೂರು ನೀಡಿದ್ದಾರೆ. ಆ ಪ್ರಕಾರವಾಗಿ ಸಹಕಾರ ಇಲಾಖೆಯು ತನಿಖೆ ನಡೆಸಿ ಸೊಸೈಟಿ ಅವ್ಯವಹಾರಗಳ ಬಗ್ಗೆ ವರದಿ ನೀಡಿದೆ. ನಂತರ ಸೊಸೈಟಿಯಲ್ಲಿನ ಆಡಳಿತ ಮಂಡಳಿ ಸದಸ್ಯರನ್ನು ಅಮಾನತು ಮಾಡಿದೆ.
ಇಷ್ಟಕ್ಕೆ ಸುಮ್ಮನಾಗದ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದು, ಅಪರ ನಿಬಂಧಕರ ಮಟ್ಟದಲ್ಲೇ ವಿಚಾರಣೆ ನಡೆಸಿ 3 ತಿಂಗಳಲ್ಲಿ ನ್ಯಾಯ ದೊರಕಿಸಿಕೊಡುವಂತೆ 2020 ಡಿಸೆಂಬರ್ನಲ್ಲಿ ತೀರ್ಪು ನೀಡಿದೆ. ಆದರೆ, ಈವರೆಗೆ ನಿವೇಶನ ಹಂಚಿಕೆ ಮಾಡುತ್ತಿಲ್ಲ. ಠೇವಣಿ ಹಣವನ್ನೂ ನೀಡುತ್ತಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.