ಸಾಮಾಜಿಕ ಕಾರ್ಯಗಳು ಸ್ಫೂರ್ತಿದಾಯಕ

temple
ಶಿಕಾರಿಪುರ ತಾಲೂಕಿನ ಇಟ್ಟಗಿಹಳ್ಳಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು, ನಗರದ ಮಹದೇವಪ್ಪ, ಗೋಣಿ ಮಾಲತೇಶ್, ಸುಶೀಲಾಬಾಯಿ, ಗಂಗಾನಾಯ್ಕ, ಸಿದ್ದನ ಗೌಡ ಇತರರಿದ್ದರು.
Published on

ಶಿಕಾರಿಪುರ: ದೇವಸ್ಥಾನಗಳು ನಮಗೆ ಸದಾ ಸ್ಫೂರ್ತಿಯ ತಾಣಗಳು. ಭಗವಂತನ ಸ್ಫೂರ್ತಿಯಿಂದ ನಾವು ಸಾಮಾಜಿಕ ಕಾರ್ಯಗಳನ್ನು ಮಾಡಬೇಕು. ನೊಂದವರ ಬದುಕಲ್ಲಿ ಬೆಳಕಾಗಬೇಕು ಎಂದು ಮಲೇಬೆನ್ನೂರು ಸಮೀಪದ ನಂದಿಗುಡಿ ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಇಟ್ಟಿಗೆಹಳ್ಳಿಯಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನ, ಶ್ರೀ ಸಿದ್ದರಾಮೇಶ್ವರ ಸಭಾಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಭಗವಂತನ ಆರಾಧನೆಯಿಂದ ನಮಗೆ ಬಲ ಬರುತ್ತದೆ. ಆ ಬಲವನ್ನು ದೇಶ ರಕ್ಷಣೆಗಾಗಿ ಗಡಿಯಲ್ಲಿ ನಮ್ಮ ಯೋಧರು ಉಪಯೋಗಿಸುತ್ತಿದ್ದಾರೆ. ಅವರು ನಮಗಾಗಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹೋರಾಡುತ್ತಾರೆ. ಎಲ್ಲ ಆಸೆ, ಆಕಾಂಕ್ಷೆಗಳನ್ನು ಬದಿಗಿಟ್ಟು ಹೋರಾಡುವ ಅವರ ಕಂಗಳಲ್ಲಿ ಕಾಣುವುದು ಕೇವಲ ದೇಶ ಮಾತ್ರ ಎಂದರು.

ಎಲ್ಲ ಭೇದಗಳನ್ನು ತೊರೆದು ಕೆಲಸ ಮಾಡುವ ಅಗತ್ಯವಿದೆ. ದೇಶ ಸಂಕಷ್ಟದಲ್ಲಿ ಇರುವಾಗ ನಾವು ದೇಶದ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದಾಗ ಭಗವಂತ ಮತ್ತು ಭಗವತಿಯರು ಸದಾ ನಮ್ಮ ಬೆನ್ನ ಹಿಂದೆ ನಿಂತು ಕಾಪಾಡುತ್ತಾರೆ ಎಂದು ಹೇಳಿದರು.

ನಮಗೆ ಭಕ್ತಿಯಿಂದ ಶಕ್ತಿ ದೊರಕುತ್ತದೆ. ನಿರ್ಮಲ, ನಿಸ್ವಾರ್ಥವಾದ ಭಕ್ತಿಯನ್ನೇ ಭಗವಂತ ನಮ್ಮಿಂದ ಬೇಡುವುದು. ಗ್ರಾಮದ ಎಲ್ಲರೂ ಒಂದಾಗಿ ಮಾಡುವ ಇಂತಹ ಕಾರ್ಯಕ್ರಮಗಳಿಂದ ಸಹೋದರತ್ವ ಮೂಡುತ್ತದೆ. ಸದ್ವಿಚಾರಗಳು ಎಲ್ಲೆಡೆ ಹರಡುತ್ತವೆ. ಈ ಮಣ್ಣಿನ ಪ್ರತಿ ಕಣದಲ್ಲಿಯೂ ಸಾಧು, ಸಂತರು, ಋಷಿ ಮುನಿಗಳು, ಶರಣರು ತಮ್ಮ ತಪಸ್ಸಿನ ಪುಣ್ಯವನ್ನು ಧಾರೆಯೆರೆದಿದ್ದಾರೆ ಎಂದು ತಿಳಿಸಿದರು.

ಧಾರ್ಮಿಕ ಕಾರ್ಯಗಳಿಂದ ನಮ್ಮ ಮನಸು ರಾಗದ್ವೇಷಗಳಿಂದ ಮುಕ್ತವಾಗಿ ಹಗುರವಾಗುತ್ತದೆ. ನಮ್ಮ ಆಚಾರ, ವಿಚಾರ, ಸಂಸ್ಕತಿ, ಪರಂಪರೆ, ಸಂಪ್ರದಾಯಗಳು ಈ ನೆಲದ ಮಣ್ಣು ನಮಗೆ ನೀಡಿದ ಕೊಡುಗೆ. ಈ ಸಮಾಜ ನಮ್ಮಿಂದ ಸಾಕಷ್ಟು ನಿರೀಕ್ಷೆ ಮಾಡುತ್ತದೆ. ಸಮಾಜ ನಮ್ಮ ಮೇಲಿಟ್ಟಿರುವಂತಹ ನಿರೀಕ್ಷೆಗಳನ್ನು ನಾವು ಯಾವತ್ತೂ ಹುಸಿ ಮಾಡಬಾರದು ಸಚಿವ ಮಧು ಬಂಗಾರಪ್ಪ ಹೇಳಿದರು.

ಎಂದರು. ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಹಾಶಕ್ತಿಯಾದ ಶ್ರೀ ಮಾರಿಕಾಂಬಾ ಅಮ್ಮನ ದೇವಸ್ಥಾನವನ್ನು ಉದ್ಘಾಟನೆ ಮಾಡಿದ್ದೇನೆ. ಭಗವತಿ ಸ್ವರೂಪರಾದ ನಾರಿಯರ ಶಕ್ತಿ ಅದ್ಭುತವಾದುದು. ನಾವು ಎಲ್ಲರಿಗೂ ವರವಾದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಾಡಿನ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯ ಸಮಯದಲ್ಲಿ ಬೆಂಬಲವಾಗಿ ನಿಂತರು. ಈ ಕಾರಣಕ್ಕೆ ಗ್ಯಾರಂಟಿ ಯೋಜನೆಗಳು ಇನ್ನಿಲ್ಲದ ಯಶಸ್ಸು ಕಂಡಿವೆ ಎಂದರು.

ಮುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ, ಉಪಾಧ್ಯಕ್ಷ ಗಂಗಾನಾಯ್ಕ, ಮಾಜಿ ಅಧ್ಯಕ್ಷ ಸಿದ್ದನ ಗೌಡ, ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ್ ಗೌಡ, ಶಿಕಾರಿಪುರ ಪುರಸಭೆ ಸದಸ್ಯ ಉಳ್ಳಿ ದರ್ಶನ್, ನೊಳಂಬ ವೀರಶೈವ ಸಮಾಜದ ಅಧ್ಯಕ್ಷ ಬಿ.ಲೋಹಿತ್, ಗುರುಮೂರ್ತಿ, ಗ್ರಾಪಂ ಸದಸ್ಯೆ ರೂಪಾ, ಪಿಡಿಒ ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net