

ಸೊರಬ: ಸಾಮಾಜಿಕ ನಾಟಕಗಳಿಂದ ಸಮಾಜದಲ್ಲಿ ಪರಿವರ್ತನೆ ಹಾಗೂ ಸುಧಾರಣೆ ತರಲು ಸಾಧ್ಯ. ಹಾಗಾಗಿ ಗ್ರಾಮೀಣ ಭಾಗದಲ್ಲಿ ನಾಟಕ ಕಲೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಾಪಂ ಮಾಜಿ ಸದಸ್ಯ ಸುನಿಲ್ ಗೌಡ ಹೇಳಿದರು.
ಚಂದ್ರಗುತ್ತಿ ಸಮೀಪದ ಮಂಗರ್ಶಿಕೊಪ್ಪ ಗ್ರಾಮದಲ್ಲಿ ಶ್ರೀ ಭೂತೇಶ್ವರ ದೇವರ 20ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಮತ್ತು ಕಲಾವಿದರ ಸಂಬಂಧ ತಾಯಿ ಮತ್ತು ಮಗುವಿನಂತೆ. ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನೋಡುವುದರಿಂದ ನೆಮ್ಮದಿ ಸಿಗುತ್ತದೆ. ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆಗಳ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುವ ಜವಾಬ್ದಾರಿ ನಮ್ಮೆಲ್ಲರದು ಎಂದರು.
ಗ್ರಾಮಸ್ಥರು ಹಾಗೂ ಯುವಕರು ಸಾಮಾಜಿಕ ನಾಟಕಗಳನ್ನು ಏರ್ಪಡಿಸಿ ಕಲೆಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಈ ಮೂಲಕ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಮಾತನಾಡಿ, ನಟನೆಯಲ್ಲಿ ತೊಡಗಲು ಶಿಸ್ತು ಮತ್ತು ಸಂಯಮ ಅಗತ್ಯ. ಯುವಕರು ರಂಗಭೂಮಿಯಲ್ಲಿ ತೊಡಗುವುದರಿಂದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ. ತಂತ್ರಜ್ಞಾನ ಇಷ್ಟು ಮುಂದುವರಿಸಿದರೂ ನಾಟಕ ಕಲೆ ಮೇಲಿನ ಪ್ರೀತಿ ಎಂದಿಗೂ ಮಾಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಹರೀಶಿ ಗ್ರಾಪಂ ಉಪಾಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷ ಉಮಾಪತಿ ನಾಯ್ಕ, ಗ್ರಾಮ ಸಮಿತಿ ಅಧ್ಯಕ್ಷ ಭರ್ಮಪ್ಪ, ಪಿಎಸಿಎಸ್ ಅಧ್ಯಕ್ಷ ಪಿ.ಶಿವಾನಂದ, ಬೆನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಮಾರ್ಯಪ್ಪ, ಪ್ರಮುಖರಾದ ಮಂಜು, ಧರ್ಮಪ್ಪ, ಹುಚ್ಚರಾಯಪ್ಪ, ಶಿವಪ್ಪ, ದೇವರಾಜ್ ಇತರರಿದ್ದರು.