ವಚನಗಳಿಂದ ಸಮಾಜ ಸುಧಾರಣೆ

vachana
ಚಿಕ್ಕಮಗಳೂರು ನಗರದ ಎಸ್.ಟಿ.ಜೆ ಕಾಲೇಜು ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಚಾರ್ಯೆ ಜೆ.ಕೆ.ಭಾರತಿ ಉದ್ಘಾಟಿಸಿದರು. ದೀಪಕ್ ದೊಡ್ಡಯ್ಯ, ಸೂರಿ ಶ್ರೀನಿವಾಸ್, ಸೋಮಶೇಖರ್, ರವೀಶ್ ಇತರರಿದ್ದರು.
Published on

ಚಿಕ್ಕಮಗಳೂರು: ಸಮಾಜ ಸುಧಾರಣೆಗಾಗಿ ವಚನಕಾರರು ವಚನಗಳನ್ನು ರಚನೆ ಮಾಡಿ ಕೊಡುಗೆಯಾಗಿ ನೀಡಿದ್ದಾರೆ. ವಚನಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಿದ ಕೀರ್ತಿ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಅವರ ಸಾಹಿತ್ಯ ಸೇವೆ ಅನನ್ಯವಾದದ್ದು ಎಂದು ಎಸ್‌ಟಿಜೆ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯೆ ಜೆ.ಕೆ.ಭಾರತಿ ಹೇಳಿದರು.

ನಗರದ ಎಸ್.ಟಿ.ಜೆ. ಕಾಲೇಜು ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಚನ ಸಾಹಿತ್ಯ ಸಂರಕ್ಷಣೆ, ಸಾಹಿತ್ಯ ಮತ್ತು ವಚನಕಾರರ ಬಗ್ಗೆ ಅಮೂಲಾಗ್ರವಾಗಿ ತಿಳಿಯಲು ಡಾ.ಫ.ಗು.ಹಳಕಟ್ಟಿಯವರ ಶ್ರಮದಿಂದ ಸಾಧ್ಯವಾಗಿದೆ. ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ತಾಳೆಗರಿ, ವಚನಗಂಟುಗಳನ್ನು ಸಂಗ್ರಹಿಸಿ ಗ್ರಂಥ ರೂಪದಲ್ಲಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಯುರೇಕಾ ಅಕಾಡೆಮಿಯ ಪ್ರಾಚಾರ್ಯ ದೀಪಕ್ ದೊಡ್ಡಯ್ಯ ಮಾತನಾಡಿ, ವಚನ ಸಾಹಿತ್ಯ ವಿಶ್ವದ ಅಗ್ರಗಣ್ಯ ಸಾಹಿತ್ಯವಾಗಿದೆ. ವಚನ ಸಾಹಿತ್ಯದ ಪರಿಕಲ್ಪನೆ ನಮ್ಮೆಲ್ಲರಿಗೂ ಕೂಡ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯ ಅಮೂಲ್ಯ ಕೊಡುಗೆ ನೀಡಿದೆ. ಸಮ ಸಮಾಜದ ಪರಿಕಲ್ಪನೆ ತಂದುಕೊಟ್ಟ ಕೀರ್ತಿ 12ನೇ ಶತಮಾನದ ಶಿವ ಶರಣರಿಗೆ ಸಲ್ಲುತ್ತದೆ. ಶರಣರ ಸಾಹಿತ್ಯದ ಸಾವಿರಾರು ವಚನಗಳನ್ನು ಡಾ.ಫ.ಗು.ಹಳಕಟ್ಟಿಯವರು ಸಂಗ್ರಹಿಸಿ ಸಂರಕ್ಷಣೆ ಮಾಡಿದ್ದಾರೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಬಸಪ್ಪ ವಚನ ಪಿತಾಮಹ ಫ. ಗು. ಹಳಕಟ್ಟಿಯರ ಕುರಿತು ಉಪನ್ಯಾಸ ನೀಡಿದರು.
ಎಸ್.ಟಿ. ಜೆ. ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಸಂತೋಷ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಿ.ಎಚ್.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಸಚಿನ್ ಸಿಂಗ್ ಮತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net