

ಸೊರಬ: ಹನ್ನೇರಡನೇ ಶತಮಾನದಲ್ಲಿ ಶಿವಶರಣರು ಸಮಾಜೋದ್ಧಾರಕ್ಕಾಗಿ ವಚನಗಳ ಮೂಲಕ ಕ್ರಾಂತಿ ಉಂಟುಮಾಡಿದ್ದರು ಎಂದು ಜಡೆ ಸಂಸ್ಥಾನ ಮಠದ ಕಿರಿಯ ಶ್ರೀ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದವಳ ಹುಣ್ಣಿಮೆ, 220ನೇ ಮಾಸಿಕ ಶಿವಾನುಭವ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬದುಕಿನ ಗುರಿ ಮುಟ್ಟಲು ಗುರುವಿನ ಮಾರ್ಗದರ್ಶನ ಅಗತ್ಯ. ಗುರುವಾದವರು ಸಂಕಷ್ಟವನ್ನು ದೂರ ಮಾಡಬೇಕು. ದುಃಖವನ್ನು ನಿವಾರಿಸಬೇಕು . ಅಕ್ಕಮಹಾದೇವಿಯು ಚನ್ನಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಪೂಜಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಳು. ಅವಳ ತತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ಅಕ್ಕನ ಬಳಗದ ಕಾರ್ಯದರ್ಶಿ ಜಯಮಾಲಾ ಮಾತನಾಡಿ, ಅಕ್ಕಮಹಾದೇವಿ 12ನೇ ಶತಮಾನದಲ್ಲಿ ಮಹಿಳಾ ಪರವಾಗಿ ದನಿಯೆತ್ತಿದ್ದರು. ಧರ್ಮವನ್ನು ಉಳಿಸಲು ನಾವೆಲ್ಲರೂ ಒಟ್ಟಾಗಿ ಹೋರಾಡಬೇಕಿದೆ ಎಂದು ತಿಳಿಸಿದರು.
ಅಕ್ಕಮಹಾದೇವಿಯ ಜೀವನ ಬೋಧನೆ ಕುರಿತು ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ ಉಪನ್ಯಾಸ ನೀಡಿದರು. ಅಕ್ಕನ ಜಯಂತಿ ಅಂಗವಾಗಿ ತೊಟ್ಟಿಲು ತೂಗುವ ಮೂಲಕ ನಾಮಕರಣ ಮಾಡುವ ಕಾರ್ಯಕ್ರಮ ನಡೆಯಿತು.
ಕಾರ್ಯದರ್ಶಿ ಶಿವಯೋಗಿ, ರೇವತಿ, ರೇಖಾ, ವೀಣಾ ನಾಯ್ಕ, ಅಕ್ಕನ ಬಳಗದವರು ಉಪಸ್ಥಿತರಿದ್ದರು.