ಪ್ರಚೋದನಕಾರಿ ಬರಹ: ಲೇಖಕ ಆಕಾರ್​ ಪಟೇಲ್​ ಟ್ವಿಟರ್​ ಖಾತೆ ರದ್ದು

akar patel
Published on

ಬೆಂಗಳೂರು: ಟ್ವಿಟ್ಚರ್​ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪ ಹೊತ್ತ ಅಮ್ನೆಸ್ಟಿ ಇಂಟರ್​ನ್ಯಾಷನಲ್ ಇಂಡಿಯಾದ ಮಾಜಿ ಕಾರ್ಯಕಾರಿ ನಿರ್ದೇಶಕ, ಲೇಖಕ ಆಕಾರ್ ಪಟೇಲ್ ಅವರ ಟ್ವಿಟರ್​ ಖಾತೆಯನ್ನು ಟ್ವಿಟರ್​ ರದ್ದು ಮಾಡಿದೆ.

ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಡಿಯೋವನ್ನು ಅಲ್ಲಿನ ಮಾಧ್ಯಮವೊಂದು ಟ್ವೀಟ್ ಮಾಡಿದೆ. ಇದನ್ನೂ ರಿಟ್ವೀಟ್ ಮಾಡಿದ್ದ ಆಕಾರ್ ಪಟೇಲ್, “ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಮತ್ತು ಮಹಿಳೆಯರಿಂದ ಭಾರತದಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯಬೇಕಿದೆ. ಇದರಿಂದಾಗಿ ಜಗತ್ತು ನಮ್ಮತ್ತ ಗಮನಿಸುತ್ತದೆ. ಪ್ರತಿಭಟನೆ ಒಂದು ಕರಕುಶಲ” ಎಂದು ಬರೆದುಕೊಂಡಿದ್ದಾರೆ.

ಇವರ ವಿರುದ್ಧ ಬೆಂಗಳೂರಿನ ಜೆಸಿ ನಗರ ಪೊಲೀಸರು ಇದೇ 5ರಂದು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.

ಲೇಖಕ ಆಕಾರ್ ಪಟೇಲ್ ಅವರ ಈ ಹೇಳಿಕೆಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕರೊನಾ ವೈರಸ್ ಹರಡುವ ಭೀತಿಯಿಂದಾಗಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಇಂಥ ಸಂದರ್ಭದಲ್ಲಿಯೂ ಅಮೆರಿಕ ಮಾದರಿಯಲ್ಲಿ ಭಾರತದಲ್ಲಿಯೂ ದಲಿತರು ಪ್ರತಿಭಟನೆ ಮಾಡುವಂತೆ ಹೇಳಿರುವುದು ಸರಿಯಲ್ಲ ಎಂದು ಹಲವರು ಕಿಡಿ ಕಾರಿದ್ದರು.

ಈ ಹಿಂದೆ ಕೂಡ ಆಕಾರ್​ ಪಟೇಲ್​ ಅನೇಕ ಸಂದರ್ಭದಲ್ಲಿ ಇದೇ ರೀತಿ ವಿವಾದಕ್ಕೆ ಸಿಲುಕಿದ್ದಾರೆ. ಅಯೋಧ್ಯೆ ವಿವಾದದ ಕುರಿತ ಸುಪ್ರೀಂಕೋರ್ಟ್​ ತೀರ್ಪಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖವಾಣಿ ಪತ್ರಿಕೆ ನ್ಯಾಷನಲ್ ಹೆರಾಲ್ಡ್ , ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಇವರು, 'ಅಯೋಧ್ಯೆಯ ತೀರ್ಪು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅನ್ನು ನೆನಪಿಸುತ್ತದೆ ಎಂದಿದ್ದರು. ಅಷ್ಟೇ ಅಲ್ಲದೇ ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ಬಯಸಿದ್ದನ್ನು ಭಾರತದ ಸುಪ್ರೀಂ ಕೋರ್ಟ್ ನೀಡಿದಂತಿದೆ ಎಂದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net