

ಬೆಂಗಳೂರು ಗ್ರಾಮಾಂತರ
ಕರೊನಾ ಲಾಕ್ಡೌನ್ ವೇಳೆ ಆರ್ಥಿಕ ನಷ್ಟ ಅನುಭವಿಸಿದ ಅಬಕಾರಿ ಇಲಾಖೆ, ಸರ್ಕಾರ ನೀಡಿರುವ ಗುರಿ ತಲುಪಲು ಈಗ ಅಕ್ರಮ ಮದ್ಯ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದೆಯೇ ಎಂಬ ಅನುಮಾನ ದಟ್ಟವಾಗಿದೆ.
ಜಿಲ್ಲೆಯ ಪ್ರತಿ ಗ್ರಾಮಗಳ ಗೂಡಂಗಡಿ, ದಿನಸಿ ಅಂಗಡಿ, ಖಾಸಗಿ ನೀರಿನ ಘಟಕಗಳಲ್ಲೂ ಮದ್ಯ ಅಕ್ರಮ ಮಾರಾಟ ಅವ್ಯಾಹತವಾಗಿದೆ. ಸಾರಾಯಿ ನಿಷೇಧದ ಬಳಿಕ ಎಂಎಸ್ಐಎಲ್ ಆರಂಭಕ್ಕೆ ಮುಂದಾದ ಸರ್ಕಾರದ ಕ್ರಮಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮಳಿಗೆ ಆರಂಭದ ಪ್ರಯತ್ನ ಸಫಲವಾಗಲಿಲ್ಲ. ಆದರೆ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಈ ನಿಲುವಿನಿಂದಲೇ ಅವಕಾಶ ಮಾಡಿಕೊಟ್ಟಂತಾಗಿದೆ.
2.3 ಲೀಟರ್ ಇದ್ದರೆ ಸಕ್ರಮ: ಅಬಕಾರಿ ನಿಯಮದನ್ವಯ ಖಾಸಗಿಯಾಗಿ 2.3 ಲೀಟರ್ ಮದ್ಯ ದಾಸ್ತಾನು ಮಾಡಿಕೊಳ್ಳಲು ಅವಕಾಶವಿದೆ. ಇದನ್ನೇ ದುರುಪಯೋಗ ಮಾಡಿಕೊಳ್ಳುವ ಮಾರಾಟಗಾರರು ಅಂಗಡಿಗಳಲ್ಲಿ ಇಷ್ಟಿಷ್ಟೆ ದಾಸ್ತಾನು ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಅಬಕಾರಿ ಇಲಾಖೆ ಇಷ್ಟು ದಾಸ್ತಾನು ಇದ್ದರೆ ಕಾನೂನು ಕ್ರಮಕ್ಕೆ ಅವಕಾಶವಿಲ್ಲ ಎಂದು ಜಾರಿಕೊಳ್ಳುವ ಜಾಣತನ ತೋರಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೆರಳೆಣಿಕೆ ಕೇಸುಗಳು: ಜಿಲ್ಲೆಯಲ್ಲಿ ವರ್ಷಕ್ಕೆ 40 ರಿಂದ 50 ಕೇಸುಗಳು ದಾಖಲಾಗುತ್ತವೆ. ಆದರೆ ವಾಸ್ತವವಾಗಿ ಜಿಲ್ಲೆಯ ನಾಲ್ಕು ತಾಲೂಕುಗಳ ಭಾಗಶಃ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೆ ಸಾಗಿದೆ. ಸರ್ಕಾರ ನಿಗದಿಪಡಿಸಿದ ಮಾರಾಟ ಗುರಿ ತಲುಪಿದರೆ ಸಾಕು ಎಂಬಂತೆ ಅಬಕಾರಿ ಇಲಾಖೆ ಅಧಿಕಾರಿಗಳೂ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರದ ಮೃದು ಧೋರಣೆ: ಮದ್ಯ ಅಕ್ರಮ ಮಾರಾಟದ ಬಗ್ಗೆ ಸರ್ಕಾರವೂ ಮೃದುಧೋರಣೆ ಅನುಸರಿಸುತ್ತಿದೆ. ಸರ್ಕಾರದ ಪ್ರಮುಖ ಆದಾಯದ ಮೂಲವಾಗಿರುವುದರಿಂದ ಅಬಕಾರಿ ಇಲಾಖೆಯೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪರಿಣಾಮ ಗ್ರಾಮೀಣ ಪ್ರದೇಶಗಳು ಮದ್ಯ ಅಕ್ರಮ ಮಾರಾಟದ ತಾಣಗಳಾಗಿವೆ. ರೈತರು, ಕೂಲಿ ಕಾರ್ಮಿಕರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಸರ್ಕಾರದ ಬೊಕ್ಕಸ ತುಂಬಿಸುವ ಉಮೇದಿಗೆ ಬಿದ್ದಿರುವ ಅಧಿಕಾರಿಗಳು ಅಕ್ರಮ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಕೆಲವು ಕಡೆಗಳಲ್ಲಿ ಅಮಲು ಬರುವಂತ ರಾಸಾಯನಿಕ ಮಿಶ್ರಣ ಮಾಡಿ ಮದ್ಯ ತಯಾರಿಸುವ ದಂಧೆಯೂ ಸಕ್ರಿಯವಾಗುತ್ತಿರುವ ಆರೋಪ ಕೇಳಿಬರುತ್ತಿದೆ. ಅಕ್ರಮ ಮದ್ಯ ಮಾರಾಟಗಾರರು ಇತರ ಮದ್ಯಗಳೊಂದಿಗೆ ರಾಸಾಯನಿಕ ಮಿಶ್ರಿತ ಮದ್ಯ ಮಾರಾಟ ಮಾಡುತ್ತಿರುವ ಆತಂಕಕಾರಿ ಬೆಳವಣಿಗೆಗೆ ಜಿಲ್ಲೆಯಲ್ಲಿ ಅವಕಾಶ ನೀಡಿದಂತಾಗಿದೆ.
ಅಕ್ರಮವಾಗಿ ಮದ್ಯ ಮಾರಾಟದ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಇದಕ್ಕಾಗಿಯೇ ಆಯಾ ವಲಯದ ಅಬಕಾರಿ ಇನ್ಸ್ಪೆಕ್ಟರ್ಗಳ ವಿಶೇಷ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರವೀಂದ್ರ, ಅಬಕಾರಿ ಡಿಸಿ ಬೆಂ.ಗ್ರಾಮಾಂತರ