Allu Raghu - ಆ್ಯಕ್ಷನ್​ ಕಟ್ ಹೇಳಲು ರೆಡಿಯಾದ ವೈರಲ್​ ಸ್ಟಾರ್​ ಅಲ್ಲು ರಘು

ಅಲ್ಲು ರಘು
ಅಲ್ಲು ರಘು
Published on
Allu Raghu -
ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿರುವ ಹಲವು ಸೋಷಿಯಲ್​ ಮೀಡಿಯಾ ಇನ್​ ಫ್ಲೂಯೆನ್ಸರ್​ಗಳು, ವೈರಲ್​ ಸ್ಟಾರ್​ಗಳು ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹಾಡು, ಡಾನ್ಸ್​, ನಟನೆ ಅಂತ ಸಿನಿಮಾಗಳಲ್ಲೂ ಬಿಜಿಯಾಗಿದ್ದಾರೆ. ಇದೀಗ ಮತ್ತೊಬ್ಬ ಸೋಷಿಯಲ್​ ಮೀಡಿಯಾ ಸೆಲೆಬ್ರಿಟಿ ಅಲ್ಲು ರಘು ಚಂದನವನಕ್ಕೆ ನಿರ್ದೇಶಕನಾಗಿ ಪದಾರ್ಪಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. "ಮೊದಲಿನಿಂದಲೂ ನಿರ್ದೇಶನದ ಬಗ್ಗೆ ತೀವ್ರ ಆಸಕ್ತಿ ಇತ್ತು. ನಟಿಸಬೇಕು ಅಂತ ಅನ್ನಿಸುತ್ತಿತ್ತು. ಆದರೆ, ಜವಾಬ್ದಾರಿಗಳು ಹೆಚ್ಚಿದ್ದವು. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಸಿಕ್ಕಿತ್ತು. ಹೀಗಾಗಿ ನಿರ್ದೇಶನದತ್ತ ಹೆಚ್ಚು ಗಮನ ಹರಿಸಿದೆ. "ಸಾವಿರ ರೂಪಾಯಿಗೆ ಸ್ವರ್ಗ', "ಒಂದೊಪ್ಪತ್ತು' ಎಂಬ ಎರಡು ಸಾಮಾಜಿಕ ಕಳಕಳಿಯಿರುವ ಕಿರುಚಿತ್ರಗಳನ್ನು ನಿರ್ದೇಶಿಸಿದೆ. ಈಗ ಸಿನಿಮಾ ಮಾಡಲು ಕೆಲ ನೈಜ ವಿಷಯಗಳೂ ಇರುವ ಫಿಕ್ಷನಲ್​ ಕಾಮಿಡಿ ಸ್ಕ್ಯಾಮ್​​ ಡ್ರಾಮಾ ಕಥೆ ರೆಡಿ ಮಾಡಿಕೊಂಡಿದ್ದೇನೆ. ಇದೇ ಅಕ್ಟೋಬರ್​ನಲ್ಲಿ ಶೂಟಿಂಗ್​ಗೆ ತೆರಳಲಿದ್ದು, 40ರಿಂದ 45 ದಿನಗಳ ಕಾಲ ಬೆಂಗಳೂರು, ಮೈಸೂರು ಮತ್ತು ಕೇರಳದಲ್ಲಿ ಚಿತ್ರೀಕರಣ ನಡೆಸಿ, ಡಿಸೆಂಬರ್​ ಹೊತ್ತಿಗೆ ಕುಂಬಳಕಾಯಿ ಒಡೆಯುವ ಪ್ಲ್ಯಾನ್​ ಇದೆ. ಅದಕ್ಕಾಗಿ ಸದ್ಯ ಪ್ರಿ-ಪ್ರೊಡಕ್ಷನ್​ ಕೆಲಸಗಳಲ್ಲಿ ಬಿಜಿಯಾಗಿದ್ದೇವೆ. ಚಿತ್ರದ ಶೀರ್ಷಿಕೆ, ನಾಯಕ, ತಾರಾಗಣ ಸೇರಿ ಉಳಿದ ಮಾಹಿತಿಯನ್ನು ಕೆಲವೇ ದಿನಗಳಲ್ಲಿ ಬಹಿರಂಗಪಡಿಸಲಿದ್ದೇನೆ. ಕನ್ನಡದ "ಕೆಟಿಎಂ' ಚಿತ್ರ ಸೇರಿ ಪಂಜಾಬ್​ನ ಹಲವು ಮ್ಯೂಸಿಕ್​ ಆಲ್ಬಂಗಳಿಗೆ ಸಂಗೀತ ನೀಡಿರುವ, ಎ.ಆರ್​.ರೆಹ್ಮಾನ್​ ತಂಡದಲ್ಲಿ ಗುರುತಿಸಿಕೊಂಡಿರುವ ಕನ್ನಡಿಗ ಚೇತನ್​ ರಾವ್​ ಸಂಗೀತ ನೀಡಲಿದ್ದಾರೆ. ನಮ್ಮಲ್ಲಿರುವ ಮೂಲ ಸಾಹಿತ್ಯ ಬಳಸಿ ಅದಕ್ಕೆ ಆಧುನಿಕ ಸ್ಪರ್ಶ ನೀಡಲಿದ್ದು, ಮೂರು ಹಾಡುಗಳಲ್ಲೂ ಹೊಸತನ ಕಾಣಬಹುದು. "ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಹರ್ಷ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬರಲಿದೆ' ಎಂದು ಮಾಹಿತಿ ನೀಡುತ್ತಾರೆ.

"ನವಗ್ರಹ 2' ಮಾಡಿದರೆ ಹೇಗೆ?

ಇನ್ನು ಚಿತ್ರದ ಕಂಟೆಂಟ್​ ಬಗ್ಗೆ ಮಾಹಿತಿ ನೀಡುವ ರಘು, "ಒಂದು ಕೊಲೆ ನಡೆದಿರುತ್ತದೆ, ಕೊಲೆಗಾರ ಯಾರು ಅಂತ ಗೊತ್ತಿರುವುದಿಲ್ಲ. ಹಾಗೇ ಒಂದು ವಸ್ತು ಕಳ್ಳತನವಾಗಿರುತ್ತದೆ, ಅದನ್ನು ಕದ್ದವರು ಯಾರು ಅಂತ ಗೊತ್ತಿರುವುದಿಲ್ಲ. "ನವಗ್ರಹ' ಸಿನಿಮಾದಂತೆಯೇ "ನವಗ್ರಹ 2' ಮಾಡಿದರೆ ಹೇಗೆ? ಎಂಬ ಲೈನ್​ನಲ್ಲಿ ನೈಜ ಘಟನೆಯಿಂದ ಸ್ಫೂರ್ತಿ ಪಡೆದು, ಅದಕ್ಕೆ ಕಾಲ್ಪನಿಕ ಅಂತ್ಯ ನೀಡುವ ಪ್ರಯತ್ನ ಈ ಚಿತ್ರದ ಮೂಲಕ ಮಾಡಲಿದ್ದೇನೆ. ಸಮಾಜದ ಮೇಲೆ ಪರಿಣಾಮ ಬೀರುವ ವಿಷಯವನ್ನು ಹಾಸ್ಯದ ಮೂಲಕ ಹೇಳುತ್ತಿದ್ದೇವೆ. ಗಂಭೀರ ವಿಷಯಗಳನ್ನು ನಗಿಸುತ್ತ ದಾಟಿಸಿದರೆ, ಪರಿಣಾಮಕಾರಿಯಾಗಿರುತ್ತದೆ' ಎಂದು ಹೇಳಿಕೊಳ್ಳುತ್ತಾರೆ. ಹಾಗೇ ಈಗಾಗಲೇ ಕಲ್ಟ್​, ರೊಮ್ಯಾಂಟಿಕ್​, ಮದರ್​ ಸೆಂಟಿಮೆಂಟ್​... ಹೀಗೆ ವಿವಿಧ ಜಾನರ್​ಗಳ 10 ಕಥೆಗಳನ್ನು ರಘು ರೆಡಿ ಮಾಡಿಕೊಂಡಿದ್ದಾರಂತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net