

ಮಡಿಕೇರಿ:
ಕೈಯಲ್ಲಿ ಮೊಬೈಲ್, ಉಚಿತ ಡಾಟಾ ಇದೆ ಎಂದು ದಿನಪೂರ್ತಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವವರು ಸ್ವಲ್ಪ ಎಚ್ಚರ ತಪ್ಪಿ ನಡೆದುಕೊಂಡರೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಬೇಕಾಗಬಹುದು. ಸಾಮಾಜಿಕ ಜಾಲತಾಣದ ಎಲ್ಲಾ ಚಟುಚಟಿಕೆಗಳ ಮೇಲೂ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಇದಕ್ಕಾಗಿಯೇ ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ ಪ್ರತಿ ಪೊಲೀಸ್ ಠಾಣೆಯಲ್ಲೂ ಪರಿಣಿತ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಾನೂನು ವಿರೋಧಿಯಾಗಿ ನಡೆದುಕೊಂಡರೆ ಪ್ರಕರಣ ದಾಖಲಾಗುವುದಂತೂ ಖಚಿತ.
ಫೇಸ್‌ಬುಕ್, ವಾಟ್ಸಪ್, ಎಕ್ಸ್ (ಟ್ವಿಟರ್), ಇನ್ಸ್ಟಾಗ್ರಾಂ, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಿದೆ. ಸ್ಮಾರ್ಟ್ಫೋನ್ ಹೊಂದಿರುವವರು ಕನಿಷ್ಠ ಒಂದಾದರೂ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದುಕೊಂಡು ಸಕ್ರಿಯವಾಗಿರುವುದು ಸಾಮಾನ್ಯ ಎಂಬAತಾಗಿದೆ. ಈ ಸಾಮಾಜಿಕ ಜಾಲತಾಣಗಳು ದೈನಂದಿನ ಜೀವನಕ್ಕೆ ಅನುಕೂಲಕರವಾಗಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದುರ್ಬಳಕೆ ಆಗುತ್ತಿರುವುದು ಕೂಡ ಕಂಡು ಬರುತ್ತಿದೆ. ಈ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿತ್ತು.
ಸುಳ್ಳುಸುದ್ದಿ, ಕಪೋಲಕಲ್ಪಿತ ವಾರ್ತೆಗಳು, ಪ್ರಚೋದನಾಕಾರಿ ಸಂದೇಶಗಳು, ದ್ವೇಷ ಭಾಷಣಗಳನ್ನು ಕ್ಷಣಾರ್ಧದಲ್ಲಿ ಜಗತ್ತಿನಾದ್ಯಂತ ಹರಡಿಸುವ ಸಾಮರ್ಥ್ಯ ಸಾಮಾಜಿಕ ಜಾಲತಾಣಗಳು ಹೊಂದಿವೆ. ಬಹಳಷ್ಟು ಕೌಟುಂಬಿಕ ಕಲಹಗಳು, ಜನಾಂಗೀಯ ಸಂಘರ್ಷಗಳು, ಕೋಮು ಗಲಭೆಗಳನ್ನು ಹುಟ್ಟುಹಾಕಿ ದೊಡ್ಡ ಪ್ರಮಾಣದ ಕಷ್ಟನಷ್ಟಗಳಿಗೆ ಕಾರಣವಾದ ಕುಖ್ಯಾತಿಯನ್ನೂ ಸಾಮಾಜಿಕ ಜಾಲತಾಣಗಳು ಪಡೆದುಕೊಂಡಿವೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಪ್ರತಿಯೊಂದನ್ನೂ ಸೂಕ್ಷö್ಮವಾಗಿ ಗಮನಿಸುತ್ತಿರುತ್ತದೆ.
ಫೇಸ್‌ಬುಕ್, ವಾಟ್ಸಪ್, ಎಕ್ಸ್ (ಟ್ವಿಟರ್), ಇನ್ಸ್ಟಾಗ್ರಾಂ, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ಈಗಾಗಲೇ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕ (ಎಸ್‌ಎಂಎAಸಿ) ಆರಂಭಿಸಿದೆ. ಪೊಲೀಸ್ ಠಾಣಾ ಹಂತದಲ್ಲೂ ಇಂಥ ಘಟಕಗಳು ಕಾರ್ಯಾಚರಿಸುತ್ತಿವೆ. ಈ ಘಟಕಗಳಿಗೆ ಸೂಕ್ತ ತರಬೇತಿ ಪಡೆದಿರುವ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಆಗುವ ಸುಳ್ಳುಸುದ್ದಿ, ಕಪೋಲಕಲ್ಪಿತ ವಾರ್ತೆಗಳು, ಪ್ರಚೋದನಾಕಾರಿ ಸಂದೇಶಗಳು, ದ್ವೇಷ ಭಾಷಣಗಳ ಮೇಲೆ ನಿರಂತರ ನಿಗಾ ಇಡಲಾಗಿರುತ್ತದೆ.
ಸಾಮಾಜಿಕ ಜಾಲತಾಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಬAಧಿಸಿದAತೆ 2023ರಿಂದ ಇಲ್ಲಿಯ ತನಕ ರಾಜ್ಯದಲ್ಲಿ ಒಟ್ಟು 2018 ಪ್ರಕರಣಗಳು ದಾಖಲಾಗಿದೆ. 2023ರಲ್ಲಿ 238, 2024ರಲ್ಲಿ 273 ಹಾಗೂ ಈ ವರ್ಷ ಇಲ್ಲಿಯ ತನಕ 65 ಸೇರಿದಂತೆ 576 ಸ್ವಯಂ ಪ್ರೇರಿತ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. 2023ರಲ್ಲಿ 640, 2024ರಲ್ಲಿ 618 ಹಾಗೂ ಈ ವರ್ಷ ಇಲ್ಲಿಯ ತನಕ 85 ಸೇರಿದಂತೆ ಒಟ್ಟು 1343 ಇತರ ಪ್ರಕರಣಗಳು ದಾಖಲಾಗಿದೆ. ಕೊಡಗಿನಲ್ಲಿ 3 ವರ್ಷಗಳಲ್ಲಿ ಒಟ್ಟು 56 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. 2023ರಲ್ಲಿ 6, 2024ರಲ್ಲಿ 28 ಹಾಗೂ ಈ ವರ್ಷ ಇಲ್ಲಿಯ ತನಕ 3 ಸೇರಿದಂತೆ ಒಟ್ಟು 37 ಸ್ವಯಂಪ್ರೇರಿತ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರೆ, 2023ರಲ್ಲಿ 6, 2024ರಲ್ಲಿ 6 ಹಾಗೂ ಈ ವರ್ಷ ಇಲ್ಲಿಯ ತನಕ 7 ಸೇರಿದಂತೆ ಒಟ್ಟು 19 ಇತರ ಪ್ರಕರಣಗಳು ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಪೊಲೀಸ್ ಇಲಾಖೆ ಸಮರವನ್ನೇ ಸಾರಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಸಾಮರಸ್ಯ ಹಾಳು ಮಾಡುವವರ ವಿರುದ್ಧ ಭದ್ರತಾ ಕಾಯ್ದೆಯಡಿ ಸಂಬAಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಇದರ ಜತೆಯಲ್ಲೇ ಪೊಲೀಸ್ ಅಧಿಕೃತ ಖಾತೆಗಳಾದ ಎಕ್ಸ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್‌ಗಳ ಮೂಲಕ ಸಾರ್ವಜನಿಕರಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಬೇಜವಾಬ್ದಾರಿಯಿಂದ ಸಮಾಜದ ಸಾಮರಸ್ಯ ಹಾಳುಮಾಡಿ ಗೊಂದಲ ಹುಟ್ಟುಹಾಕುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಇಂಥ ಸಮಾಜ ವಿರೋಧಿ ಶಕ್ತಿಗಳಿಂದ ಸಮಾಜದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕವಾಗಿಯೂ ಅರಿವು ಕಾರ್ಯಕ್ರಮಗಳನ್ನು ಕೈಗೊಂಡು ಜಾಗೃತಿ ಮೂಡಿಸುವ ಕೆಲಸವನ್ನೂ ಪೊಲೀಸ್ ಇಲಾಖೆ ಮೂಲಕ ಮಾಡಲಾಗುತ್ತಿದೆ.
ಸುಳ್ಳು ಸುದ್ದಿಗಳ ಬಗ್ಗೆ ಕೆಎಸ್‌ಪಿ ಫ್ಯಾಕ್ಟ್ ಚೆಕ್ ಆ್ಯಪ್ ಮೂಲಕ ನಿಜಾಂಶ ಕಂಡುಹಿಡಿದು ನೈಜ ಮಾಹಿತಿಯನ್ನು ಇಲಾಖೆಯ ಅಧಿಕೃತ ಜಾಲತಾಣದ ಮೂಲಕ ಹಂಚಿಕೊAಡು ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವುದಲ್ಲದೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಪೊಲೀಸರ ನಿಗಾವಣೆ ಸಂದರ್ಭದಲ್ಲಿ ಕಂಡುಬರುವ ಸಮಾಜದ ಸ್ವಾಸ್ಥö್ಯ ಹಾಳು ಮಾಡುವ ಪೋಸ್ಟ್ಗಳನ್ನು ಕೂಡಲೇ ಅಧಿಕಾರಿಗಳು ಮತ್ತು ರಾಜ್ಯ ಸಾಮಾಜಿಕ ಜಾಲತಾಣ ನಿಗಾ ಘಟಕದ ಗಮನಕ್ಕೆ ತರಲಾಗುತ್ತದೆ. ಇವರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ.
ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರ ನಿಗಾವಣೆಯಿಂದ ಖಾಸಗಿತನದ ಹಕ್ಕುಗಳ ಉಲ್ಲಂಘನೆಯ ಪ್ರಶ್ನೆ ಕಾಣಿಸಿಕೊಂಡಿದೆ. ಇಂಥ ಕ್ರಮಗಳಿಂದ ಕೆಲವೊಂದು ತೀರಾ ಖಾಸಗಿ ಮಾತುಕತೆಗಳು ಮೂರನೇ ಕಿವಿ ಅಥವಾ ಕಣ್ಣಿಗೆ ಬೀಳುವ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತೆ ಇಲ್ಲ. ಕರೆಗಳ ಧ್ವನಿ ಮುದ್ರಣದ ದುರುಪಯೋಗ ಆಗುತ್ತಿರುವ ದೂರುಗಳೂ ಇರುವುದರಿಂದ ಸಾಮಾಜಿಕ ಜಾಲತಾಣಗಳ ಮೇಲಿನ ಮೇಲ್ವಿಚಾರಣೆ ಕೂಡ ಇದೇ ದಾರಿ ಹಿಡಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಫೇಸ್‌ಬುಕ್, ವಾಟ್ಸಪ್, ಎಕ್ಸ್ (ಟ್ವಿಟರ್), ಇನ್ಸ್ಟಾಗ್ರಾಂ, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ದುರುಪಯೋಗ ಪ್ರಕರಣಗಳು ಇತ್ತೀಚೆಗೆ ಜಾಸ್ತಿ ಆಗುತ್ತಿದೆ. ಈ ಮೂಲಕ ಸೈಬರ್ ಅಪರಾಧಗಳಲ್ಲೂ ಹೆಚ್ಚಳ ಕಂಡುಬರುತ್ತಿದೆ. ಹಾಗಾಗಿ ಇಂಥ ಚಟುವಟಿಕೆಗಳ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ಈಗಾಗಲೇ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕ (ಎಸ್‌ಎಂಎAಸಿ) ಆರಂಭಿಸಿದೆ. ಪೊಲೀಸ್ ಠಾಣಾ ಹಂತದಲ್ಲೂ ಇಂಥ ಘಟಕಗಳು ಕಾರ್ಯಾಚರಿಸುತ್ತಿವೆ. ಈ ಘಟಕಗಳಿಗೆ ಸೂಕ್ತ ತರಬೇತಿ ಪಡೆದಿರುವ ಸಿಬ್ಬಂದಿ ನೇಮಕ ಮಾಡಲಾಗಿದೆ.
ಡಾ. ಜಿ. ಪರಮೇಶ್ವರ, ಗೃಹ ಸಚಿವ
ಸಾಮಾಜಿಕ ಜಾಲತಾಣಗಳಿಂದ ಅನುಕೂಲ ಇದೆ. ಆದರೆ ಇದನ್ನು ಬಳಸಿಕೊಳ್ಳುವುದರ ಮೇಲೆ ಒಳಿತು ಕೆಡಕುಗಳು ನಿಂತಿದೆ. ಸಾಮಾಜಿಕ ಜಾಲತಾಣಗಳ ದುರುಪಯೋಗ ಅಕ್ಷಮ್ಯ. ಇದರಿಂದ ದೊಡ್ಡ ದೊಡ್ಡ ಅನಾಹುತಗಳೂ ಆಗಿಬಿಡಬಹುದು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿರುವುದು ಉತ್ತಮ ಬೆಳವಣಿಗೆ. ಬಳಕೆದಾರರು ಇವುಗಳನ್ನು ಉತ್ತಮ ಕೆಲಸಗಳಿಗೆ ಮಾತ್ರ ಬಳಸುವಂತಾಗಲಿ.
ಹೇಮಂತ್ ಪಾರೇರ, ಬರಹಗಾರ, ಯಡವನಾಡು