ರುದ್ರಮಂತ್ರಗಳಲ್ಲಿ ಸಾಮಾಜಿಕ ಚಿತ್ರಣ

shiva feb 19 2020
Published on

ಓಂ ನಮಸ್ತೇ ಅಸ್ತು ಭಗವನ್ವಿಶ್ವೇಶ್ವರಾಯ ಮಹಾದೇವಾಯ ತ್ರ್ಯಬಕಾಯ ತ್ರಿಪುರಾಂತಕಾಯ ತ್ರಿಕಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಮೃತ್ಯುಂಜಯಾಯ ಸರ್ವೆಶ್ವರಾಯ ಸದಾಶಿವಾಯ ಶಂಕರಾಯ ಶ್ರೀಮನ್ಮಹಾದೇವಾಯ ನಮಃ |

ಸಾಮಾನ್ಯವಾಗಿ ಪ್ರಾರ್ಥನೆಗಳಲ್ಲಿ ಹಲವು ವಿಧ. ಮೊದಲನೆಯದು ನಮ್ಮ ಬೇಡಿಕೆಗಳನ್ನು ಪೂರೈಸಲು ಮಂಡಿಸುವ ಮನವಿ, ನಮ್ಮಲ್ಲಿ ಈಗಾಗಲೇ ಇರುವ ಸಂಪತ್ತು ಮತ್ತು ಸಾಧನಗಳನ್ನು ರಕ್ಷಿಸಲು ಪ್ರಾರ್ಥನೆ. ಬದುಕಿನ ಹಾದಿಯಲ್ಲಿ ಬರುವ ಸಮಸ್ಯೆಗಳ ನಿವಾರಣೆಗೆ ಸಲ್ಲಿಸುವ ಕೋರಿಕೆ.

ಆಧ್ಯಾತ್ಮಿಕವಾಗಿ ಬಹುಶ್ರುತವಾದ ರುದ್ರಪ್ರಶ್ನ, ಅಥವಾ ರುದ್ರನಮಕ-ಚಮಕಗಳನ್ನು ಪಠಿಸುವಾಗ, ಮತ್ತು ಕೇಳುವಾಗ ಮನಸ್ಸಿನಲ್ಲಿ ಒಂದು ಅನಿರ್ವಚನೀಯವಾದ ಆನಂದದ ಅನುಭೂತಿ ಮನಸ್ಸಿಗೆ ಆಗುತ್ತದೆ. ಕಾರಣ ಮಂತ್ರಗಳ ಉಚ್ಚಾರಣೆಯ ಲಯ ಮನಸ್ಸಿನ ಆನಂದದ ಭಾವವನ್ನು ಉದ್ದೀಪಿಸುತ್ತದೆ.

ಈ ಮಂತ್ರಗಳನ್ನು ಪಠಿಸುವಾಗ ಮತ್ತು ಕೇಳುವಾಗ ಆಸ್ತಿಕರ ಮನಸ್ಸಿನಲ್ಲಿ ಏಳುವ ಆನಂದ ರಸಾನುಭೂತಿಯ ಆಚೆಗೆ ಈ ಮಂತ್ರಗಳಲ್ಲಿ ಮತ್ತೇನೋ ಇದೆ ಎಂಬ ಆಶಯದಲ್ಲಿ ಗಮನಿಸುತ್ತ ಸಾಗಿದಾಗ ವೇದಕಾಲದಲ್ಲಿ ಇದ್ದ ಸಮಾಜದ ಒಟ್ಟಾರೆ ಚಿತ್ರಣವು ಇಲ್ಲಿ ಕಾಣಸಿಗುತ್ತದೆ. ಅದರ ಹೊರತಾಗಿ ಇಲ್ಲಿ ಮೊದಲಿಗೆ ಗಮನಿಸಬೇಕಾದದ್ದು ಈ ಮಂತ್ರಗಳಲ್ಲಿ ಬಳಸಿರುವ ಭಾಷೆ. ಅತ್ಯಂತ ಸಂಸ್ಕೃರಿತವಾದ ಸಂಸ್ಕೃತಭಾಷೆಯನ್ನು ಈ ಮಂತ್ರಗಳಲ್ಲಿ ಬಳಸಲಾಗಿರುವುದು ವೇದ್ಯ. ಸಂಸ್ಕೃತಭಾಷೆಯು ವೇದಗಳಷ್ಟೇ ಪ್ರಾಚೀನ ಎಂಬುದಕ್ಕೆ ಮುಕ್ತ ಮನಸ್ಸಿನ ಸಂಶೋಧಕರಿಗೆ ಈ ಮಂತ್ರಗಳ ಪಠ್ಯ ಆಕರವಾಗಬಲ್ಲುದು.

ಆ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ಅಂಶಗಳಲ್ಲಿಯೂ ರುದ್ರನನ್ನು ಪ್ರತಿಪಾದಿಸಿರುವುದು ಈ ಮಂತ್ರಗಳಲ್ಲಿ ಕಾಣಸಿಗುತ್ತದೆ. ಅಲ್ಲಿ ಪ್ರತಿಪಾದಿಸಿರುವ ಅಂಶಗಳು ಆಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಧಾನವಾಗಿ ಇರಲೇಬೇಕು ಎಂಬ ನೆಲೆಯಲ್ಲಿ ಗಮನಿಸಿದಾಗ ನಮಗೆ ಅಲ್ಲಿನ ಒಟ್ಟಾರೆ ಚಿತ್ರಣವು ಕಂಡುಬರುತ್ತದೆ.

‘ನಮ ಇರಿಣ್ಯಾಯ ಚ ಪ್ರಪಥ್ಯಾಯಚ, ನಮೋ ಗೋಷ್ಠ್ಯಾಯ ಚ ಗೃಹ್ಯಾಯ ಚ, ನಮಸ್ತಲ್ಪಾ ್ಯು ಚ ಗೇಹ್ಯಾಯ ಚ ನಮಃ ಕಾಟ್ಯಾಯ ಚ ಗಹ್ವರೇಷ್ಠಾಯ ಚ, ನಮಃ ಶುಷ್ಕ್ಯಾಯ ಚ ಹರಿತ್ಯಾಯ ಚ...’ ಎಂಬ ಚಮಕ ಸ್ತುತಿಗಳನ್ನು ಗಮನಿಸಿದಾಗ ಜನವಸತಿಯ ವಿಭಿನ್ನ ನೆಲೆಗಳು ಕಾಣಸಿಗುತ್ತವೆ. ‘ಬಂಜರು ಭೂಮಿ, ಸವುಳು ನೀರಿನ ನೆಲ, ಫಲವತ್ತಾದ ಕ್ಷೇತ್ರಗಳು, ದನದ ಕೊಟ್ಟಿಗೆಗಳು, ಮನೆಗಳು, ತಲ್ಪಗಳು, ಅರಮನೆಗಳು, ದುರ್ಗಮವಾದ ಅರಣ್ಯಗಳಲ್ಲಿ, ಗುಹೆಗಳಲ್ಲಿ, ಬಯಲುಸೀಮೆಯಲ್ಲಿ, ಹರಿತ್ತಿನಿಂದ ಕೂಡಿ ಆರ್ದ್ರಭೂಮಿಯಲ್ಲಿ ವಾಸಮಾಡುತ್ತಿರುವವನಿಗೆ ನಮಸ್ಕಾರ’ ಎಂದು ಮಂತ್ರ ಹೇಳುತ್ತದೆ. ಎಲ್ಲ ರೀತಿಯ ವಾತಾವರಣದಲ್ಲಿ ಬದುಕಬಲ್ಲಷ್ಟು ಪರಿಣತಿಯನ್ನು, ವ್ಯವಸ್ಥೆಗಳನ್ನು ನಮ್ಮ ಸಾಮಾಜಿಕ ವ್ಯವಸ್ಥೆಯು ರೂಪಿಸಿಕೊಂಡಿತ್ತು ಎಂಬುದನ್ನು ಗಮನಿಸಬಹುದು.

‘ನಮೋ ಅಶ್ವೇಭ್ಯೋ ಅಶ್ವಪತಿಭ್ಯಶ್ಚ ವೋ ನಮಃ, ನಮೋ ರಥೇಭ್ಯೋ ರಥಪತಿಭ್ಯಶ್ಚ ವೋ ನಮಃ, ನಮಃ ಶ್ವಭ್ಯಃ ಶ್ವಪತಿಭ್ಯಶ್ಚ ವೋ ನಮಃ...’ ಎಂಬ ಮಂತ್ರಗಳನ್ನು ಗಮನಿಸಿದಾಗ ಕುದುರೆಗಳನ್ನು ಆ ಕಾಲಘಟ್ಟದಲ್ಲಿಯೇ ಸಾಕಲಾಗುತ್ತಿತ್ತು. ಮತ್ತು ಬೇಟೆ ಆಡುವುದಕ್ಕಾಗಿಯೇ ಬೇಟೆನಾಯಿಗಳನ್ನು ಸಾಕಲಾಗುತ್ತಿತ್ತು. ರಥದ ಮತ್ತು ಚಕ್ರಗಳ ಪರಿಕಲ್ಪನೆ ನಮಗೆ ಕಾಲಾಂತರದಲ್ಲಿ ಬೇರೆಲ್ಲಿಂದಲೋ ಆಮದಾದ ಜ್ಞಾನ ಎಂದು ಪ್ರತಿಪಾದಿಸುವ ಜನರು ಗಮನಿಸಬೇಕಾದ ಅಂಶವೆಂದರೆ ರಥಗಳ ಪರಿಕಲ್ಪನೆ ಮತ್ತು ರಥಗಳ ಮಾಲೀಕರು ಇದ್ದರು ಎಂಬುದು ಈ ಮಂತ್ರಗಳ ಮೂಲಕ ಕಾಣಸಿಗುತ್ತದೆ. ಮುಂದುವರಿದು ‘ನಮೋ ರಥಿಭ್ಯೊà—ರಥೇಭ್ಯಶ್ಚ ವೋ ನಮಃ |’ ಎಂಬುದನ್ನು ಗಮನಿಸಿದಾಗ ರಥಗಳನ್ನು ಹೊಂದಿರುವ ಮತ್ತು ಹೊಂದಿಲ್ಲದ ಜನರಿಬ್ಬರೂ ಇದ್ದರು ಎಂಬುದನ್ನು ಇಂದು ಸಮಾಜದಲ್ಲಿ ಕಾರುಗಳ ಮಾಲೀಕರ ಮತ್ತು ಮಾಲೀಕರಲ್ಲದವರ ವಿನ್ಯಾಸ ಗಮನಿಸಿದರೆ ತಿಳಿಯುತ್ತದೆ.

‘ನಮಃ ಪುಂಜಿಷ್ಟೇಭ್ಯೋ ನಿಷಾಧೇಭ್ಯಶ್ಚ ವೋ ನಮಃ...’ ಅಂದರೆ ‘ಹಕ್ಕಿಗಳನ್ನು ಪಂಜರಗಳಲ್ಲಿಟ್ಟು ಸಾಕುವವರು’ ಎಂದರ್ಥ. ಆ ಕಾಲದಲ್ಲಿಯೂ ಪ್ರಾಣಿ ಪಕ್ಷಿಗಳನ್ನು ಮನರಂಜನೆಗಾಗಿ ಪಂಜರಗಳಲ್ಲಿಟ್ಟು ಸಾಕುವವರಿದ್ದರು ಮತ್ತು ಆಹಾರ ವಿಹಾರಕ್ಕಾಗಿ, ವ್ಯಾಪಾರಕ್ಕಾಗಿ ಪಕ್ಷಿ-ಪ್ರಾಣಿಗಳನ್ನು ಬೇಟೆ ಆಡುವ ಬೇಟೆಗಾರರು ಸಹ ಇದ್ದರು.‘ನಮೋ ನಮಃ ಸೇನಾಭ್ಯಃ ಸೇನಾನಿಭ್ಯಶ್ಚ ವೋ ನಮೋ ನಮಃ ಕ್ಷತ್ತೃಭ್ಯಃ ಸಂಗ್ರಹೀತೃಭ್ಯಶ್ಚ ವೋ ನಮಃ...’ ಗಮನಿಸಬೇಕಾದ್ದು, ವೇದಕಾಲದಲ್ಲಿಯೇ ಸೇನೆಗಳು ಇದ್ದವು, ಸೈನಿಕರಿದ್ದರು, ಸಾರಥಿಗಳಿದ್ದರು, ಅವರನ್ನು ತರಬೇತುಗೊಳಿಸುವ ತರಬೇತುದಾರರಿದ್ದರು, ಸಾರಥಿ, ತರಬೇತುದಾರ, ಸೇನಾ ಸಮೂಹಗಳು ಮತ್ತು ಸೇನಾಧಿಪತಿಗಳಿಗೆ ನಮಿಸುವ ಮೂಲಕ ಸಮಾಜದ ರಕ್ಷಣೆಯ ಅಗತ್ಯವಾಗುವಷ್ಟು ಸದೃಢವಾಗಿ ಸಮಾಜವ್ಯವಸ್ಥೆ ವಿಕಾಸವಾಗಿತ್ತು ಎಂಬ ಅಂಶವನ್ನು ಗಮನಿಸಬಹುದು.

ಸಮಾಜದ ಕುಶಲಕರ್ವಿುಗಳನ್ನು ಗುರುತಿಸುವ ಮಹತ್ವದ ಅಂಶವೊಂದು ಗಮನ ಸೆಳೆಯುತ್ತದೆ. ‘ನಮಸ್ತಕ್ಷಭ್ಯೋ ರಥಕಾರೇಭ್ಯಶ್ಚ ವೋ ನಮೋ ನಮಃ ಕುಲಾಲೇಭ್ಯಃ ಕರ್ವರೇಭ್ಯಶ್ಚ ವೋ ನಮಃ...’ ಕುಶಲರಾದ ಬಡಗಿಗಳು, ರಥವನ್ನು ತಯಾರಿಸುವ ರಥಕಾರರು, ಮಡಕೆ ಮತ್ತು ಪಾತ್ರೆಗಳನ್ನು ತಯಾರಿಸುವ ಕುಲಾಲರು ಅಥವಾ ಕುಂಬಾರರು, ಲೋಹದ ವಸ್ತುಗಳನ್ನು ಸಿದ್ಧಪಡಿಸುವ ಕಮ್ಮಾರರು ರುದ್ರನ ಅಂಶವೆಂದೇ ಸ್ತುತಿಸಲ್ಪಡುವಷ್ಟು ಪ್ರಮುಖವಾಗಿ ಪರಿಗಣಿತರಾಗಿದ್ದರೆಂದರೆ - ಆಧುನಿಕ ಸಮಾಜದ ನೆಲೆಯಲ್ಲಿ ನಾವು ರ್ಚಚಿಸುವ ತಾರತಮ್ಯಗಳು ನಂತರ ಒಡೆದಾಳುವ ನೀತಿಯ ಫಲವೆಂದೇ ಪರಿಗಣಿಸಬೇಕಾಗುತ್ತದೆ.

‘ನಮಃ ಕೂಪ್ಯಾಯ ಚಾವಟ್ಯಾಯ ಚ ನಮಃ...’ ಎಂದರೆ ಕೂಪಗಳು ಅಥವಾ ಬಾವಿಗಳನ್ನು ಸೃಷ್ಟಿಸಬಲ್ಲವರು ಎಂದರ್ಥ. ಅಂದರೆ ಸಹಜವಾಗಿ ದೊರೆಯಬಲ್ಲ ನದಿ ಮತ್ತು ಕೊಳದ ನೀರುಗಳ ಆಚೆಗೆ ಜಲಸಂಚಯನಕ್ಕಾಗಿ ಬಾವಿಗಳನ್ನು ನಿರ್ವಿುಸುವ ಮತ್ತು ಅಂತರ್ಜಲವನ್ನು ಬಾವಿ ತೆಗೆಯುವ ಮೂಲಕ ಬಳಸಬಹುದೆಂದು ಅರಿತ ತಲೆಮಾರೊಂದು ಆ ಕಾಲದಲ್ಲಿಯೇ ವಿಕಾಸವಾಗಿದ್ದನ್ನು ಸಹ ಗಮನಿಸಬಹುದು.

‘ನಮೋ ಅಗ್ರೇವಧಾಯ ಚ ದೂರೇವಧಾಯ ಚ...’

ಎಂದರೆ ನೇರ ಹಣಾಹಣಿಯಲ್ಲಿ ಎದುರುಬದುರು ನಿಂತು ಹೋರಾಡಬಲ್ಲ ಮತ್ತು ದೂರದಲ್ಲಿಯೇ ನಿಂತು ವಧಿಸಬಲ್ಲ ತಂತ್ರಜ್ಞಾನವನ್ನು ಆ ಕಾಲದಲ್ಲಿಯೇ ಅಭಿವೃದ್ಧಿಪಡಿಸಲಾಗಿತ್ತು ಎಂಬುದು ವೇದ್ಯ. ಇದು ಬಿಲ್ಲು-ಬಾಣ ಮಾತ್ರವೇ ಅಥವಾ ಇನ್ಯಾವುದಾದರೂ ತಂತ್ರಜ್ಞಾನ ಇತ್ತೇ ಎಂಬುದನ್ನು ಸಹ ವಿದ್ವಾಂಸರು ವಿವರಿಸಬಹುದು.

‘ನಮಃ ಕಪರ್ದಿನೇ ಚ ವ್ಯುಪ್ತಕೇಶಾಯ ಚ...’ ಎಂಬಲ್ಲಿ ವಿವಿಧ ಕೇಶವಿನ್ಯಾಸಗಳ ಅಸ್ತಿತ್ವದ ಪರಿಕಲ್ಪನೆ ಇದೆ. ಜಟಾಧಾರಿಯಾದ ಮತ್ತು ಕೇಶಮುಂಡನ ಮಾಡಿಸಿದ ಎಂಬ ಪರಿಕಲ್ಪನೆಯಲ್ಲಿ ಕೇಶಕರ್ತನದ ವ್ಯವಸ್ಥೆ ಸಹ ಆ ಕಾಲದಲ್ಲಿಯೇ ಇತ್ತು ಎಂಬುದನ್ನು ಗಮನಿಸಬಹುದು. ‘ನಮಃ ಉರ್ವರ್ಯಾಯ ಚ ಖಲ್ಯಾಯ ಚ...’ ಅಂದರೆ ಬಿತ್ತಿ ಬೆಳೆವ ಫಸಲುಗಳ ಜಗದಾದಿ ಕೃಷಿಕನಿಗೆ, ಧಾನ್ಯಗಳನ್ನು ಕಣಜದಲ್ಲಿ ತುಂಬಿಸಿಡುವವನಿಗೆ ನಮಸ್ಕಾರ ಮಾಡಲಾಗುತ್ತದೆ. ಅಂದರೆ ಕೇವಲ ಹೊಟ್ಟೆಪಾಡಿಗಾಗಿ ದೊರೆತ ಗಡ್ಡೆಗೆಣಸು ಹಣ್ಣುಹಂಪಲು ತಿನ್ನುವ ತಲೆಮಾರು ವಿಕಾಸವಾಗಿ ಕೃಷಿ ಮಾಡುತ್ತ ಬೆಳೆ ತೆಗೆಯುವಮತ್ತು ನಾಳೆಗಳಿಗಾಗಿ ಅವನ್ನು ಸಂರಕ್ಷಿಸಿ ಕಣಜದಲ್ಲಿ ತುಂಬಿಸಿಡುವ ಕೌಟುಂಬಿಕ ವ್ಯವಸ್ಥೆ ವೇದಕಾಲದಲ್ಲಿತ್ತು ಎಂಬುದನ್ನು ಗಮನಿಸಬಹುದು. ‘ನಮಃ ಮೇಘ್ಯಾಯ ಚ ವಿದ್ಯುತ್ಯಾಯ ಚ...’ ಎಂಬಲ್ಲಿ ವರ್ಷಧಾರೆಗೆ ಅಥವಾ ಮಳೆಗೆ ಮೇಘಗಳು ಕಾರಕ ಎಂದು ತಿಳಿದ ಮತ್ತು ಮಿಂಚು-ಗುಡುಗು ಸಿಡಿಲುಗಳಲ್ಲಿ ವಿದ್ಯುತ್ಕಾಂತೀಯ ಶಕ್ತಿಗಳು ಇರುವವೆಂಬುದನ್ನು ಅರಿತ ಜ್ಞಾನವಂತ ತಲೆಮಾರು ವೇದಕಾಲದಲ್ಲಿತ್ತು.

ಸಮಾಜದಲ್ಲಿ ಸಮ-ಬೆಸಗಳು ಎಂದೂ ಇದ್ದವೆಂಬುದಕ್ಕೆ ದುಡಿದು ಬದುಕುವ ಜನವರ್ಗವೊಂದು ಇದ್ದ ಕಾಲದಲ್ಲೇ ಅವರಿಂದ ಕಸಿದು ತಿನ್ನುವ ಜನವರ್ಗವೂ ಇತ್ತೆಂಬುದಕ್ಕೆ ಈ ಮಂತ್ರಗಳೇ ಸಾಕ್ಷಿ ಎನ್ನಬಹುದೇನೋ. ‘ನಮಃ ಉಷ್ಣೀಷಿಣೇ ಗಿರಿಚರಾಯ ಕುಲುಂಚನಾಂ ಪತಯೇ ನಮಃ, ನಮೋ ನಿಷಂಗಿಣ ಇಷುಧಿಮತೇ ತಸ್ಕರಣಾಂ ಪತಯೇ ನಮೋ ನಮೋ ವಂಚತೇ ಪರಿವಂಚತೇ ಸ್ತಾಯೂನಾಂ ಪತಯೇ ನಮಃ |’ ಗಿರಿಗಹ್ವರಗಳಲ್ಲಿ ಅಲೆಯುವ ಶಿರೋವಸ್ತ್ರ ಧರಿಸಿದ, ಕುಲುಂಚರ (ಲೂಟಿಕೋರರ ಅಥವಾ ದರೋಡೆಕೋರರ) ಮೇಲೆ ಶಾಸನ ಮಾಡುವ ಅಧಿಪತಿಗೆ ನಮಸ್ಕಾರ, ಬಿಲ್ಲು ಬಾಣಗಳನ್ನು ಧರಿಸಿ ಕಳ್ಳತನ ಮಾಡುವವ ತಸ್ಕರ (ಕಳ್ಳರ) ಮೇಲೆ ಶಾಸನ ಮಾಡುವ ಅಧಿಪತಿಗೆ ನಮಸ್ಕಾರ. ವಂಚಿಸುವವರ, ವಂಚಿಸಿ ದಿಕ್ಕುಗೆಡಿಸುವವರ ಒಡೆಯರ ಮೇಲೆ ಶಾಸನ ಮಾಡುವವನಿಗೆ ನಮಸ್ಕಾರ. ಅಂದರೆ ಇಂತಹ ಎಲ್ಲರ ಮೇಲೆ ಕ್ರಮ ವಹಿಸಲು ರುದ್ರನನ್ನು ಸ್ತುತಿಸಲಾಗಿದೆ. ಅಂದರೆ ಆ ಕಾಲಘಟ್ಟದಲ್ಲಿಯೂ ಇಂದಿನಂತೆ ಹಗರಣ, ಕಳ್ಳತನ, ದರೋಡೆ, ಲೂಟಿಗಳು ಇದ್ದವು ಎಂಬುದಕ್ಕೆ ಸಾಕ್ಷಿ ಎಂದು ಭಾವಿಸಬಹುದು.

‘ಮಾ ನಸ್ತೋಕೇ ತನಯೇ ಮಾ ನ ಆಯುಷಿ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ | ವೀರಾನ್ ಮಾ ನೋ ರುದ್ರ ಭಾಮಿತೋ ವಧೀಃ ಹವಿಷ್ಮಂತೋ ನಮಸಾ ವಿಧೇಮ ತೇ |’ ಎಂಬಲ್ಲಿ ಕೌಟುಂಬಿಕ ವ್ಯವಸ್ಥೆಯ ಸಮಗ್ರ ಚಿತ್ರಣ ಮತ್ತು ಸಮಾಜದಲ್ಲಿ ವಂಶಗಳ ಪರಿಕಲ್ಪನೆಯು ವಿಕಾಸವಾಗಿರುವುದನ್ನು ಕಾಣಬಹುದು. ‘ಹೇ ರುದ್ರನೆ, ನಮ್ಮ ಮಕ್ಕಳನ್ನು, ವಂಶಜರನ್ನು, ಆಯುಸ್ಸನ್ನು ಕಾಪಾಡು, ನಮ್ಮ ಗೋವು, ಕುದುರೆಗಳು ಸಮಸ್ತ ಜೀವರಾಶಿಗಳು ಅಬಾಧಿತವಾಗಿರಲಿ. ನಿನ್ನ ಆಗ್ರಹ ನಮ್ಮನ್ನು ಸಂಹರಿಸದಿರಲಿ. ನಿನಗೆ ಹವಿಸ್ಸುಗಳರ್ನ°ಸುತ್ತ ನಾವು ನಿನ್ನ ಸನ್ನಿಧಿಗೆ ಶರಣು ಬರುತ್ತೇವೆ’ ಎಂದು ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ಪ್ರಾರ್ಥನೆಯು ಕುಟುಂಬ ವ್ಯವಸ್ಥೆ, ವಂಶಗಳ ಬಗ್ಗೆ ಕಾಳಜಿ, ಕೊಟ್ಟಿಗೆಯಲ್ಲಿ ಇರುವ ಹಸುಗಳು, ಪ್ರಾಣಿ ಸಂಕುಲ, ಸಂಚಾರಕ್ಕೆ ಬಳಸುವ ಕುದುರೆಗಳು ಅಂದಿನ ಸಮಾಜ ಸಾಧಿಸಿದ ಅಭಿವೃದ್ಧಿ, ಒಟ್ಟಂದದ ಸಮಗ್ರ ಚಿತ್ರಣವನ್ನು ಕೊಡುತ್ತದೆ.

ಈ ಭೂಮಿಯಲ್ಲಿ ಸಾಮಾಜಿಕ ವ್ಯವಸ್ಥೆಗಳು ರೂಪುಗೊಂಡ ಕಾಲದಿಂದ ಸರಿ-ತಪ್ಪುಗಳ ನಡುವೆ ಬದುಕಿನ ತಕ್ಕಡಿ ತೂಗುತ್ತ ಮುನ್ನಡೆದಿದೆ. ಈ ಎಲ್ಲ ಅನ್ಯಾಯಗಳನ್ನು ಕಾಲಕಾಲಕ್ಕೆ ಶಾಸನಗಳ ಮೂಲಕ ನಿಯಂತ್ರಿಸುವ ಶಕ್ತಿಯಾಗಿ ರುದ್ರನನ್ನು ಈ ಮೇಲಿನ ಸೂಕ್ತಗಳಲ್ಲಿ ಪ್ರಾರ್ಥಿಸಲಾಗಿದೆ. ಆ ರುದ್ರನು ನಮಗೆಲ್ಲ ಸಮೃದ್ಧಿಯನ್ನು ಕೊಡಲಿ. ನಮ್ಮ ಸಮಾಜವು ಇನ್ನಷ್ಟು ಸೌಹಾರ್ದವನ್ನು ಸೌಭಾಗ್ಯಗಳನ್ನು ಸಾಧಿಸಲಿ.

ಕೆ.ವಿ. ರಾಧಾಕೃಷ್ಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net