ಕೇದಾರನಾಥದಲ್ಲಿ ಸುರಿಯುತ್ತಿದೆ ಹಿಮ! ಪ್ರವಾಸಿಗರಿಗೆ ಹೈಅಲರ್ಟ್; ನವೆಂಬರ್ 11ಕ್ಕೆ ದೇವಸ್ಥಾನದ ಬಾಗಿಲು ಬಂದ್ | Kedarnath Snowfall

Snowfall in Kedarnath
ಕೇದಾರನಾಥದಲ್ಲಿ ಭಾರಿ ಹಿಮಪಾತ
Published on: 

Snowfall in Uttarakhand: ಉತ್ತರಾಖಂಡದ ಪ್ರಸಿದ್ಧ ಶ್ರೀ ಕೇದಾರನಾಥ ಧಾಮದಲ್ಲಿ ಭಾರಿ ಹಿಮಪಾತವಾಗಿದ್ದು, ಇಡೀ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಬೆಟ್ಟಗಳು ಬಿಳಿ ಹಿಮದ ಹೊದಿಕೆಯಿಂದ ಕಂಗೊಳಿಸುತ್ತಿವೆ. ಹಿಮ ಸುರಿಯುತ್ತಿರುವುದರಿಂದ ತಾಪಮಾನ ತೀವ್ರವಾಗಿ ಕುಸಿದಿದ್ದು, ಪ್ರದೇಶದಲ್ಲಿ ವಿಪರೀತ ಚಳಿ ಆವರಿಸಿದೆ.

ಕೇದಾರನಾಥದಲ್ಲಿ ಚಳಿ ತೀವ್ರವಾಗಿ ಹೆಚ್ಚಿರುವುದರಿಂದ ಯಾತ್ರಿಕರ ಸುರಕ್ಷತೆಗಾಗಿ ರುದ್ರಾಪ್ರಯಾಗ ಜಿಲ್ಲಾ ಪೊಲೀಸರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೆಲ ಪ್ರಮುಖ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.

ಏನೂ ಈ ಮಾರ್ಗಸೂಚಿ?

ಚಳಿಯಿಂದ ಬಚಾವಾಗಲು ಭಕ್ತರು ಸೂಕ್ತ ಉಣ್ಣೆಯ ಬಟ್ಟೆಗಳು, ಜಾಕೆಟ್, ಗ್ಲೌಸ್ ಹಾಗೂ ಟೋಪಿಗಳನ್ನು ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿದೆ. ದೇಹ ಬೆಚ್ಚಗಿಡಲು ಬಿಸಿ ಪಾನೀಯಗಳನ್ನು ಸೇವಿಸುವುದು ಉತ್ತಮ. ಅನಗತ್ಯವಾಗಿ ತೆರೆದ ಚಳಿ ಜಾಗದಲ್ಲಿ ಹೆಚ್ಚು ಹೊತ್ತು ಇರಬಾರದು. ಮುಖ್ಯವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಿದ್ದು, ಏನಾದರೂ ತೊಂದರೆಯಾದರೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಲು ಕೋರಲಾಗಿದೆ.

ಹವಾಮಾನ ಹೇಗಿದೆ?

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕೇದಾರನಾಥದಲ್ಲಿ ಈಗ ಹಗಲಿನ ತಾಪಮಾನ 0 ಡಿಗ್ರಿ ಸೆಲ್ಸಿಯಸ್‌ನಿಂದ 1 ಡಿಗ್ರಿ ಸೆಲ್ಸಿಯಸ್‌ವರೆಗೆ ಇದ್ದರೆ, ರಾತ್ರಿ ವೇಳೆ ಕನಿಷ್ಠ -4 ಡಿಗ್ರಿ ಸೆಲ್ಸಿಯಸ್‌ನಿಂದ -7 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯುತ್ತಿದೆ. ಮುಂದಿನ 1-2 ದಿನಗಳ ಕಾಲ ದಟ್ಟ ಮೋಡದೊಂದಿಗೆ ಲಘು ಹಿಮಪಾತ ಮುಂದುವರಿಯುವ ಸಾಧ್ಯತೆ ಶೇ. 50 ಕ್ಕಿಂತ ಹೆಚ್ಚಿದೆ. ಶನಿವಾರದ ನಂತರ ಆಕಾಶ ಸ್ವಚ್ಛಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ದೇವಸ್ಥಾನ ಮುಚ್ಚುವ ದಿನಾಂಕ

ಹಿಮಾಲಯದಲ್ಲಿ ಚಳಿಗಾಲದ ತೀವ್ರತೆ ಹೆಚ್ಚುತ್ತಿರುವುದರಿಂದ ಸಾಂಪ್ರದಾಯಿಕ ಪದ್ಧತಿಯಂತೆ ಬದ್ರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯು (BKTC) ನವೆಂಬರ್ 11, ಭಾಯಿ ದೂಜ್ ಹಬ್ಬದ ದಿನದಂದು ಕೇದಾರನಾಥ ದೇವಸ್ಥಾನದ ಬಾಗಿಲು ಮುಚ್ಚಲಿದೆ.

ಇದನ್ನೂ ಓದಿ: ಕಾಸ್ಮೆಟಿಕ್ ಶಾಪ್‌ನಲ್ಲಿ ಕಿಲಾಡಿ ಕಳ್ಳನ ಕರಾಮತ್ತು: 8 ತಿಂಗಳ ಮಗುವಿನ ಸರ ಕದ್ದು ಎಸ್ಕೇಪ್! | Chain Snatching

ಬಾಗಿಲು ಮುಚ್ಚಿದ ನಂತರ, ಬಾಬಾ ಕೇದಾರನಾಥರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಉಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ತರಲಾಗುತ್ತದೆ. ಮುಂದಿನ 6 ತಿಂಗಳ ಕಾಲ ಚಳಿಗಾಲ ಮುಗಿಯುವವರೆಗೆ ಸ್ವಾಮಿಗೆ ಅಲ್ಲೇ ಪೂಜೆಗಳು ನೆರವೇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net