

ಶ್ರೀಲಂಕಾ: ಲಂಕಾ ಪ್ರೀಮಿಯರ್ ಲೀಗ್ (LPL) 2023ರ ಪಂದ್ಯ ನಡೆಯುವ ವೇಳೆ ಮೈದಾನದೊಳಗೆ ಹಾವು ಹರಿದುಬಂದ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಎಲ್ಪಿಎಲ್ ತಂಡಗಳಾದ 'ಗಾಲೆ ಟೈಟಾನ್ಸ್' ಮತ್ತು 'ದಂಬುಲ್ಲಾ ಔರಾ' ನಡುವೆ ನಡೆಯುತ್ತಿದ್ದ ಪಂದ್ಯದ ವೇಳೆ ಹಾವು ಮೈದಾನದೊಳಗೆ ಪ್ರವೇಶಿಸಿದೆ. ಮ್ಯಾಚ್ನ ಎರಡನೇ ಇನಿಂಗ್ಸ್ ವೇಳೆ ಈ ಘಟನೆ ಸಂಭವಿಸಿದ್ದು, ಹಾವನ್ನು ನೋಡಿದ ವೀಕ್ಷಕರು ಮತ್ತು ಆಟಗಾರರು ಒಮ್ಮೆ ಗಾಬರಿಗೊಂಡಿದ್ದಾರೆ. ಈ ಕಾರಣ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಸ್ಟೇಡಿಯಂ ಸಿಬ್ಬಂದಿ ಮಧ್ಯಪ್ರವೇಶಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ತದನಂತರ ಪಂದ್ಯ ಮತ್ತೆ ಆರಂಭಗೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ದೃಶ್ಯ ನೋಡಿದ ನೆಟ್ಟಿಗರು ಅಶ್ಚರ್ಯ ವ್ಯಕ್ತಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿದ್ದಾರೆ,(ಏಜೆನ್ಸೀಸ್).