

Snake birthday : ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ಕೂಡ ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ.
ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ. ಹೀಗಾಗಿ, ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ಆದರೆ, ಇಲ್ಲೊಬ್ಬ ವ್ಯಕ್ತಿ ಹಾವಿಗೆ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಸುದ್ದಿಯಾಗಿದ್ದಾನೆ.
ಈ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಶಿರಪುರ ತಾಲೂಕಿನ ಬೋರೆಡಿ ಗ್ರಾಮದಲ್ಲಿ ಜುಲೈ 29ರ ನಾಗ ಪಂಚಮಿಯ ದಿನದಂದು ನಡೆದಿದೆ. ಹಾವಿಗೆ ಹುಟ್ಟುಹಬ್ಬ ಆಚರಣೆ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅರಣ್ಯ ಇಲಾಖೆ ಆ ಯುವಕನನ್ನು ಬಂಧಿಸಿದೆ. ಬಂಧಿತನನ್ನು ರಾಜ್ ಸಾಹೇಬ್ರವು ವಾಗ್ ಎಂದು ಗುರುತಿಸಲಾಗಿದೆ.
ಯುವಕ ಎಲ್ಲೋ ಒಂದು ನಾಗರಹಾವನ್ನು ಹಿಡಿದು ಮನೆಗೆ ತಂದು, ಕೇಕ್ ಕತ್ತರಿಸುವ ಮೂಲಕ ಹಾವಿನ ಹುಟ್ಟುಹಬ್ಬವನ್ನು ಆಚರಿಸಿದ್ದ. ಕೇಕ್ ಮುಂದೆ ಹಾವು ಹೆಡೆ ಎತ್ತಿ ನಿಂತಿರುವ ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಅರಣ್ಯ ಇಲಾಖೆಯ ಗಮನಕ್ಕೆ ಬಂದ ನಂತರ ಯುವಕನನ್ನು ಬಂಧಿಸಲಾಗಿದೆ.
ಆರೋಪ ಬಂದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಯುವಕನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾವನ್ನು ಇಡಲು ಬಳಸಲಾಗಿದ್ದ ಎರಡು ಪ್ಲಾಸ್ಟಿಕ್ ಪೆಟ್ಟಿಗೆಗಳು ಮತ್ತು ವಿಡಿಯೋ ಚಿತ್ರೀಕರಣಕ್ಕೆ ಬಳಸಲಾಗಿದ್ದ ಮೊಬೈಲ್ ಫೋನ್ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಯುವಕನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಡಿಯೋ ತೆಗೆದ ನಂತರ ಹಾವನ್ನು ಕಾಡಿಗೆ ಬಿಡಲಾಗಿದೆ ಎಂದು ಬಂಧಿತ ಯುವಕ ಹೇಳಿದ್ದಾನೆ. ಸದ್ಯ ಬಂಧಿತ ಯುವಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಿವರವಾಗಿ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)