

ನವದೆಹಲಿ: ಪ್ರಸ್ತುತ ಕಾಲಮಾನದಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ವಸ್ತು ಎಂದರೆ ಅದು ಸ್ಮಾರ್ಟ್ಫೋನ್. ಹೊಟೆಗಿಟ್ಟಿಲ್ಲ ಅಂದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಗಾದೆಯನ್ನು ನಮ್ಮ ಪೂರ್ವಜರು ಸೃಷ್ಟಿಸಿದ್ದಾರೆ. ಆದರೆ, ಇಂದು ಅದೆಲ್ಲಾ ಬದಲಾಗಿದೆ. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಕೈಗೊಂದು ಆಕರ್ಷಕ ಮೊಬೈಲ್ ಇರಬೇಕು ಎಂದು. ಪ್ರತಿಯೊಬ್ಬರ ದಿನಚರಿಯಲ್ಲಿಯೂ ಸ್ಮಾರ್ಟ್ಫೋನ್ ಅಸ್ತಿತ್ವ ಹೆಚ್ಚಾಗಿದೆ. ಫೋನ್ ಬಳಕೆ ಕಡಿಮೆ ಪ್ರಮಾಣದಲ್ಲಿದೆ ಎಂಬ ಮಾತು ಸದ್ಯ ಬಹಳ ದೂರ. ಇಂತಹ ಸ್ಮಾರ್ಟ್ಫೋನ್ಗೆ ಹೆಚ್ಚು ಆಕರ್ಷಿತರಾಗುವ ಬಳಕೆದಾರರು, ಅದರಲ್ಲಿರುವ ಹಲವಾರು ಫೀಚರ್, ಸೆಟ್ಟಿಂಗ್ಗಳನ್ನು ಉಪಯೋಗಿಸಲು ಬಾರದೆ, ತಿಳಿಯದೆ, ದೊಡ್ಡ ಹಳ್ಳಕ್ಕೆ ಬೀಳುತ್ತಾರೆ ಮತ್ತು ಎಡವಟ್ಟಿಗೆ ಸಿಲುಕುತ್ತಾರೆ.
ವರದಿಗಳ ಪ್ರಕಾರ, ವಿಶ್ವದಲ್ಲಿ ಸ್ಮಾರ್ಟ್ಫೋನ್ಗಳ ಸಂಖ್ಯೆ ಸುಮಾರು 5 ಶತಕೋಟಿ ಎಂದು ಅಂದಾಜಿಸಲಾಗಿದೆ. ಪಸ್ತುತ 2.5 ಶತಕೋಟಿ ಸ್ಮಾರ್ಟ್ಫೋನ್ಗಳು ಬಳಕೆಯಲ್ಲಿದೆ. ಅಂದರೆ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಮೆಸೇಜ್, ವಿಡಿಯೋ ಕಾಲ್ ಹೀಗೆ ಹಲವಾರು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ವೆಬ್ಸೈಟ್ ಮತ್ತು ಪೋರ್ಟಲ್ಗಳಿಗೆ ಎಂಟ್ರಿ ಕೊಡುವ ನಾವು, ಅದರ ಬಳಕೆ ನಮಗೆ ಎಷ್ಟು ಸೇಫ್? ಲಾಭ? ಎಂಬುದರ ಬಗ್ಗೆ ಹೆಚ್ಚಾಗಿ ಯೋಚಿಸುವುದಿಲ್ಲ. ಅಂತಿಮವಾಗಿ ಫೋನ್ ಲಾಕ್ ಅಥವಾ ತೊಂದರೆಗೆ ಸಿಲುಕಿದಾಗ ಮಾತ್ರ ಎಲ್ಲಿ? ಏನಾಯಿತು ಎಂದು ಚಿಂತೆಗೀಡಾಗುತ್ತೇವೆ. ಅಸಲಿಗೆ ನಿಮ್ಮ ಫೋನ್ ಅನ್ನು ಸುರಕ್ಷಿತ ಮಾಡಿಕೊಳ್ಳಲು ಕೆಲವೊಂದು ಸೆಟ್ಟಿಂಗ್ ಅನ್ನು ಬದಲಾಯಿಸಬೇಕಿದೆ. ಅದರ ಮಾಹಿತಿ ಈ ಕೆಳಕಂಡಂತಿದೆ.
ಪಾಸ್ಕೋಡ್ ಸ್ಮಾರ್ಟ್ಫೋನ್ನ ಮೊದಲ ಹಂತದ ಸುರಕ್ಷತೆ. ನಿಮ್ಮ ಫೋನ್ ಅನ್ನು ಯಾರಾದರೂ ತೆಗೆದುಕೊಳ್ಳಬಹುದು. ತಕ್ಷಣವೇ ನಿಮ್ಮ ಅಪ್ಲಿಕೇಶನ್ಗಳು ಮತ್ತು ಅದರಲ್ಲಿರುವ ಡೇಟಾವನ್ನು ಟ್ರಾನ್ಸ್ಫರ್ ಮಾಡಿಕೊಳ್ಳಬಹುದು. ಹೀಗಾಗಿ ನಿಮಗೆ ಮಾತ್ರ ತಿಳಿದಿರುವಂತೆ, ಚಿಕ್ಕದಾದ-ಚೊಕ್ಕದಾದ, ಬಲಿಷ್ಠವಾಗಿರುವ ಪಾಸ್ಕೋಡ್ ಅನ್ನು ಇಟ್ಟುಕೊಳ್ಳಿ. ಇದು ಸರಳ ಹಾಗೂ ಸುಲಭವಾಗಿಲ್ಲದ ರೀತಿ ನೋಡಿಕೊಳ್ಳಿ.
ಇಮೇಲ್ ಅಥವಾ ಸಂದೇಶದ ಮೂಲಕ ಹರಿದುಬರುವ ಲಿಂಕ್ಗಳನ್ನು ತಕ್ಷಣವೇ ಕ್ಲಿಕ್ ಮಾಡಬೇಡಿ. ಇದೆಲ್ಲವೂ ಅತ್ಯಂತ ಅಪಾಯಕಾರಿ. ಅನುಮಾನಾಸ್ಪದ ಲಿಂಕ್ ಅನ್ನು ಸೂಕ್ಷ್ಮವಾಗಿ ಗಮನಿಸಿ, ಪರಿಶೀಲಿಸಿ. ಸುಖಾಸುಮ್ಮನೆ ನೋಡದೆ, ತಿಳಿಯದೆ ಕ್ಲಿಕ್ ಮಾಡಿದರೆ, ಹಣ, ಮೊಬೈಲ್ನಲ್ಲಿರುವ ಮುಖ್ಯ ಡೇಟಾ, ಖಾಸಗಿ ಫೋಟೋ ಹೀಗೆ ಹಲವಾರು ಬಹುಮುಖ್ಯ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳಿರುತ್ತವೆ. ಇವೆಲ್ಲವೂ ಸೈಬರ್ ಕ್ರಿಮಿನಲ್ ಟ್ರಿಕ್ ಆಗಿರಲಿದೆ ಎಚ್ಚರವಹಿಸಿ.
ನಿಮ್ಮ ಸ್ಮಾರ್ಟ್ಫೋನ್ಗೆ ಬರುವ ಹೊಚ್ಚ ಹೊಸ ಅಪ್ಡೇಟ್ ವರ್ಶನ್ಗಳನ್ನು ತಕ್ಷಣವೇ ಡೌನ್ಲೋಡ್ ಮಾಡಿಕೊಂಡು, ಇನ್ಸ್ಟಾಲ್ ಮಾಡಿಕೊಳ್ಳಿ. ಈ ನವೀಕರಣಗಳು ಸಾಮಾನ್ಯವಾಗಿ ಭದ್ರತಾ ಪರಿಹಾರಗಳು ಸೇರಿದಂತೆ ಮೊಬೈಲ್ಗೆ ಬೇಕಾದ ಅಗತ್ಯ ಫೂರೈಕೆಯನ್ನು ಈಡೇರಿಸಲು ಮೂಲ ಮಂತ್ರವಾಗಿರುತ್ತದೆ.
ಯಾವುದೇ ಪಾಸ್ವರ್ಡ್ಗಳನ್ನು ಮರುಬಳಕೆ ಮಾಡುವುದನ್ನು ಮೊದಲು ತಪ್ಪಿಸಿ. ಏಕೆಂದರೆ, ಬಳಕೆದಾರರ ಪಾಸ್ವರ್ಡ್ ಅನ್ನು ಒಂದು ಬಾರಿ ಸೈಬರ್ ಕ್ರಿಮಿನಲ್ಗಳು ಪತ್ತೆಹಚ್ಚಿದರೆ, ಅವರು ಬಳಕೆದಾರರ ಪ್ರತಿಯೊಂದು ಖಾತೆಗೆ ಅದೇ ಪಾಸ್ವರ್ಡ್ನಿಂದ ತೆರೆಯಲು ಪ್ರಯತ್ನಿಸುತ್ತಾರೆ. ಇಂತಹ ತಪ್ಪನ್ನು ಎಂದಿಗೂ ಮಾಡಬೇಡಿ. ವಿಶಿಷ್ಟವಾದ, ಕ್ರ್ಯಾಕ್ ಮಾಡಲು ಕಷ್ಟಕರವಾದ ಪಾಸ್ವರ್ಡ್ಗಳನ್ನು ರಚಿಸಿಕೊಳ್ಳಿ. ಪಾಸ್ವರ್ಡ್ ಬಳಸುವುದು ಉತ್ತಮ ಅಭ್ಯಾಸ. ಈ ರೀತಿಯ ಪಾಸ್ಕೋಡ್ಗಳನ್ನು ಆದಷ್ಟು ಕಂಪ್ಯೂಟರ್ನಿಂದ ದೂರವಿಡಿ.
ಫ್ರೀ ಮತ್ತು ಓಪನ್ ವೈಫೈ (Wi-Fi) ಬಳಸುವುದನ್ನು ತಪ್ಪಿಸಿ. ಒಮ್ಮೊಮ್ಮೆ ಈ ಸೆಟ್ಟಿಂಗ್ ಅನ್ನು ಸದಾ ಆನ್ನಲ್ಲೇ ಇಟ್ಟಿರುತ್ತೀರಿ. ಇದರಿಂದ ಫ್ರೀ-ವೈಫೈ ಸಿಕ್ಕಾಗಲೆಲ್ಲ, ಇದು ಆಟೋ ಕನೆಕ್ಟ್ ಆಗಿರುತ್ತದೆ. ಇದು ತೊಂದರೆಗೆ ಕಾರಣವಾಗಲಿದೆ. ಹೀಗಿದ್ದಾಗ ನೀವು ಯಾವುದಾದರೂ ಆನ್ಲೈನ್ ಪೇಮೆಂಟ್ ಮಾಡಿದಾಗ ಸೈಬರ್ ಕ್ರಿಮಿನಲ್ಗಳು ನಿಮ್ಮ ಬ್ಯಾಂಕ್ ಪಿನ್, ಪಾಸ್ವರ್ಡ್ ಹೀಗೆ ಹಲವು ಗೌಪ್ಯ ವಿಷಯಗಳನ್ನು ಕಸಿದುಕೊಳ್ಳಲು ತಮ್ಮ ಚಾಲಾಕಿತನವನ್ನು ಪ್ರದರ್ಶಿಸುತ್ತಾರೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ನೀವು ತೆರೆದ Wi-Fi ಬಳಸುವಾಗ ನಿಮ್ಮ ಮೊಬೈಲ್ನಲ್ಲಿ ವಿಪಿಎನ್ (VPN) ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು, ಪೇಮೆಂಟ್ ಸೇರಿದಂತೆ ಆನ್ಲೈನ್ ವಹಿವಾಟುಗಳನ್ನು ಮುಗಿಸಿಕೊಳ್ಳಿ. ಇದು ನಿಮ್ಮನ್ನು ಆನ್ಲೈನ್ನಲ್ಲಿ ಅನಾಮಧೇಯ ವ್ಯಕ್ತಿಯಾಗಿ ತೋರಿಸುತ್ತದೆ. ಬಹುಮುಖ್ಯವಾಗಿ ನಿಮ್ಮ ಗುರುತನ್ನು ಮರೆಮಾಚುತ್ತದೆ. ಹೀಗಾಗಿ ಸೈಬರ್ ಕಿರಾತಕರಿಗೆ ನಿಮ್ಮ ಡೇಟಾ ಸುಲಭವಾಗಿ ಸಿಗೋದಿಲ್ಲ.
ನಿಮ್ಮ ಫೋನ್ನ ಆಗಾಗ್ಗೆ ಬ್ಯಾಕಪ್ ಅಲ್ಲಿ ಇಟ್ಟುಕೊಂಡರೆ ಒಳಿತು. ಇದರಿಂದ ದೊಡ್ಡ ತಲೆನೋವು ಕಡಿಮೆಯಾಗುತ್ತದೆ. ಅಕಸ್ಮಾತ್ ನಿಮ್ಮ ಸ್ಮಾರ್ಟ್ಫೋನ್ ಕಳುವು ಆದರೆ ಅಥವಾ ಬಿದ್ದು ಚೂರಾದರೆ, ಹೊಸ ಮೊಬೈಲ್ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಪದೇ ಪದೇ ಎಲ್ಲವನ್ನು ಬ್ಯಾಕಪ್ ಮಾಡುವುದರಿಂದ ಫೋನ್ ಕಳೆದುಕೊಂಡರೂ ಹೊಸ ಫೋನ್ನಲ್ಲಿ ಹಳೆ ಫೋನ್ನಲ್ಲಿನಂತೆಯೇ ಕೆಲಸ ಮುಂದುವರಿಸಬಹುದು. ಈ ಎಲ್ಲಾ ವಿಷಯಗಳು ನಿಮ್ಮ ಗಮನದಲ್ಲಿರಲಿ.