

ವಾರಣಾಸಿ (ಉತ್ತರ ಪ್ರದೇಶ): ಇಲ್ಲಿನ ಅಶೋಕ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯ ವಿದ್ಯಾರ್ಥಿಯೋರ್ವ ಸ್ಮಾರ್ಟ್ ಹೆಲ್ಮೆಟ್ ಅನ್ನು ಸಂಶೋಧಿಸಿದ್ದು, ವಿಶೇಷ ಹೆಲ್ಮೆಟ್ ಕೇವಲ ಜೀವ ರಕ್ಷಣೆ ಮಾತ್ರವಲ್ಲದೆ, ಇಂಧನ ಉಳಿತಾಯವನ್ನು ಮಾಡುತ್ತದೆ.
ಹೆಲ್ಮೆಟ್ನಲ್ಲಿ ಸೆನ್ಸರ್ ಅಳವಡಿಸಲಾಗಿದ್ದು, ಟ್ರಾಫಿಕ್ ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ಬೈಕ್ ತನ್ನಷ್ಟಕ್ಕೆ ತಾನೇ ಆಫ್ ಆಗುತ್ತದೆ. ಆದರೆ, ಹೆಲ್ಮೆಟ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಟ್ರಾಫಿಕ್ ಸಿಗ್ನಲ್ನ 50 ಮೀಟರ್ ಒಳಗಿರಬೇಕು. ತನ್ನಷ್ಟಕ್ಕೆ ತಾನೇ ಬೈಕ್ ನಿಲ್ಲುವುದರಿಂದ ಟ್ರಾಫಿಲ್ ಸಮಯದ ಪೆಟ್ರೋಲ್ ಉಳಿತಾಯ ಮಾಡಿದಂತಾಗುತ್ತದೆ.
ವಿದ್ಯಾರ್ಥಿಯ ಪ್ರಕಾರ ಹೆಲ್ಮೆಟ್, ರೇಡಿಯೋ ಫ್ರೀಕ್ವೆನ್ಸಿ ಟ್ರಾನ್ಸ್ಮಿಟರ್ಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ. ಸ್ಮಾರ್ಟ್ ಹೆಲ್ಮೆಟ್ ಸಾಧನವು ಎರಡು ಟ್ರಾನ್ಸ್ಮಿಟರ್ ಮತ್ತು ಎಂದು ರಿಸೀವರ್ ಹೊಂದಿದೆ. ರಿಸೀವರ್ ಅನ್ನು ಬೈಕ್ನಲ್ಲಿ ಅಳವಡಿಸಲಾಗುತ್ತದೆ. ಒಂದು ಟ್ರಾನ್ಸ್ಮಿಟರ್ ಅನ್ನು ಹೆಲ್ಮೆಟ್ನಲ್ಲಿ ಅಳವಡಿಸಲಾಗುತ್ತದೆ. ಹೆಲ್ಮೆಟ್ ಧರಿಸುವಾಗ ಅದನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕು. ಬೈಕ್ ಸ್ಟಾರ್ಟ್ ಮಾಡಿದಾಗ ರಿಸೀವರ್ ಆನ್ನಲ್ಲಿ ಇರಬೇಕು ಮತ್ತು ಸವಾರ ಹೆಲ್ಮೆಟ್ ಧರಿಸಿರಬೇಕು ಎಂದು ವಿದ್ಯಾರ್ಥಿ ವಿವರಿಸಿದ್ದಾನೆ.
ಅದೇ ಸಮಯದಲ್ಲಿ ಎರಡನೇ ಟ್ರಾನ್ಸ್ಮಿಟರ್ ಅನ್ನು ಇಂಟರ್ಸೆಕ್ಷನ್ ಸಿಗ್ನಲ್ ಸಿಸ್ಟಮ್ ಬಳಿ ಇಡಲಾಗುತ್ತದೆ ಮತ್ತು ರೆಡ್ ಸಿಗ್ನಲ್ ಸಂಪರ್ಕದಲ್ಲಿರುವ ಟ್ರಾನ್ಸ್ಮಿಟರ್ ಸಂಪರ್ಕಕ್ಕೆ ವಾಹನ ಬಂದಾಗ ರಿಸೀವರ್ ಬೈಕ್ ಅನ್ನು ತಕ್ಷಣ ನಿಲ್ಲಿಸುತ್ತದೆ.
ಒಂದು ವೇಳೆ ಅಪಘಾತ ಸಂಭವಿಸಿದರೆ, ಸ್ಮಾರ್ಟ್ ಹೆಲ್ಮೆಟ್ನಲ್ಲಿ ಅಳವಡಿಸಿರುವ ಸೆನ್ಸಾರ್ ಅಪಘಾತದ ಸ್ಥಳದ ಮಾಹಿತಿಯನ್ನು ಪೊಲೀಸರು, ಆಂಬುಲೆನ್ಸ್ ಮತ್ತು ಕುಟುಂಬದ ಸದಸ್ಯರಿಗೆ ರವಾನಿಸುವ ಮೂಲಕ ನೆರವಾಗುತ್ತದೆ. ಇನ್ನು ವಿದ್ಯಾರ್ಥಿ ಪೇಟೆಂಟ್ ಪಡೆಯಲು ಮುನ್ನ ಸಾಧನದ ಮತ್ತಷ್ಟು ಸುಧಾರಣೆಗೆ ಗಮನಹರಿಸಿದ್ದಾನೆ. ಆ ಬಳಿಕ ವಾಣಿಜ್ಯ ಉತ್ಪಾದನೆಗೆ ಬರಲಿದೆ ಎಂದು ವಿದ್ಯಾರ್ಥಿ ಮಾಹಿತಿ ನೀಡಿದ್ದಾನೆ. (ಏಜೆನ್ಸೀಸ್)