ಪೇಪರ್ ಬಾಟೆಲ್​ನಲ್ಲೇ ಬರಲಿದೆ ಕೋಕಾ ಕೋಲಾ! 2030ರೊಳಗೆ ಪ್ಲಾಸ್ಟಿಕ್​ ಮುಕ್ತ ಕೋಕ್​!

coke
Published on

ಲಂಡನ್​: ಕಳೆದ ಮೂರು ವರ್ಷಗಳಿಂದಲೂ ವಿಶ್ವದಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್​ ಕಸ ತಯಾರಕರಲ್ಲಿ ಕೋಕಾ ಕೋಲಾ ಸಂಸ್ಥೆ ಮೊದಲ ಸ್ಥಾನದಲ್ಲೇ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್​ ಮುಕ್ತವಾಗುವತ್ತ ವಿಶ್ವದ ಬಹುತೇಕ ರಾಷ್ಟ್ರಗಳು ಯೋಜನೆಗಳನ್ನು ಹಾಕಿಕೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಕೋಕಾ ಕೋಲಾ ಸಂಸ್ಥೆಯೂ ಮಹತ್ತರ ನಿರ್ಧಾರವನ್ನು ತೆಗೆದುಕೊಂಡಿದೆ. 2030ರೊಳಗೆ ಪ್ಲಾಸ್ಟಿಕ್​ ಮುಕ್ತ ಸಂಸ್ಥೆಯಾಗುವ ಭರವಸೆ ನೀಡಿದ್ದು, ಪೇಪರ್​ ಬಾಟೆಲ್​ಗಳ ತಯಾರಿಕೆಗೆ ಮುನ್ನುಡಿ ಬರೆದಿದೆ.

ಸಂಸ್ಥೆಯು ಪೇಪರ್​ ಬಾಟೆಲ್​ಗಳನ್ನು ತಯಾರಿಸಿದೆ. ಸದ್ಯ ತಯಾರಿಸಲಾಗಿರುವ ಬಾಟೆಲ್​ಗಳಲ್ಲಿ ಪ್ಲಾಸ್ಟಿಕ್​ ಇಲ್ಲವೇ ಇಲ್ಲ ಎಂದು ಹೇಳಲಾಗದು. ಬಾಟೆಲ್​ನ ಮುಚ್ಚುಳ ಪ್ಲಾಸ್ಟಿಕ್​ನದ್ದೇ ಆಗಿದೆ. ಹಾಗೆಯೇ ಪಾಲಿಥಿಲೀನ್ ಟೆರೆಫ್ಥಲೇಟ್ (ಪಿಇಟಿ)ನಿಂದ ತಯಾರಿಸಲಾಗಿರುವ ಲೈನಿಂಗ್​ ಕೂಡ ಇದೆ. ಸದ್ಯದ ಮಟ್ಟಿಗೆ ಈ ಬಾಟೆಲ್​ಗಳನ್ನು ಯುರೋಪಿಯನ್​ ದೇಶಗಳಲ್ಲಿ ಮಾತ್ರವೇ ಬಳಕೆಗೆ ತರುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಇದು ಕೇವಲ ಒಂದು ಪ್ರಯತ್ನವಷ್ಟೇ. ಶೇ. 100 ಪೇಪರ್​ ಇರುವ ಬಾಟೆಲ್​ ತಯಾರಿಕೆ ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದು ಸಂಸ್ಥೆ ತಿಳಿಸಿದೆ. ಇನ್ನು ಒಂಬತ್ತು ವರ್ಷಗಳಲ್ಲಿ ವಿಶ್ವಾದ್ಯಂತ ಪೇಪರ್​ ಬಾಟೆಲ್​ಗಳನ್ನು ಬಳಕೆಗೆ ತರುವ ಭರವಸೆಯನ್ನು ಸಂಸ್ಥೆ ನೀಡಿದೆ.

ಪ್ರತಿ ವರ್ಷ ಯಾವ ಸಂಸ್ಥೆಯಿಂದ ಹೆಚ್ಚು ಪ್ಲಾಸ್ಟಿಕ್​ ಕಸ ತಯಾರಾಗುತ್ತಿದೆ ಎನ್ನುವುದನ್ನು ಸಮೀಕ್ಷೆ ಮಾಡಲಾಗುತ್ತದೆ. ಅದರಲ್ಲಿ ಕಳೆದ ಮೂರು ವರ್ಷಗಳಿಂದಲೂ ಕೋಕಾ ಕೋಲಾ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ನೆಸ್ಟ್ಲೆ ಮತ್ತು ಮೂರನೇ ಸ್ಥಾನದಲ್ಲಿ ಪೆಪ್ಸಿ ಸಂಸ್ಥೆಗಳು ಕಾಣಿಸಿಕೊಂಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net