

ಮುಂಬೈ: ಮಹಾರಾಷ್ಟ್ರದ ಮುಂಬೈ ಕೋವಿಡ್-19 ಸೋಂಕಿನ ಕೇಂದ್ರ ಬಿಂದು ಆಗಿದೆ. ವಾಣಿಜ್ಯ ರಾಜಧಾನಿಯಲ್ಲಿ ಸಾಮೂಹಿಕವಾಗಿ ಕೋವಿಡ್-19 ಪರೀಕ್ಷೆ ಮಾಡುವ ಮೂಲಕ ಸೋಂಕು ತಡೆಗಟ್ಟಲು ಸ್ಥಳೀಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸ್ಮಾರ್ಟ್ ಹೆಲ್ಮೆಟ್ಗಳು ತುಂಬಾ ಸಹಕಾರಿಯಾಗಿವೆ.
ಕಂಟೇನ್ಮೆಂಟ್ ವಲಯಗಳಲ್ಲಿ ಮನೆಯಿಂದ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತರು ಸ್ಕ್ರೀನಿಂಗ್ ಮಾಡುತ್ತಿದ್ದು, ಈ ಕಾರ್ಯದಲ್ಲಿ ಸ್ಮಾರ್ಟ್ ಹೆಲ್ಮೆಟ್ ತುಂಬಾ ಸಹಕಾರಿ ಎಂದು ಸಾಬೀತಾಗಿದೆ. ಇವನ್ನು ಬಳಸಿ ಒಂದು ನಿಮಿಷದಲ್ಲಿ 200 ಜನರನ್ನು ಸಾಮೂಹಿಕವಾಗಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಸಾಮೂಹಿಕ ಸ್ಕ್ರೀನಿಂಗ್ಗಾಗಿ ಬೃಹನ್ಮುಂಬೈ ಮಹಾನಗರಪಾಲಿಕೆ ಅಧಿಕಾರಿಗಳಿಗೆ ನೆರವಾಗುತ್ತಿರುವ ಭಾರತೀಯ ಜೈನ ಸಂಘದ ಸದಸ್ಯ ಡಾ. ನೀಲು ಜೈನ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದು, ಸ್ಮಾರ್ಟ್ ಹೆಲ್ಮೆಟ್ಗಳನ್ನು ಬಳಸಿ ಪ್ರತಿದಿನ ತಲಾ 2 ಸಾವಿರ ಜನರನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಇದುವರೆಗೆ 15 ಸಾವಿರ ಜನರನ್ನು ಸ್ಕ್ರೀನಿಂಗ್ಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಮೊದಲ ಬಾರಿಗೆ ಸ್ಕ್ರೀನಿಂಗ್ ಕಾರ್ಯದಲ್ಲಿ ಸ್ಮಾರ್ಟ್ ಹೆಲ್ಮೆಟ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಪ್ರತಿಯೊಂದು ಹೆಲ್ಮೆಟ್ಗೆ 6 ಲಕ್ಷ ರೂ. ಬೆಲೆ ಇದೆ. ಇಂಥ ನಾಲ್ಕು ಹೆಲ್ಮೆಟ್ಗಳನ್ನು ಮಹಾರಾಷ್ಟ್ರದಲ್ಲಿ ಬಳಸಲಾಗುತ್ತಿದ್ದು, ಎರಡು ಹೆಲ್ಮೆಟ್ಗಳು ಮುಂಬೈನಲ್ಲಿ ಹಾಗೂ ಇನ್ನೆರಡು ಹೆಲ್ಮೆಟ್ಗಳು ಪುಣೆಯಲ್ಲಿ ಬಳಕೆಯಲ್ಲಿವೆ. ಭಾರತೀಯ ಜೈನ ಸಂಘ ಈ ಹೆಲ್ಮೆಟ್ಗಳನ್ನು ಭಾರತಕ್ಕೆ ತಂದಿದ್ದು, ಪ್ರತಿಯೊಂದು ಹೆಲ್ಮೆಟ್ನಲ್ಲಿ 64 ಜಿಬಿ ಡೇಟಾವನ್ನು ಸಂಗ್ರಹಿಸಿಡಬಹುದಾಗಿದೆ.
ಸ್ಮಾರ್ಟ್ ಹೆಲ್ಮೆಟ್ಗಳಲ್ಲಿ ಎರಡು ಕ್ಯಾಮರಾಗಳಿವೆ. ಒಂದು ಕ್ಯಾಮರಾ ಜನರ ವಿಡಿಯೋ ಚಿತ್ರೀಕರಿಸಿದರೆ, ಇನ್ನೊಂದು ಬದಿಯಲ್ಲಿರುವ ಕ್ಯಾಮರಾ ಜನರ ದೇಹದ ತಾಪಮಾನವನ್ನು ಅಳೆದು, ದಾಖಲಿಸಿಕೊಳ್ಳುತ್ತದೆ.
ಸ್ಮಾರ್ಟ್ ಹೆಲ್ಮೆಟ್ಗಳು ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತವೆ. ಥರ್ಮಲ್ ಗನ್ ಬಳಸಿ ಸ್ಕ್ರೀನಿಂಗ್ ಮಾಡಿದರೆ ಒಂದು ದಿನದಲ್ಲಿ ಹೆಚ್ಚು ಜನರನ್ನು ಸ್ಕ್ರೀನಿಂಗ್ಗೆ ಒಳಪಡಿಸಲು ಸಾಧ್ಯವಾಗುವುದಿಲ್ಲ. ಯಾವುದಾದರೂ ಒಬ್ಬ ವ್ಯಕ್ತಿಯ ದೇಹದ ತಾಪಮಾನ ನಿಗಿದಿಗಿಂತ ಹೆಚ್ಚಾಗಿರುವುದು ಕಂಡು ಬಂದರೆ, ಅಂಥ ವ್ಯಕ್ತಿಯನ್ನು ಆ ಪ್ರದೇಶದಲ್ಲಿರುವ ಬೃಹನ್ಮುಂಬೈ ಮಹಾನಗರಪಾಲಿಕೆಯ ಶಿಬಿರಕ್ಕೆ ಕಳುಹಿಸಲಾಗುತ್ತದೆ. ಅವರನ್ನು ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜತೆಗೆ ಪರೀಕ್ಷೆಗೆ ಒಳಪಡಿಸಿದ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಬೃಹನ್ಮುಂಬೈ ಮಹಾನಗರಪಾಲಿಕೆಯ ತಂಡದ ಡಾ. ವಂದನಾ ಹೇಳುತ್ತಾರೆ.
ಸದ್ಯಕ್ಕೆ ಈ ಹೆಲ್ಮೆಟ್ಗಳನ್ನು ಬಳಸಿ ಮುಂಬೈನ ಉತ್ತರ ಭಾಗದಲ್ಲಿ ಸ್ಕ್ರೀನಿಂಗ್ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೆಲದಿನಗಳಿಂದ ಈ ಪ್ರದೇಶ ಹೊಸ ಹಾಟ್ಸ್ಪಾಟ್ ಆಗಿ ಹೊಮ್ಮಿರುವುದು ಇದಕ್ಕೆ ಕಾರಣ. ಒಟ್ಟಾರೆ ಹೇಳುವುದಾದರೆ ನಾವು ಪ್ರತಿದಿನ 10 ಬಡಾವಣೆಗಳಲ್ಲಿ ಸ್ಕ್ರೀನಿಂಗ್ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡುತ್ತಾರೆ.