ಸಣ್ಣ ಹಿಡಿಕೆ ದೊಡ್ಡ ವಿವಾದ: ಫ್ಲಷ್ ಡೋರ್ ಸಮಸ್ಯೆ 43 ಲಕ್ಷ ಕಾರು ರಿಕಾಲ್​

ಸಣ್ಣ ಹಿಡಿಕೆ ದೊಡ್ಡ ವಿವಾದ: ಫ್ಲಷ್ ಡೋರ್ ಸಮಸ್ಯೆ 43 ಲಕ್ಷ ಕಾರು ರಿಕಾಲ್​
ಸಣ್ಣ ಹಿಡಿಕೆ ದೊಡ್ಡ ವಿವಾದ: ಫ್ಲಷ್ ಡೋರ್ ಸಮಸ್ಯೆ 43 ಲಕ್ಷ ಕಾರು ರಿಕಾಲ್​
Published on

ಆಧುನಿಕ "ಲುಕ್" ಮತ್ತು "ಏರೋಡೈನಾಮಿಕ್ಸ್" ಕಾರಣದಿಂದ ಕಾರುಗಳ ವಿನ್ಯಾಸದಲ್ಲಿ ಜಾರಿಗೆ ತರಲಾದ "ಫ್ಲಷ್ ಡೋರ್ ಹ್ಯಾಂಡಲ್"ಗಳು ತುರ್ತು ಸಂದರ್ಭದಲ್ಲಿ ಜೀವಕ್ಕೇ ಕಂಟಕವಾಗುತ್ತಿವೆ. ಅಪಘಾತವಾದಾಗ ಲೋ ವೋಲ್ಟೇಜ್ ಬ್ಯಾಟರಿ ವಿಫಲವಾದರೆ ಹೊರಗಿನಿಂದ ಬಾಗಿಲು ತೆರೆಯುವುದು ಅಸಾಧ್ಯ. ಕಾರೊಳಗಿದ್ದವರ ಪ್ರಾಣ ಉಳಿಸುವುದು ಕಷ್ಟ. ಇಂಥ ಹಲವು ಘಟನೆಗಳು ಸಂಭವಿಸಿದ ಹಿನ್ನೆಲೆಯಲ್ಲಿ, ಚೀನಾದಲ್ಲೀಗ "ಫ್ಲಷ್ ಡೋರ್" ಇರುವ 43 ಲಕ್ಷ ಕಾರುಗಳನ್ನು ರಿಕಾಲ್ ಮಾಡಲಾಗಿದೆ. ಮ್ಯಾನುಯಲ್ ಆಗಿ ಒಳಗಿನಿಂದ ಮತ್ತು ಹೊರಗಿನಿಂದ ಡೋರ್ ತೆರೆಯಬಹುದಾದ ಹಿಡಿಕೆಗಳನ್ನು ಕಡ್ಡಾಯಗೊಳಿಸಿದೆ. ಇದು ಭಾರತಕ್ಕೂ ಎಚ್ಚರಿಕೆಯ ಗಂಟೆ. ಭಾರತದಲ್ಲೂ ಫ್ಲಷ್ ಡೋರ್ ಇರುವ ವಾಹನಗಳ ಬಳಕೆ ಹೆಚ್ಚುತ್ತಿದ್ದು, ಕಾರಿನ ಸೌಂದರ್ಯಕ್ಕಿಂತ ಜೀವ ರಕ್ಷಣೆಯ ಮೂಲಭೂತ ವಿನ್ಯಾಸಕ್ಕೆ ಆದ್ಯತೆ ನೀಡಬೇಕಾಗಿದೆ.

ತಂತ್ರಜ್ಞಾನ ಮತ್ತು ವಿನ್ಯಾಸದ ದೃಷ್ಟಿಯಿಂದ ಆಟೋಮೊಬೈಲ್ ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನಗಳ (ಇವಿ) ಯುಗ ಆರಂಭವಾದ ಬಳಿಕ ಕಾರಿನ ಪ್ರತಿಯೊಂದು ಬಿಡಿಭಾಗವೂ ಹೊಸ ರೂಪ ಪಡೆದುಕೊಂಡಿದೆ. ನುಣುಪಾದ ಬಾಡಿ, ಭವಿಷ್ಯದ ವಾಹನಗಳಂತೆ ಕಾಣುವ ಮಿನಿಮಲಿಸ್ಟಿಕ್ ಇಂಟೀರಿಯರ್ ಮತ್ತು ಅತ್ಯಾಧುನಿಕ ಡಿಜಿಟಲ್ ಪರದೆಗಳು ಇಂದಿನ ಕಾರುಗಳ ಪ್ರಮುಖ ಆಕರ್ಷಣೆ. ಈ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಕಾರಿನ ಮೈಗೆ ತಾಗಿಕೊಂಡಂತೆ ಕೂರುವ "ಫ್ಲಷ್ ಡೋರ್ ಹ್ಯಾಂಡಲ್"ಗಳು. ಕಾರಿನ ಬಾಗಿಲಿಗೆ ಯಾವುದೇ ಉಬ್ಬಿದ ಹಿಡಿಕೆ ಇಲ್ಲದೆ, ಕಾರು ಲಾಕ್ ಆಗಿದ್ದಾಗ ಸಂಪೂರ್ಣವಾಗಿ ಒಳಗಡೆ ಹುದುಗಿಕೊಳ್ಳುವ ಮತ್ತು ಕೀಲಿ ಹಿಡಿದು ಹತ್ತಿರ ಹೋದಾಗ ಅಥವಾ ಒಂದು ಬೆರಳಿನಿಂದ ಒತ್ತಿದರೆ ಹೊರಬರುವ ಈ ಹಿಡಿಕೆಗಳು ಕಾರುಗಳಿಗೆ ಅಲ್ಟ್ರಾ ಮಾಡರ್ನ್ ಲುಕ್ ನೀಡುತ್ತವೆ. ಆದರೆ, ಇದೇ ಹಿಡಿಕೆಗಳು ಅಪಘಾತದಂತಹ ಸಂದರ್ಭಗಳಲ್ಲಿ ಪ್ರಯಾಣಿಕರ ಪಾಲಿಗೆ ಸಾವಿನ ಬಲೆಗಳಾಗಿ ಮಾರ್ಪಡುತ್ತಿವೆ. ವಿನ್ಯಾಸ ಹಾಗೂ ಸೌಂದರ್ಯಕ್ಕೆ ನೀಡಿದ ಆದ್ಯತೆಯನ್ನು ಸುರತೆಗೆ ನೀಡದಿರುವುದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದವೊಂದು ಭುಗಿಲೆದ್ದಿದೆ.

ಏನಿದು ಫ್ಲಷ್ ಡೋರ್ ಹ್ಯಾಂಡಲ್?

ಸಾಂಪ್ರದಾಯಿಕ ಕಾರುಗಳಲ್ಲಿ ಹಿಡಿಕೆಗಳು ಹೊರಕ್ಕೆ ಚಾಚಿಕೊಂಡಿರುತ್ತವೆ. ಆದರೆ ಫ್ಲಷ್ ಡೋರ್ ಹ್ಯಾಂಡಲ್ಗಳು ಕಾರಿನ ಬಾಡಿಯೊಂದಿಗೆ ಒಂದೇ ಸಮತಟ್ಟಾದ ಮೇಲ್ಮೈಯಲ್ಲಿರುತ್ತವೆ. ಇವುಗಳಲ್ಲಿ ಮುಖ್ಯವಾಗಿ ಎರಡು ವಿಧ. ಮೊದಲನೆಯದು, ಮೆಕ್ಯಾನಿಕಲ್. ಹಿಡಿಕೆಯ ಒಂದು ಬದಿಯನ್ನು ಬೆರಳಿನಿಂದ ಒತ್ತಿದಾಗ ಹ್ಯಾಂಡಲ್ ಹೊರಬರುತ್ತದೆ, ನಂತರ ಕೈಯಿಂದ ಎಳೆದು ಬಾಗಿಲು ತೆರೆಯಬೇಕು. ಎರಡನೆಯದು, ಎಲೆಕ್ಟ್ರಾನಿಕ್ ಪಾಪ್&ಔಟ್ ಹ್ಯಾಂಡಲ್. ಸೆನ್ಸರ್ ಅಥವಾ ಕೀ ಸಮೀಪಿಸಿದಾಗ ಅಥವಾ ಬಟನ್ ಒತ್ತಿದಾಗ ಸಣ್ಣ ಮೋಟಾರ್ ಮೂಲಕ ಹಿಡಿಕೆ ತಾನಾಗಿಯೇ ಹೊರಬರುತ್ತದೆ. ಆಟೋಮೊಬೈಲ್ ಕಂಪನಿಗಳು, ವಿಶೇಷವಾಗಿ ಪ್ರೀಮಿಯಂ ಮತ್ತು ಇವಿ ತಯಾರಕರು, ಈ ವಿನ್ಯಾಸಕ್ಕೆ ಆದ್ಯತೆ ನೀಡಲು ಪ್ರಮುಖವಾಗಿ ಎರಡು ಕಾರಣಗಳಿವೆ. ಮೊದಲನೆಯದು, ಏರೋಡೈನಾಮಿಕ್ಸ್ ಮತ್ತು ಮೈಲೇಜ್. ಕಾರಿನ ಮೈಮೇಲೆ ಗಾಳಿಯ ಪ್ರತಿರೋಧವನ್ನು (ಏರೋಡೈನಾಮಿಕ್ ಡ್ರಾಗ್) ಕಡಿಮೆ ಮಾಡಿದಷ್ಟೂ ಇವಿ ಕಾರುಗಳ ಬ್ಯಾಟರಿ ರೇಂಜ್, ಇಂಧನ ದಕ್ಷತೆ ಹೆಚ್ಚುತ್ತದೆ. ಹೊರಚಾಚಿದ ಹಿಡಿಕೆಗಳು ಇಲ್ಲದಿದ್ದರೆ ಕಾರಿನ ರೇಂಜ್ನಲ್ಲಿ ಸ್ವಲ್ಪ ಏರಿಕೆ ಕಂಡುಬರುತ್ತದೆ. ಇನ್ನೊಂದು ಕಾರಣ- ಪ್ರೀಮಿಯಂ, ಫ್ಯೂಚರಿಸ್ಟಿಕ್ ಲುಕ್. ಕಾರನ್ನು ಅತ್ಯಾಧುನಿಕ, ಗ್ಯಾಜೆಟ್ ಮಾದರಿಯ ವಸ್ತುವಾಗಿ ಬಿಂಬಿಸಲು ಈ ವಿನ್ಯಾಸ ನೆರವಾಗುತ್ತದೆ.

ಜೀವನ್ಮರಣದ ಕ್ಷಣದಲ್ಲಿ ಇಂಥ ಹ್ಯಾಂಡಲ್ ಮಾರಕ

ಸಾಮಾನ್ಯ ದಿನಗಳಲ್ಲಿ ಸುಲಭ ಮತ್ತು ಆಕರ್ಷಕವಾಗಿ ಕಾಣುವ ಫ್ಲಷ್ ಡೋರ್, ಅಪಘಾತ ಸಂಭವಿಸಿದಾಗ ಅಷ್ಟೇ ಅಪಾಯಕಾರಿ.
ಲೋ ವೋಲ್ಟೇಜ್ ಬ್ಯಾಟರಿ ವೈಫಲ್ಯ: ಎಲೆಕ್ಟ್ರಾನಿಕ್ ಫ್ಲಷ್ ಹ್ಯಾಂಡಲ್ಗಳು ಕಾರ್ಯನಿರ್ವಹಿಸಲು ಕಾರಿನ 12 ವೋಲ್ಟ್ ಆಕ್ಸಿಲರಿ ಬ್ಯಾಟರಿಯ ವಿದ್ಯುತ್ ಅಗತ್ಯ. ಅಪಘಾತ ಸಂಭವಿಸಿದಾಗ ಕಾರಿನ ಮುಂಭಾಗ ಜಖಂಗೊಂಡು ವೈರಿಂಗ್ ಅಥವಾ ಬ್ಯಾಟರಿ ಸಂಪರ್ಕ ಕಡಿದುಹೋದರೆ ಇಡೀ ಎಲೆಕ್ಟ್ರಾನಿಕ್ ವ್ಯವಸ್ಥೆ ನಾಶವಾಗುತ್ತದೆ.
ಹೊರಗಿನಿಂದ ಹಿಡಿಯಲು ಜಾಗವಿಲ್ಲ: ವಿದ್ಯುತ್ ಕಡಿತಗೊಂಡ ಪರಿಣಾಮ ಈ ಹಿಡಿಕೆಗಳು ಹೊರಬರುವುದಿಲ್ಲ. ಹೊರಗಿನಿಂದ ಬಾಗಿಲು ತೆರೆಯಲು ಯಾವುದೇ ಗ್ರಿಪ್ ಸಿಗುವುದಿಲ್ಲ. ಹಾಗಾಗಿ, ಕಾರಿನೊಳಗೆ ಸಿಲುಕಿದವರನ್ನು ಹೊರತೆಗೆಯಲು ಸಾಧ್ಯವಾಗುವುದಿಲ್ಲ.
ಒಳಗಿನ ಎಲೆಕ್ಟ್ರಾನಿಕ್ ಸ್ವಿಚ್ಗಳ ವೈಫಲ್ಯ: ಇಂತಹ ಕಾರುಗಳಲ್ಲಿ ಒಳಗಿನಿಂದ ಬಾಗಿಲು ತೆರೆಯಲು ಸಹ ಫಿಸಿಕಲ್ ಲಿವರ್ ಬದಲು ಪುಷ್&ಬಟನ್ ನೀಡಲಾಗಿರುತ್ತದೆ. ಪವರ್ ಕಟ್ ಆದಾಗ ಅಥವಾ ಸಾಫ್ಟ್ವೇರ್ ಕ್ರ್ಯಾಶ್ ಆದಾಗ ಇವು ಕೆಲಸ ಮಾಡುವುದಿಲ್ಲ.
ಬೆಂಕಿ, ಹೊಗೆಯಿಂದ ಆತಂಕ: ಕಾರಿಗೆ ಬೆಂಕಿ ಹೊತ್ತಿಕೊಂಡಾಗ ಅಥವಾ ನೀರಿಗೆ ಬಿದ್ದಾಗ ಕೆಲವೇ ಸೆಕೆಂಡುಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಒಳಗಿರುವ ಮೆಕ್ಯಾನಿಕಲ್ ಎಮರ್ಜೆನ್ಸಿ ರಿಲೀಸ್ ಕಾರ್ಪೆಟ್ ಕೆಳಗೋ ಅಥವಾ ಡೋರ್ ಪಾಕೆಟ್ನ ಅತಿ ಕಿರಿದಾದ ಜಾಗದಲ್ಲೋ ಸಿಲುಕಿರುತ್ತದೆ. ಆತಂಕದ ನಡುವೆ ಕತ್ತಲಲ್ಲಿ ಅದನ್ನು ಹುಡುಕಿ ಎಳೆಯುವುದು ಪ್ರಯಾಣಿಕರಿಗೆ ಅಸಾಧ್ಯವಾಗುತ್ತದೆ.
ಈ ಗಂಭೀರ ಸಮಸ್ಯೆಯ ತೀವ್ರತೆಯನ್ನು ಜಗತ್ತಿಗೆ ಮನದಟ್ಟು ಮಾಡಿಕೊಟ್ಟಿದ್ದು ಚೀನಾದ ಇತ್ತೀಚಿನ ಕಠಿಣ ತೀರ್ಮಾನ. ಚೀನಾ ಮಾರುಕಟ್ಟೆಯಲ್ಲಿ ಸುಮಾರು 43 ಲಕ್ಷ ವಾಹನಗಳನ್ನು ರಿಕಾಲ್ (ಹಿಂಪಡೆಯುವಿಕೆ) ಮಾಡಲಾಗಿದೆ. ಇದರಲ್ಲಿ ಟೆಸ್ಲಾದ ಸುಮಾರು 29 ಲಕ್ಷ ಕಾರುಗಳು ಮತ್ತು ಇತರ ಪ್ರಮುಖ ಜಾಗತಿಕ ಹಾಗೂ ದೇಶೀಯ ಬ್ರ್ಯಾಂಡ್‌ಗಳ 14 ಲಕ್ಷ ವಾಹನಗಳು ಸೇರಿವೆ. ಚೀನಾದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಗಳು ಕಠಿಣ ನಿಯಮಾವಳಿ ರೂಪಿಸಿವೆ.
ಹೊರಗಿನಿಂದ ಹಿಡಿದು ಎಳೆಯಬಹುದಾದ ಮೆಕ್ಯಾನಿಕಲ್ ಬ್ಯಾಕಪ್ ಹಿಡಿಕೆ ಇರಲೇಬೇಕು.
ತುರ್ತು ಸಂದರ್ಭದಲ್ಲಿ ಒಳಗಿನಿಂದ ಬಾಗಿಲು ತೆರೆಯುವ ವ್ಯವಸ್ಥೆ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತಿರಬೇಕು. ಯಾವುದೇ ಹೆಚ್ಚುವರಿ ಉಪಕರಣವಿಲ್ಲದೆ ಕೈಯಿಂದ ತೆರೆಯಲು ಸಾಧ್ಯವಾಗಬೇಕು.
ಸಾಫ್ಟ್ವೇರ್ ಆಧಾರಿತ ಲಾಕಿಂಗ್ ವ್ಯವಸ್ಥೆಗಿಂತ ಭೌತಿಕ ಸುರತೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ಕಣ್ತೆರೆಸಿದ ಆಘಾತಕಾರಿ ಘಟನೆಗಳು

ಅಮೆರಿಕದ ಫ್ಲೋರಿಡಾ ದುರಂತ: ಟೆಸ್ಲಾ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಅದರಲ್ಲಿದ್ದ ಚಾಲಕನನ್ನು ರಕ್ಷಿಸಲು ಸ್ಥಳೀಯರು ಧಾವಿಸಿದರೂ, ಹೊರಗಿನಿಂದ ಹಿಡಿಕೆಗಳು ಹೊರಬಾರದ ಕಾರಣ ಬಾಗಿಲು ತೆರೆಯಲಾಗಲಿಲ್ಲ. ಒಳಗಿದ್ದ ವ್ಯಕ್ತಿ ಕಣ್ಣೆದುರೇ ಸುಟ್ಟು ಕರಕಲಾಗಬೇಕಾಯಿತು.
ಜರ್ಮನಿಯ ಆಟೋಬಾನ್ ಅಪಘಾತ: ಐಷಾರಾಮಿ ಎಲೆಕ್ಟ್ರಿಕ್ ಕಾರೊಂದು ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಡಿಕ್ಕಿಯಾದಾಗ ಪವರ್ ಸಿಸ್ಟಮ್ ಸಂಪೂರ್ಣ ಸ್ಥಗಿತಗೊಂಡಿತು. ಸಮೀಪದಲ್ಲಿದ್ದ ಕೆಲವರು ಧಾವಿಸಿ, ಹೊರಗಿನಿಂದ ಬಾಗಿಲನ್ನು ಹಾರೆ ಮತ್ತು ಕಟರ್‌ಗಳಿಂದ ಮುರಿದು ತೆಗೆಯುವಷ್ಟರಲ್ಲಿ ಒಳಗಿದ್ದವರಿಗೆ ತೀವ್ರ ಗಾಯಗಳಾಗಿದ್ದವು.
ಚೀನಾದ ಅಪಘಾತ: ಎಸ್‌ಯುವಿಯೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದಾಗ ಹಿಡಿಕೆಗಳು ಜ್ಯಾಮ್ ಆಗಿ, ಒಳಗಿದ್ದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗದೆ ಸಜೀವ ದಹನವಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡ ಜನಾಕ್ರೋಶಕ್ಕೆ ಕಾರಣವಾಗಿದ್ದವು.

ಭಾರತಕ್ಕೂ ಇದು ಎಚ್ಚರಿಕೆ

ಭಾರತದಲ್ಲೂ ಇವಿ ಕಾರುಗಳ ಮತ್ತು ಪ್ರೀಮಿಯಂ ವಾಹನಗಳ ಬೇಡಿಕೆ ಏರುತ್ತಿದೆ. ಮಹೀಂದ್ರಾ, ಟಾಟಾ, ಹ್ಯುಂಡೈ, ಎಂಜಿ, ಬಿವೈಡಿ ಸೇರಿದಂತೆ ಹಲವು ಕಂಪನಿಗಳು ತಮ್ಮ ಹೊಸ ಮಾದರಿಯ ವಾಹನಗಳಲ್ಲಿ ಫ್ಲಷ್ ಡೋರ್ ಹ್ಯಾಂಡಲ್‌ಗಳನ್ನು ಪ್ರಮುಖ ಫೀಚರ್ ಆಗಿ ಪ್ರಚಾರ ಮಾಡುತ್ತಿವೆ. ಆದರೆ ಭಾರತದಲ್ಲಿ ಈ ಅಪಾಯ ಮತ್ತಷ್ಟು ಗಂಭೀರ ಸ್ವರೂಪದ್ದು.
ಅಪಘಾತ ತೀವ್ರತೆ: ಭಾರತದಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಮತ್ತು ತೀವ್ರತೆ ವಿಶ್ವದಲ್ಲೇ ಅತ್ಯಧಿಕ. ಅಪಘಾತ ಸಂಭವಿಸಿದ ಮೊದಲ ಕೆಲವೇ ನಿಮಿಷಗಳು (ಗೋಲ್ಡನ್ ಅವರ್) ಗಾಯಾಳುಗಳ ಜೀವ ಉಳಿಸಲು ನಿರ್ಣಾಯಕ.
ಜನರೇ ಮೊದಲು ರಕ್ಷಕರು: ಭಾರತದಲ್ಲಿ ಅಪಘಾತವಾದಾಗ ವಿಶೇಷ ಕಟಿಂಗ್ ಉಪಕರಣಗಳಿರುವ ರಕ್ಷಣಾ ಪಡೆಗಳಿಗಿಂತ ಹೆಚ್ಚಾಗಿ ಸ್ಥಳೀಯರೇ ಮೊದಲು ಧಾವಿಸಿಬಂದು ಬಾಗಿಲು ಮುರಿದು ರಕ್ಷಿಸುತ್ತಾರೆ. ಅಂಥವರಿಗೆ ಕಾರಿನ ಕ್ಲಿಷ್ಟಕರ ಎಲೆಕ್ಟ್ರಾನಿಕ್ ಲಾಕ್ ಸಿಸ್ಟಮ್ ಅರ್ಥವಾಗುವುದಿಲ್ಲ.
ಮಳೆಗಾಲ, ಪ್ರವಾಹ ಪರಿಸ್ಥಿತಿ: ಭಾರತದ ನಗರಗಳಲ್ಲಿ ಮಳೆಗಾಲದಲ್ಲಿ ಕಾರುಗಳು ನೀರಿನಲ್ಲಿ ಮುಳುಗುವ ಘಟನೆಗಳು ಸಾಮಾನ್ಯ. ಕಾರು ನೀರಿಗೆ ಬಿದ್ದ ತಕ್ಷಣ ಶಾರ್ಟ್ ಸರ್ಕ್ಯೂಟ್ ಆಗಿ ಬಾಗಿಲುಗಳು ಲಾಕ್ ಆಗಿಬಿಟ್ಟರೆ ಪ್ರಯಾಣಿಕರು ಒಳಗೆ ಸಿಲುಕಿ ಉಸಿರುಗಟ್ಟಿ ಸಾಯುವ ಅಪಾಯವಿರುತ್ತದೆ.

ಪರಿಹಾರದ ಉಪಾಯಗಳೇನು?

ಕಾರು ತಯಾರಕರು ಕೇವಲ ಮಾರ್ಕೆಟಿಂಗ್ ಗಿಮಿಕ್‌ಗಳಿಗಾಗಿ ಜೀವ ರಕ್ಷಿಸುವ ವಿನ್ಯಾಸಗಳನ್ನು ನಿರ್ಲಕ್ಷಿಸದಂತೆ ಭಾರತದ ರಸ್ತೆ ಸಾರಿಗೆ ಸಚಿವಾಲಯ ಕಠಿಣ ಮಾನದಂಡಗಳನ್ನು ತರಬೇಕಿದೆ.
ಕಡ್ಡಾಯ ಮೆಕ್ಯಾನಿಕಲ್ ಓವರ್‌ರೈಡ್: ಎಲೆಕ್ಟ್ರಿಕಲ್ ಪವರ್ ಸಂಪೂರ್ಣ ಸ್ಥಗಿತಗೊಂಡರೂ ಹೊರಗಿನಿಂದ ಬಾಗಿಲು ತೆರೆಯುವಂತಹ ಸ್ಪಷ್ಟ ಭೌತಿಕ ವ್ಯವಸ್ಥೆಯನ್ನು ಎಲ್ಲ ಕಾರುಗಳಲ್ಲೂ ಕಡ್ಡಾಯಗೊಳಿಸಬೇಕು.
ಏಕರೂಪದ ಎಮರ್ಜೆನ್ಸಿ ಮಾರ್ಕಿಂಗ್: ಕಾರಿನ ಒಳಗಡೆ ತುರ್ತು ಬಾಗಿಲು ತೆರೆಯುವ ಲಿವರ್ ಎಲ್ಲಿದೆ ಎಂಬುದನ್ನು ಪ್ರತಿಯೊಬ್ಬ ಪ್ರಯಾಣಿಕನಿಗೂ ಕಾಣುವಂತೆ ನಿಯಾನ್, ರೇಡಿಯಂ ಮಾರ್ಕಿಂಗ್ ಮಾಡಿರಬೇಕು.
ಗ್ರಾಹಕರ ಹೊಣೆಗಾರಿಕೆ: ಕಾರು ಖರೀದಿಸುವಾಗ ಗ್ರಾಹಕರು ಕೇವಲ ಟಚ್‌ಸ್ಕ್ರೀನ್ ಗಾತ್ರ, ಹಿಡಿಕೆಗಳ ವಿನ್ಯಾಸ ನೋಡುವುದರ ಜೊತೆಗೆ, ತುರ್ತು ಸಂದರ್ಭದಲ್ಲಿ ಈ ಬಾಗಿಲುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net