

ಬೆಂಗಳೂರು: ಕುಟುಂಬ, ಸ್ನೇಹಿತರ ಗುಂಪು, ಸಮಾಜದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ಇದಕ್ಕೆ ಯಾವುದೇ ರಾಜಕೀಯ ಪಕ್ಷ ಹೊರತಾಗಿಲ್ಲ. ಕೆಳಗಿನಿಂದ ಮೇಲಿನವರೆಗೆ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಏಕಾಭಿಪ್ರಾಯವಿದೆ. ಇದರಿಂದಾಗಿ ಸಣ್ಣಪುಟ್ಟ ವ್ಯತ್ಯಾಸಗಳು ಮೋದಿ ಪ್ರಧಾನಿಯಾಗಲು ಅಡ್ಡಿಯಾಗದು ಎಂದು ವಿಧಾನಸಭೆ ಮಾಜಿ ಸ್ಪೀಕರ್, ಉತ್ತರಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಚರ್ಚಿಸಿದ ಅವರು, ಕೆಲವು ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಪ್ರಯತ್ನ ಚಾಲ್ತಿಯಲ್ಲಿದೆ. ಆದಷ್ಟು ಬೇಗ ಸಣ್ಣಪುಟ್ಟ ವ್ಯತ್ಯಾಸಗಳಿಂದ ಪಕ್ಷ ಆದಷ್ಟು ಬೇಗ ಹೊರಬರಲಿದೆ. ಒಳೇಟಿನ ಭೀತಿ ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ ಆಂತರಿಕವಾಗಿ ಮೋದಿ ಪ್ರಧಾನಿಯಾಗಬೇಕೆಂಬ ಒಲವಿದೆ. ಹೀಗಾಗಿ ಒಳೇಟು, ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎನ್ನುವ ಆತಂಕವೇನಿಲ್ಲ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದ ಹಿರಿಯ ಸಂಸದ ಅನಂತಕುಮಾರ ಹೆಗಡೆ ಜತೆಗೆ ಬರುವ ವಿಶ್ವಾಸವಿದೆ. ಅವರ ಭೇಟಿಗೆ ಕಾಲಾವಕಾಶ ಕೇಳಿರುವೆ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ. ಆ ಪ್ರಕಾರ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಅನಂತಕುಮಾರ ಹೆಗಡೆಗೆ ತಪ್ಪಿಸಿ ನನಗೆ ಟಿಕೆಟ್ ಕೊಟ್ಟರು ಎಂಬ ತರ್ಕ ಸರಿಯಲ್ಲವೆಂದರು.
ನಾನು, ಅನಂತಕುಮಾರ ಹೆಗಡೆ ಸಂಘಪರಿವಾರದಿಂದ ಬೆಳೆದು ಬಂದವರು, ಜತೆಗೂಡಿ ಹೆಜ್ಜೆ ಹಾಕಿದವರು. ಮತ್ತೆ ಸ್ಪರ್ಧಿಸುವ ಅವಕಾಶ ಸಿಗಲಿಲ್ಲವೆಂಬ ಅಸಮಾಧಾನವು ಇಲ್ಲ. ಆದಷ್ಟು ಬೇಗ ನನ್ನೊಂದಿಗೆ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿರುವೆ.ಜೆಡಿಎಸ್ ಜತೆಗೆ ಸಮನ್ವಯ ಸಾಧಿಸಲು ಸಭೆಗಳು ನಡೆದಿವೆ. ಅಭ್ಯರ್ಥಿ ಘೋಷಣೆಯಾದ ಬಳಿಕ ಕಾರ್ಯಕರ್ತರ ಕ್ರಿಯಾಶೀಲ ಚಟುವಟಿಕೆಗಳು ಮತ್ತಷ್ಟು ವೇಗ ಪಡೆದುಕೊಂಡಿವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆ, ಪ್ರಕಾಶ್ ಶೇಷರಾಘವಚಾರ್, ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಸಹ ಸಂಚಾಲಕ ಪ್ರಶಾಂತ ಕೆಡಂಜಿ ಇದ್ದರು.