

ಶ್ರೀದಾಮ ಒಬ್ಬ ಗೋಪಾಲ. ಅವನು ಒಬ್ಬ ಸಾಮಾನ್ಯ ಬಾಲಕ. ಶ್ರೀಕೃಷ್ಣನನ್ನು ಹೊರುವ ಸಾಮರ್ಥ್ಯ ಅವನಿಗೆ ಉಂಟೇ ಎಂದರೆ ಅದಕ್ಕೆ ಭಾಗವತ ಉತ್ತರ ಕೊಡುತ್ತದೆ. ಉವಾಹ ಕೃಷ್ಣೋ ಭಗವಾನ್ ಶ್ರೀದಾಮಾನಂ ಪರಾಜಿತಃ’ ಎಂದು. ಶ್ರೀದಾಮ ಶ್ರೀಕೃಷ್ಣನನ್ನು ಹೊತ್ತರೂ ಶ್ರೀದಾಮನೊಳಗೆ ಶ್ರೀಕೃಷ್ಣ ತಾನು ಪ್ರವೇಶಿಸಿ ತನ್ನನ್ನು ತಾನೇ ಹೊತ್ತ ಎಂದು ಹೇಳುವುದಕ್ಕಾಗಿ ಭಾಗವತವು ಶ್ರೀ ಕೃಷ್ಣ ಸುದಾಮನನ್ನು ಹೊತ್ತ ಎಂದು ಹೇಳಿದೆ ಹೊರತು ಪಂದ್ಯದಲ್ಲಿ ಶ್ರೀಕೃಷ್ಣ ಸೋತ ಅದಕ್ಕಾಗಿ ಶ್ರೀದಾಮನನ್ನು ಹೊತ್ತದ್ದು ಎಂದು ತಿಳಿಯುವುದಲ್ಲ.
ಮತ್ತೊಂದು ಕಡೆಗೆ ಬಲರಾಮನನ್ನು ಇನ್ನೊಬ್ಬ ಗೋಪಾಲ ಹೊತ್ತಿದ್ದ. ಹಾಗೆ ಹೊತ್ತವನು ನಿಜವಾದ ಗೋಪಾಲ ಅಲ್ಲ. ಅವನು ಪ್ರಲಂಬಾಸುರ ಎಂಬ ರಕ್ಕಸನಾಗಿದ್ದ. ಗೋಪಾಲಕರ ವೇಷ ಹೊತ್ತು ಆತ ಅಲ್ಲಿಗೆ ಬಂದವನಾಗಿದ್ದ. ಸ್ವಲ್ಪ ಹೊತ್ತು ಬಲರಾಮನನ್ನು ಹೊತ್ತಂತೆ ನಟನೆ ಮಾಡಿದ ಆತ ನಂತರ ವೇಗದಿಂದ ಹೋಗುತ್ತಿದ್ದಾನೆ. ಸ್ವಲ್ಪ ಮುಂದೆ ಹೋಗಿ ತನ್ನ ರಾಕ್ಷಸ ವೇಷವನ್ನು ಧಾರಣ ಮಾಡಿ ವಿಕೃತವಾದ ಬೃಹದಾಕಾರದ ರೂಪವನ್ನು ತೆಗೆದುಕೊಂಡಿದ್ದಾನೆ. ಆ ಕ್ಷಣದಲ್ಲಿ ಬಲರಾಮನಿಗೆ ಇದು ಮೋಸ ಎಂದು ತಿಳಿಯಿತು.
ತನ್ನ ಮೂಲರೂಪವಾದ ಶೇಷದೇವರ ಸ್ಮರಣೆಯನ್ನು ಬಲರಾಮ ಮಾಡುತ್ತಾನೆ. ಆ ಕೂಡಲೇ ತನ್ನ ಮೂಲರೂಪದ ಶಕ್ತಿ ಅಭಿವ್ಯಕ್ತವಾಗುತ್ತದೆ. ದೇವತೆಗಳಿಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇವತೆಗಳು ತಾವು ಅವತಾರ ಮಾಡಿದ ಸಂದರ್ಭದಲ್ಲಿ ತಮ್ಮ ಮೂಲರೂಪವನ್ನು ಸ್ಮರಣೆ ಮಾಡಿದರೆ ಅವರಿಗೆ ಮೂಲರೂಪದ ಬಲ ಟ್ರಾನ್ಸಫರ್ ಆಗುತ್ತದೆ. ಹಾಗೆ ಬಲರಾಮ ತನ್ನ ಮೂಲರೂಪವನ್ನು ಸ್ಮರಿಸುತ್ತಿದ್ದಂತೆ ಮೂಲರೂಪದಿಂದ ಹೆಚ್ಚಿನ ಶಕ್ತಿಯನ್ನು ಹೊಂದಿದ್ದಾನೆ. ಬಲರಾಮ ವಿಲಂಬ ಮಾಡದೇ ಪ್ರಲಂಬಾಸುರನ ಕುತ್ತಿಗೆಯನ್ನು ಜೋರಾಗಿ ಹಿಚುಕಿ ಮುಷ್ಠಿಯಿಂದ ಜೋರಾಗಿ ತಲೆಯ ಮೇಲೆ ಗುದ್ದಿದ್ದಾನೆ. ಬಲರಾಮನ ಆ ಹೊಡೆತದಿಂದ ಪ್ರಲಂಬಾಸುರನ ತಲೆ ಸೀಳಿಹೋಗಿದೆ. ರಕ್ತವನ್ನು ವಾಂತಿ ಮಾಡುತ್ತ ಅಲ್ಲಿಯೇ ಸತ್ತು ಬಿದ್ದಿದ್ದಾನೆ.