

ಈ ದಾಸ್ಯ ಭಕ್ತಿಯು ವೈಷ್ಣವ ಮತದಲ್ಲಿ ಇದು ಅತ್ಯಂತ ಪ್ರಸಿದ್ಧವಾಗಿದೆ.ದಾಸಾಗ್ರೇಸರನಾದ ಹನುಮಂತನು ತನ್ನ ಆರಾಧ್ಯದೇವನಾದ ಶ್ರೀರಾಮನನ್ನು ದಾಸ್ಯ ಭಕ್ತಿಯ ಮೂಲಕ ಆರಾಧಿಸುತ್ತಿದ್ದನು. ಭಗವಂತನು ಪ್ರಭು, ನಾನು ಅವನ ದಾಸ ಎಂಬ ಭಾವನೆಯು ಇಲ್ಲಿರುತ್ತದೆ. ಸರ್ವಜ್ಞ, ಸರ್ವವ್ಯಾಪಿ, ಸರ್ವಶಕ್ತನೂ ಆದ ಭಗವಂತನಲ್ಲಿ, ತಾನು ಸೇವಕನಾಗಿ ಯತ್ಕಿಂಚಿತ್ತು ಸೇವೆ ಸಲ್ಲಿಸಲು ತವಕಿಸುತ್ತಾನೆ.
ಸ್ವಲ್ಪ ಸೇವೆಯನ್ನು ಮಾಡಿದರೂ, ತಾನು ಕೃತಕೃತ್ಯನಾಗುತ್ತೇನೆ ಎಂಬ ಭಾವ ದಾಸ್ಯ ಭಕ್ತಿಯ ಸೇವಕನದು. ಪ್ರಭು ತನ್ನ ಯೋಗಕ್ಷೇಮಗಳನ್ನು ನೋಡಿಕೊಳ್ಳುತ್ತಾನೆ ಎಂಬ ಭರವಸೆ, ನಿಶ್ಚಿಂತೆ ಅವನ ಕುರಿತು. ಕನಕದಾಸರ ‘ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ’ಎಂಬ ಭಕ್ತಿಗೀತೆಯಲ್ಲಿ ಈ ಭಾವನೆಯನ್ನು ನಾವು ಚೆನ್ನಾಗಿ ಕಾಣಬಹುದು. ಅಸ್ಸಾಂನ ಭಕ್ತಶ್ರೇಷ್ಠರಾದ ಮಾಧವದೇವರ ನಾಮಘೊಷದಲ್ಲಿ,
ನಾಮ ಧನ್ ದಿಯಾ ಮೊಕ್ ಕಿನಾ ಬನಮಾಲೀ
ದಾಸ್ ಪಾಯಿ ನಳವಾ ಕಮನ್ ಥಾಕುರಾಲಿ |
ನಿಜ್ ದಾಸ್ ಕರಿ ಹರಿ ಮೋಕ್ ಕಿನಾ ಕಿನಾ
ಆನ್ ಧನ ನಲಾಗೈ ನಾಮ ಧನ್ ಬಿನಾ ||
ಹೇ ಭಗವಂತನೇ, ನಾಮ ಎಂಬ ಸಂಪತ್ತನ್ನು ಕೊಟ್ಟು ನನ್ನನ್ನು ಕೊಂಡುಕೋ. ಸೇವಕನು, ತಾನೇ ಸ್ವತಃ ಸಮರ್ಪಿಸಿಕೊಳ್ಳಲು ಸಿದ್ಧನಾಗಿರುವಾಗ, ಯಾವ ಒಡೆಯನು ತಾನೇ ಕೊಂಡು ಕೊಳ್ಳುವುದಿಲ್ಲ? ದಯವಿಟ್ಟು ನೀನು ನನ್ನನ್ನು ಸೇವಕನಾಗಿ ಸ್ವೀಕರಿಸು. ನಿನ್ನ ನಾಮ ಎಂಬ ಸಂಪತ್ತನ್ನು ಬಿಟ್ಟರೆ ನನಗೆ ಯಾವ ಸಂಪತ್ತೂ ಬೇಕಾಗಿಲ್ಲ.