ನೀರು ವಿತರಣಾ ನಿರ್ವಾಹಕರಿಗೆ ಕೌಶಲ ತರಬೇತಿ

6ark2
ಅರಕಲಗೂಡಿನಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ನಲ್ ಜಲ್ ಮಿತ್ರ ಯೋಜನೆಯಡಿ ಹಮ್ಮಿಕೊಂಡಿದ್ದ ನೀರು ವಿತರಣಾ ನಿರ್ವಾಹಕರ ಬಹು ಕೌಶಲ್ಯ ತರಬೇತಿ ಕಾರ್ಯಾಗಾರದ ಸಮಾರೋಮ ಸಮಾರಂಭದಲ್ಲಿ ಜಿಪಂ ಯೋಜನಾ ನಿರ್ದೇಶಕ ಚಂದ್ರಮೌಳಿ ಮಾತನಾಡಿದರು. ವಿಜಯಲಕ್ಷ್ಮೀ, ಕಿಶೋರ್, ಪೂರ್ಣೇಶ್ ಇತರರಿದ್ದರು.
Published on

ಅರಕಲಗೂಡು: ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಸ್ವಸಹಾಯ ಸಂಘದ ಸದಸ್ಯರಿಗೆ ನಲ್ ಜಲ್ ಮಿತ್ರ ಯೋಜನೆಯಡಿ ನೀರು ವಿತರಣಾ ನಿರ್ವಾಹಕರ ಬಹು ಕೌಶಲ ತರಬೇತಿ ನೀಡಲಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕ ಚಂದ್ರಮೌಳಿ ತಿಳಿಸಿದರು.

ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮವಾಗಿ ತಾಲೂಕಿನಲ್ಲಿ ಈ ತರಬೇತಿ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿದ್ದು, ತರಬೇತಿಗೆ ತಲಾ ಒಬ್ಬರಿಗೆ 49 ಸಾವಿರ ರೂ. ವೆಚ್ಚ ಮಾಡಲಾಗುತ್ತಿದೆ. ತರಬೇತಿ ಪಡೆದ ಎಲ್ಲರಿಗೂ ಮುಂದಿನ ದಿನಗಳಲ್ಲಿ ನೀರು ವಿತರಣಾ ನಿರ್ವಾಹಕರ ಜವಾಬ್ದಾರಿಯನ್ನು ನೀಡುವ ಯೋಜನೆ ಇದ್ದು, ಇಲ್ಲಿ ಪಡೆದ ತರಬೇತಿಯು ಜವಾಬ್ದಾರಿಯುತ ಕಾರ್ಯನಿರ್ವಹಣೆಗೆ ಸಹಕಾರಿಯಾಗಲಿದೆ ಎಂದರು.

ಜಿಪಂ ಸಹಾಯಕ ಯೋಜನಾಧಿಕಾರಿ ಎ.ಎಸ್.ಸುನಿತಾ ಮಾತನಾಡಿ, ತರಬೇತಿ ಹೊಂದಿದ ಮಹಿಳೆಯರಿಗೆ ಇಪ್ಪತ್ತೊಂದು ದಿನಗಳ ವೃತ್ತಿ ನಿರ್ವಹಣೆ ತರಬೇತಿಯು ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್‌ಗಳ ಉಸ್ತುವಾರಿಯಲ್ಲಿ ನಡೆಯಲಿದೆ ಎಂದರು.

ಜಿಲ್ಲಾ ಕೌಶಲಾಭಿವೃದ್ಫಿ ಅಧಿಕಾರಿ ವಿಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಪ್ರಕಾಶ್, ಜಿಪಂ ವ್ಯವಸ್ಥಾಪಕ ನಿರ್ದೇಶಕ ಕಿಶೋರ್, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆಯ ಪೂರ್ಣೇಶ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಪುರುಷೋತ್ತಮ್, ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಶ್, ಲತಾ, ತರಬೇತುದಾರ ಯೋಗನಾಥ್ ಇದ್ದರು. 17 ದಿನಗಳು ನಡೆದ ಕಾರ್ಯಾಗಾರದಲ್ಲಿ 49 ಮಹಿಳೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net