

ಶಿವಮೊಗ್ಗ: ಶೈಕ್ಷಣಿಕ ಸಾಧನೆಯಲ್ಲಿ ಕೌಶಲ್ದ ಪಾತ್ರ ಮಹತ್ವದ್ದಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾದ ನಂತರ ಜ್ಞಾನ, ಕೌಶಲ ಮತ್ತು ಸೃಜನಶೀಲತೆಯಿಂದ ಕೌಶಲಾಧಾರಿತ ಶಿಕ್ಷಣ ಬೋಧಿಸಿದಲ್ಲಿ ವಿದ್ಯಾರ್ಥಿಗಳು ಸಾಫಲ್ಯತೆಯನ್ನು ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಿಂದ ಬುಧವಾರ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸುಗ್ಗಿ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಧೈರ್ಯ, ಸ್ಥೈರ್ಯ ಕೌಶಲಾಧಾರಿತ ಶಿಕ್ಷಣದಿಂದ ಸಿದ್ಧಿಸುತ್ತದೆ. ಮಕ್ಕಳಲ್ಲಿ ಕಲಿಕಾ ಹಂತಗಳು ಪ್ರಾರಂಭವಾಗುವಾಗಲೇ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುವುದು ಅಗತ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆದು ಬದುಕನ್ನು ಬೇರೆ ಬೇರೆ ಆಯಾಮಗಳಿಂದ ಅನ್ವೇಷಿಸುವ ಸೃಜತೆಯನ್ನು ಕಲಿಸುತ್ತದೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಅನೇಕರಿಗೆ ತಮ್ಮ ಶಿಕ್ಷಕರೇ ರೋಲ್ ಮಾಡಲ್ ಆಗಿದ್ದಾರೆ. ಅನೇಕ ಬಾರಿ ತಂದೆ-ತಾಯಿ ಮಾತು ಕೇಳದ ಮಕ್ಕಳು ಶಿಕ್ಷಕರ ಮಾತು ಕೇಳುತ್ತಾರೆ. ಆದ್ದರಿಂದ ಶಿಕ್ಷಕರು ಜವಾಬ್ದಾರಿಯುತವಾಗಿ ಶಿಕ್ಷಣ ಕಲಿಸಬೇಕೆಂದು ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಸಂಕ್ರಾಂತಿ ಸಂಭ್ರಮದ ಮೂಲಕ ಬೀಳ್ಕೊಡುಗೆ ನೀಡುತ್ತಿರುವುದು ಅನುಕರಣೀಯ. ಈ ಕಾರ್ಯಕ್ರಮದ ಮೂಲಕ ಸ್ಥಳೀಯ ಸಂಸ್ಕೃತಿಗೆ ಆದ್ಯತೆ ದೊರೆಯುತ್ತದೆಯಲ್ಲದೆ ಸಂಸ್ಕಾರಯುತ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಾಲೇಜು ಆಡಳಿತ ಮಂಡಳಿಯು ಇಂತಹ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಬಿ.ಆದಿಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಾಸ್ಯ ಕಲಾವಿದೆ ಕವಿತಾ ಸುಧೀಂದ್ರ, ಗಾಯಕ ನಿಶಾಖ್ ನಾಗಲಾಪುರ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ನಾಗರಾಜ್, ಜಂಟಿ ಕಾರ್ಯದರ್ಶಿ ಸುಮಿತ್ರಾ ಕೇಶವಮೂರ್ತಿ, ಖಜಾಂಚಿ ಟಿ.ಪಿ.ನಾಗರಾಜ್, ಟಿ.ಎಸ್.ಹೂವಯ್ಯಗೌಡ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಮಧು ಉಪಸ್ಥಿತರಿದ್ದರು.