ಶರಣಾದ ಆರು ಜನ ನಕ್ಸಲರಿಗೆ ತಲಾ ಮೂರು ಲಕ್ಷ ರೂ ಪ್ರೋತ್ಸಾಹಧನ ಮಂಜೂರು |Incentives for surrendered naxalites

IMG-20250109-WA0007
Published on

ಬೆಂಗಳೂರು: ರಾಜ್ಯಮಟ್ಟದ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಮುಂದೆ ಶರಣಾಗತರಾಗಿ ಮುಖ್ಯಧಾರೆಗೆ ಸೇರಿದ ಆರು ಜನ ಎಡಪಂಥೀಯ ತೀವ್ರಗಾಮಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನ ತಲಾ ಮೂರು ಲಕ್ಷ ರೂ ಮಂಜೂರು ಮಾಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿಯೂ ಆದ ಎಡಪಂಥೀಯ ತೀವ್ರಗಾಮಿಗಳ ಜಿಲ್ಲಾ ಸಮಿತಿ ಅಧ್ಯಕ್ಷ ಅಧಿಕೃತ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ದೇಶನದಂತೆ 'ಎ' ಪ್ರವರ್ಗದ ನಕ್ಸಲೀಯರಾದ ಮುಂಡಗಾರು ಲತಾ, ಸುಂದರಿ ಕುತ್ತಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, 'ಬಿ' ಪ್ರವರ್ಗದ ಕೆ.ವಸಂತ ವೆಲ್ಲೂರು, ತಮಿಳುನಾಡು ಹಾಗೂ ಟಿ.ಎನ್.ಜಿಶಾ ವಯನಾಡು, ಕೇರಳ ಇವರುಗಳ ಶರಣಾಗತಿ ಅರ್ಜಿಯನ್ನು ಅನುಮೋದಿಸಿ ತಲಾ ಮೂರು ಲಕ್ಷ ರೂ ಪ್ರೋತ್ಸಾಹಧನ ಮಂಜೂರು ಮಾಡಿದ್ದಾರೆ.

ಸರ್ಕಾರದ ಸೂಚನೆಯಂತೆ ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಹಾಗೂ ಪುನರ್ವಸತಿ ಜಿಲ್ಲಾ ಸಮಿತಿಯಲ್ಲಿ ಸರ್ವಾನುಮತದಿಂದ ಮೊದಲ ಹಂತದ ಪ್ರೋತ್ಸಾಹಧನ ಮಂಜೂರು ಮಾಡಲು ತೀರ್ಮಾನಿಸಿದ್ದು, ಜಿಲ್ಲಾಧಿಕಾರಿ ಪಿ.ಡಿ. ಖಾತೆಯಲ್ಲಿ ಬಾಕಿ ಉಳಿದ ಹಣದಲ್ಲಿ ಆರು ಜನರಿಗೆ ತಲಾ ಮೂರು ಲಕ್ಷ ರೂ.ಗಳಂತೆ ಒಟ್ಟು 18 ಲಕ್ಷ ರೂ ಮಂಜೂರು ಮಾಡಲಾಗಿದೆ.

ಪರಿಹಾರ ಪ್ಯಾಕೇಜ್ ನಲ್ಲಿ ಮೊದಲ ಕಂತು

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಉನ್ನತಾಧಿಕಾರಿಗಳ ಸಮಕ್ಷಮ ಆರು ಜನ ನಕ್ಸಲ್ ರು ಶಸ್ತ್ರ ತ್ಯಜಿಸಿ ಶರಣಾದರು. ಈ ಸಂದರ್ಭದಲ್ಲಿ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯ ಸಮಿತಿ, ಶಾಂತಿಗಾಗಿ ನಾಗರಿಕರ ವೇದಿಕೆ ಸದಸ್ಯರು ಇದ್ದರು‌.

ಮುಖ್ಯವಾಹಿನಿಗೆ ಸೇರಿದ ಆರು ಜನ ನಕ್ಸಲ್ ರಿಗೆ ಕಾನೂನು ಪ್ರಕಾರ ಪರಿಹಾರ ಪ್ಯಾಕೇಜ್, ಮೊಕದ್ದಮೆಗಳ ತ್ವರಿತ ವಿಲೇವಾರಿಗೆ ತ್ವರಿತ ವಿಲೇವಾರಿ ನ್ಯಾಯಾಲಯ ಸ್ಥಾಪಿಸಲಾಗುವುದು. ಪರಿಹಾರ ವಿತರಣೆ ಸಂಬಂಧ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ತಿಳಿಸಿದ್ದರು.

ಕಾನೂನು ಪ್ರಕಾರ ಪರಿಹಾರ ಪ್ಯಾಕೇಜ್ ನಲ್ಲಿ ಮೊದಲ ಕಂತು ಮಂಜೂರಾಗಿದೆ. ಮುಂದಿನ ಒಂದು ವರ್ಷ ಕಾಲ ಶರಣಾದ ನಕ್ಸಲೀಯರ ಚಲನವಲನಗಳ ಮೇಲೆ ನಿಗಾಯಿರಿಸಲಾಗುತ್ತದೆ. ನಿಜವಾಗಿಯೂ ಮನಃಪರಿವರ್ತನೆ, ಮುಖ್ಯವಾಹಿನಿಗೆ ಸೇರಿದ್ದಾರೆ ಎನ್ನುವುದು ಖಚಿತವಾದ ಬಳಿಕ ಬಾಕಿ ಹಣದಲ್ಲಿ ಎರಡನೇ ಕಂತು ಮಂಜೂರಾಗಲಿದೆ. ಎಲ್ಲ ದಾವೆಗಳಿಂದ ಖುಲಾಸೆಯಾಗಿ ದೋಷಮುಕ್ತರಾಗಿ ಹೊರ ಬಂದ ನಂತರ ಉಳಿದ ಪರಿಹಾರ ಮೊತ್ತ ಶರಣಾಗತರ ಕೈಸೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net