

ಪ್ರತಾಪಗಢ : ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಮಾಣಿಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಕ್ಕಳು ಸೇರಿ 14 ಜನ ಮೃತಪಟ್ಟಿದ್ದಾರೆ. ಕೆಲವು ಗಾಯಗೊಂಡಿದ್ದಾರೆ.
ಪ್ರಯಾಗ್ರಾಜ್ - ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇಶ್ರಾಜ್ ಕಾ ಇನಾರಾ ಗ್ರಾಮದ ಸಮೀಪ ಗುರುವಾರ ತಡರಾತ್ರಿ ರಸ್ತೆ ಬದಿ ನಿಂತಿದ್ದ ಟ್ರಕ್ಗೆ ಎಸ್ಯುವಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಎಸ್ಯುವಿ ಚಾಲಕನಿಗೆ ನಿಂತಿದ್ದ ಟ್ರಕ್ ಕಾಣಿಸದೇ ಹೋದ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಊಹಿಸಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೃತರನ್ನು ದಿನೇಶ್ ಕುಮಾರ್ (40), ಪವನ್ ಕುಮಾರ್ (10) ದಯಾರಾಮ್ (40), ಅಮನ್ (7), ರಾಮ್ಸಮುಜ್ (40), ಅಂಶ್ (9), ಗೌರವ್ ಕುಮಾರ್ (10), ನಾನ್ ಭೈಯಾ (55), ಸಚಿನ್ (12), ಹಿಮಾಂಶು (12), ಮಿಥಿಲೇಶ್ ಕುಮಾರ್ (17), ಅಭಿಮನ್ಯು (28), ಪ್ರಶಾಂತ್ (40), ಬೊಲೆರೋ ಚಾಲಕ ಬಬ್ಲು (22) ಎಂದು ಗುರುತಿಸಲಾಗಿದೆ. ಚಾಲಕ ಮತ್ತು ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ ಜಿಗ್ರಪುರ ಗ್ರಾಮದವರು. ಇವರೆಲ್ಲ ಶೇಖಪುರ ಗ್ರಾಮಕ್ಕೆ ವಿವಾಹ ಸಮಾರಂಭಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. (ಏಜೆನ್ಸೀಸ್)