

ಬೆಂಗಳೂರು: ಬಿಟೆಕ್ ವಿದ್ಯಾರ್ಥಿಯನ್ನು ತಡೆದು ಬೆದರಿಸಿ ದರೋಡೆ ಮಾಡಿದ್ದ ರೌಡಿಶೀಟರ್ ಸೇರಿ ಆರು ಮಂದಿ ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಗೋಪಿಚಂದ್, ತೇಜ್‌ದೀಪ್, ಗಂಗಮ್ಮನಗುಡಿ ರೌಡಿ ಶೀಟರ್ ಶರತ್, ಸಹಚರರಾದ ಮಂಜುನಾಥ್, ಚೇತನ್‌ಗೌಡ, ಚೇತನ್ ಕುಮಾರ್ ಬಂಧಿತರು. ಆರೋಪಿಗಳಿಂದ ೧೮,೫೦೦ ರೂ.ನಗದು, ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ, ಎರಡು ದ್ವಿಚಕ್ರ ವಾಹನ, ಕಾರು ಜಪ್ತಿ ಮಾಡಲಾಗಿದೆ.
ಬಂಧಿತರು ಜೂ.೨ ರಂದು ರಾಜಾನುಕುಂಟೆಯ ಖಾಸಗಿ ವಿಶ್ವವಿದ್ಯಾಲಯದ ಬಿಟೆಕ್ ವಿದ್ಯಾರ್ಥಿ ಇಟಗಲ್‌ಪುರ ನಿವಾಸಿ ವಿಘ್ನೇಶ್(೨೦) ಎಂಬುವವನ್ನು ಬೆದರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೈಕ್‌ನಲ್ಲಿ ಗಾಂಜಾ ಇರಿಸಿ ವಿಡಿಯೋ ಮಾಡಿದರು:
ದೂರುದಾರ ವಿದ್ಯಾರ್ಥಿ ವಿಘ್ನೇಶ್ ಆಂಧ್ರಪ್ರದೇಶ ಮೂಲದವನು. ರಾಜಾನಕುಂಟೆಯ ಖಾಸಗಿ ವಿಶ್ವವಿದ್ಯಾಲಯದಲ್ಲಿ ಬಿಟೆಕ್ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಜೂ.೨ರಂದು ಮಧ್ಯಾಹ್ನ ಇಟಗಲ್‌ಪುರದ ರೂಮ್‌ನಲ್ಲಿದ್ದ. ಈ ವೇಳೆ ಸಹಪಾಠಿಗಳಾದ ಗೋಪಿಚಂದ್ ಮತ್ತು ತೇಜ್‌ದೀಪ್ ರೂಮ್ ಬಳಿ ಬಂದು ಬನ್ನೇರುಘಟ್ಟದ ಬಂದೂಸ್ ಡಾಬಾಗೆ ಊಟಕ್ಕೆ ಹೋಗೋಣ ಎಂದು ಕರೆದಿದ್ದಾರೆ. ಅದರಂತೆ ವಿಘ್ನೇಶ್ ಮತ್ತು ಆತನ ಸ್ನೇಹಿತ ಗಣೇಶ್ ಒಂದು ದ್ವಿಚಕ್ರ ವಾಹನದಲ್ಲಿ ಹಾಗೂ ಗೋಪಿಚಂದ್ ಮತ್ತು ತೇಜ್‌ದೀಪ್ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಡಾಬಾಗೆ ಊಟಕ್ಕೆ ತೆರಳಿದ್ದಾರೆ. ಊಟ ಮುಗಿಸಿಕೊಂಡು ಮಧ್ಯಾಹ್ನ ೨.೧೫ಕ್ಕೆ ಸೋಲದೇವನಹಳ್ಳಿ ಕಡೆಯಿಂದ ರಾಜಾನುಕುಂಟೆ ಕಡೆಗೆ ವಾಪಾಸ್ ಬರುವಾಗ ಮಾರ್ಗ ಮಧ್ಯೆ ಕೆಎಂಎಫ್ ನಂದಿನಿ ಡ್ಯಾನಿಶ್ ಫಾರಂ ಬಳಿ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ವಿಘ್ನೇಶ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ವಿಘ್ನೇಶ್ ಪ್ರಶ್ನೆ ಮಾಡಿದಾಗ, ನಿಮ್ಮ ಸ್ನೇಹಿತರಾದ ತೇಜ್‌ದೀಪ್ ಮತ್ತು ಗೋಪಿಚಂದ್ ನಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅವರನ್ನು ಕರೆಸು ಎಂದು ಹೇಳಿದ್ದಾರೆ. ಅಷ್ಟರಲ್ಲಿ ಆಟೋದಲ್ಲಿ ಬಂದ ಇಬ್ಬರು ಏಕಾಏಕಿ ತಮ್ಮ ಬಳಿಯಿಂದ ಗಾಂಜಾ ಪೊಟ್ಟಣವನ್ನು ತೆಗೆದು ವಿಘ್ನೇಶ್ ದ್ವಿಚಕ್ರ ವಾಹನದಲ್ಲಿ ಇರಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಗಾಂಜಾ ಸೇವಿಸಲು ಇಲ್ಲಿಗೆ ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಕಾರಿನಲ್ಲಿ ಬಂದ ಇಬ್ಬರು ನಾವು ಪೊಲೀಸರು ಎಂದು ಗಾಂಜಾ ಪೊಟ್ಟಣವನ್ನು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ, ವಿಘ್ನೇಶ್‌ನ ಹಾಲ್‌ಟಿಕೆಟ್‌ನ ಫೋಟೋ ಸೆರೆ ಹಿಡಿದಿದ್ದಾರೆ. ಬಳಿಕ ವಿಘ್ನೇಶ್ ಬಳಿ ಇದ್ದ ೨೦ ಸಾವಿರ ರೂ. ನಗದು ಮತ್ತು ೧೨ ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು, ಗಾಂಜಾದ ವಿಡಿಯೋ ಡಿಲೀಡ್ ಮಾಡಬೇಕಾದರೆ, ೧೦ ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಇದರಿಂದ ಹೆದರಿದ ವಿಘ್ನೇಶ್ ೭ ಲಕ್ಷ ರೂ. ನೀಡಲು ಒಪ್ಪಿಕೊಂಡಿದ್ದಾನೆ.
ಬೈಕ್ ಅಡಮಾನ ಇರಿಸಿ ೫೦ ಸಾವಿರ ರು. ಪಡೆದರು:
ಬಳಿಕ ಆರೋಪಿಗಳು ವಿಘ್ನೇಶ್‌ನನ್ನು ರಾಜಾನುಕುಂಟೆಗೆ ಕರೆದೊಯ್ದು ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನವನ್ನು ಅಡಮಾನ ಇರಿಸಿ ೫೦ ಸಾವಿರ ರೂ. ಪಡೆದುಕೊಂಡಿದ್ದಾರೆ. ಉಳಿದ ಹಣವನ್ನು ಎರಡು ದಿನಗಳಲ್ಲಿ ಕೊಡಬೇಕು. ಇಲ್ಲವಾದರೆ, ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಈ ಸಂಬಂಧ ವಿಘ್ನೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಓರ್ವ ರೌಡಿ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಚು ರೂಪಿಸಿದ್ದೇ ಸ್ನೇಹಿತರು:
ಬಂಧಿತ ಆರು ಮಂದಿ ಆರೋಪಿಗಳ ಪೈಕಿ ತೇಜ್‌ದೀಪ್ ಮತ್ತು ಗೋಪಿಚಂದ್ ದೂರುದಾರ ವಿಘ್ನೇಶ್ ವ್ಯಾಸಂಗ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲೇ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಾರೆ. ವಿಘ್ನೇಶ್‌ನ ಬಳಿ ಹಣ ಇರುವುದನ್ನು ತಿಳಿದುಕೊಂಡಿದ್ದ ಈ ಇಬ್ಬರು ಇತರೆ ಆರೋಪಿಗಳ ಜತೆಗೆ ಸೇರಿಕೊಂಡು ಸಂಚು ರೂಪಿಸಿ ದರೋಡೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.