

ರಾಜೇಪುರ: ಯುವಕನೊಬ್ಬ ನೆರೆಯ ಮನೆಯ ಯುವತಿಯೊಂದಿಗೆ ಓಡಿಹೋಗಿದ್ದಾನೆಂದು ಆತನ ತಂದೆ ತಾಯಿಗಳನ್ನು ಥಳಿಸಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದ ರಾಜೇಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಅಬ್ಬಾಸ್ ಮತ್ತು ಆತನ ಪತ್ನಿ ಕಶ್ರುನ್ ನಿಶಾನ್ ಎಂದು ಗುರುತಿಸಲಾಗಿದ್ದು, ಗ್ರಾಮದ ನೆರೆಮನೆಯ ಶೈಲೇಂದ್ರ ಜೈಸ್ವಾಲ್, ಆತನ ತಂದೆ ರಾಂಪಾಲ್, ಮಗ ದೇವತಾದಿನ್, ಸೋದರ ಮಾವ ಪಲ್ಲು ಮತ್ತು ತಾಯಿ ಅಬ್ಬಾಸ್ ಅಲಿ ಸೇರಿಕೊಂಡು ದಂಪತಿಗಳ ಮೇಲೆ ದೊಣ್ಣೆ ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗ್ರಾಮಸ್ಥರ ಪ್ರಕಾರ ಮೃತ ದಂಪತಿಯ ಪುತ್ರ ಶೌಕತ್, ರಾಂಪಾಲ್ನ ಪುತ್ರಿ ರೂಬಿ ಜತೆ ಅಕ್ರಮ ಸಂಬಂಧ ಹೊಂದಿದ್ದ. ಶೌಕತ್ 2020ರಲ್ಲಿ ರೂಬಿಯನ್ನು ಕರೆದುಕೊಂಡು ಓಡಿ ಹೋಗಿದ್ದು ಆ ಸಮಯದಲ್ಲಿ ಆಕೆ ಅಪ್ರಾಪ್ತ ವಯಸ್ಕಳಾಗಿದ್ದಳು. ಹೀಗಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೌಕತ್ನನ್ನು ಜೈಲಿಗೆ ಕಳುಹಿಸಿದ್ದಾರೆ. ಇದಾದ ಬಳಿಕ ಆಕೆಗೆ ಬೇರೆಯವನ ಜತೆಗೆ ವಿವಾಹ ಮಾಡಲಾಗಿದ್ದು, ಅದೇ ಜೂನ್ನಲ್ಲಿ ಶೌಕತ್ ಜೈಲಿನಿಂದ ಹೊರಬಂದು ಮತ್ತೆ ವಿವಾಹಿತ ರೂಬಿಯನ್ನು ಅಪಹರಿಸಿಕೊಂಡು ಹೋಗಿದ್ದ. ಆ ಬಳಿಕ ಕುಟುಂಬಸ್ಥರು ಮತ್ತೆ ಅಪಹರಣ ಪ್ರಕರಣ ದಾಖಲಿಸಿದ್ದು, ಆದರೆ ಈ ವೇಳೆ ರೂಬಿ ವಯಸ್ಕಳಾಗಿದ್ದರಿಂದ ಆಕೆ ಶೌಕತ್ ಪರವಾಗಿ ಹೇಳಿಕೆ ನೀಡಿದ್ದಾಳೆ. ಇದರಿಂದಾಗಿ ಆ ಪ್ರಕರಣದಲ್ಲಿ ಶೌಕತ್ನ ಯಾವುದೇ ತಪ್ಪು ಸಾಬೀತಾಗಿರಲಿಲ್ಲ.
ಕೆಲವು ದಿನಗಳ ನಂತರ ಶೌಕತ್ ಹಳೆಯ ಪ್ರಕರಣದಲ್ಲಿ ಜೈಲು ಸೇರಬೇಕಾಯಿತು. ಕಳೆದ ಬುಧವಾರವಷ್ಟೇ ಆತ ಜೈಲಿನಿಂದ ಹೊರಬಂದಿದ್ದನು. ಗ್ರಾಮಸ್ಥರ ಪ್ರಕಾರ, ಇಬ್ಬರು ಮತ್ತೆ ಓಡಿಹೋಗಿದ್ದಾರೆ ಸುದ್ದಿ ಹರಿದಾಡುತ್ತಿತ್ತು. ಇದರಿಂದ ಕೋಪಗೊಂಡ ಆಕೆಯ ಕುಟುಂಬಸ್ಥರು ಯುವಕನ ತಂದೆ-ತಾಯಿಯನ್ನು ಕೊಂದಿದ್ದಾರೆ. ಈ ನಡುವೆ ಶೌಕತ್ ಮತ್ತು ರೂಬಿ ಎಲ್ಲಿಯೂ ಪತ್ತೆಯಾಗಿಲ್ಲ. ಮೃತ ದಂಪತಿಯ ಮೂವರು ಅಪ್ರಾಪ್ತ ಹೆಣ್ಣುಮಕ್ಕಳು ನೆರೆಹೊರೆಯವರು ಮತ್ತು ಪೊಲೀಸರ ರಕ್ಷಣೆಯಲ್ಲಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಸ್ಥಳಕ್ಕಾಗಮಿಸಿ ಮಾತನಾಡಿದ್ದು, ಎರಡು ಪಕ್ಷಗಳ ನಡುವೆ ಜಗಳ ನಡೆದಿದ್ದು ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ. ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕಣ್ಗಾವಲು ತಂಡ, ಎಸ್‌ಒಜಿ ತಂಡ ಸೇರಿದಂತೆ ಎಫ್‌ಎಸ್‌ಎಲ್ ತಂಡ ಸ್ಥಳದಲ್ಲೇ ಪರಿಶೀಲನೆ ನಡೆಸಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಬಹಿರಂಗಪಡಿಸಲಾಗುವುದು ಎಂದಿದ್ದಾರೆ.(ಏಜೆನ್ಸೀಸ್)