ದಿಕ್ಕು ತಪ್ಪಿದ ಎಸ್ ಐಟಿ ತನಿಖೆ: ಮಾಜಿ ಸಿಎಂ ಬೊಮ್ಮಾಯಿ ಟೀಕೆ

Ex CM Basavaraj Bommai
Published on

ಬೆಂಗಳೂರು: ಪ್ರಜ್ವಲ್ ರೇವಣ್ಣ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಎಸ್ ಐಟಿ ತನಿಖೆ ದಿಕ್ಕು ತಪ್ಪುತ್ತಿದೆ. ಯಾರೆಲ್ಲ ವಿರುದ್ಧ ಆಪಾದನೆ ಮಾಡಲಾಗುತ್ತಿದೆಯೋ ಅವರನ್ನು ಬಿಟ್ಟು ಮಾಹಿತಿ ನೀಡಿದವರನ್ನು ಬಂಧಿಸಲಾಗುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ನಿಷ್ಪಕ್ಷಪಾತ ತನಿಖೆ ಬಗ್ಗೆ ಅನುಮಾನ ಇರುವ ಕಾರಣಕ್ಕೆ ತನಿಖೆ ಸಿಬಿಐಗೆ ಒಪ್ಪಿಸಬೇಕೆಂಬ ಆಗ್ರಹ ಸರಿಯಾಗಿದೆ. ಹೀಗೆಂದ ಮಾತ್ರಕ್ಕೆ ಪ್ರಜ್ವಲ್ ರ ಸಮರ್ಥನೆ ಎಂಬ ಅರ್ಥ ಕಲ್ಪಿಸುವುದು ಬೇಡ. ತಪ್ಪು ಮಾಡಿದ್ದರೆ ಕಾನೂನು ರೀತ್ಯ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡದ ಆರೋಪ, ಅನುಮಾನವಿರುವ ಕಾರಣ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂಬ ಒತ್ತಾಯವಷ್ಟೇ ಅಲ್ಲ, ಈ ಪ್ರಕರಣದಲ್ಲಿ ಯಾರೆಲ್ಲ ಹೆಸರು ಕೇಳಿಬರುತ್ತಿದೆಯೋ ಅವರೆಲ್ಲರ ವಿಚಾರಣೆ ನಡೆಸಬೇಕು ಎಂದು ಪ್ರತಿಪಾದಿಸಿದರು.

ಜೆಡಿಎಸ್ ಜತೆಗೆ ಮೈತ್ರಿಯು ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಧಾರವಾಗಿದೆ. ವಿಧಾನ ಪರಿಷತ್ ಚುನಾವಣೆಗೆ ಸಾಕಷ್ಟು ಆಕಾಂಕ್ಷಿಗಳಿದ್ದರು. ಟಿಕೆಟ್ ಕೈತಪ್ಪಿದಾಗ ಅಸಮಾಧಾನ ಸಹಜ. ಪಕ್ಷದ ಕೇಂದ್ರೀಯ ಚುನಾವಣೆ ಸಮಿತಿ ಕೈಗೊಂಡ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರಬೇಕಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net