

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ನಿಧಾನಗತಿಯಲ್ಲಿದೆ. ಪೊಲೀಸ್ ಪದ್ಧತಿ ಪ್ರಕಾರ ತನಿಖೆ ನಡೆಯುತ್ತಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಎಸ್‌ಐಟಿಗೆ ಉತ್ತರದಾಯಿತ್ವ ಇದೆ, ಜವಾಬ್ದಾರಿಯಿದೆ. ಈವರೆಗಿನ ತನಿಖೆ ಪ್ರಗತಿ ಬಗ್ಗೆ ಮಧ್ಯಂತ ವರದಿಯನ್ನೂ ಕೊಟ್ಟಿಲ್ಲವೆಂದು ಆಕ್ಷೇಪಿಸಿದರು.
ಷಡ್ಯಂತ್ರ ಮಾಡಿದವರನ್ನು ಮುಟ್ಟದಂತೆ ರಾಜಕೀಯ ಒತ್ತಡ ಇದೆ. ನಿರೀಕ್ಷೆಗೆ ತಕ್ಕಂತೆ ಎಸ್‌ಐಟಿ ತನಿಖೆ ನಡೆಯುತಿಲ್ಲ ಎಂದು ಆರೋಪಿಸಿದ ಅವರು, ಮುಸುಕುಧಾರಿಯ ದೂರು ಹುಸಿಯಾದ ನಂತರ ಬೇರೆ ಬೇರೆ ದಾಖಲಾಗುತ್ತಿವೆ.
ಷಡ್ಯಂತ್ರ ಮಾಡಿದ ಮುಖ್ಯ ವ್ಯಕ್ತಿಗಳನ್ನೇ ಇನ್ನೂ ಮುಟ್ಟಿಲ್ಲ. ಎಸ್‌ಐಟಿಯವರು ನಮ್ಮನ್ನು ಮುಟ್ಟಲ್ಲ ಅಂತ ಅವರಿಗೂ ಖಾತ್ರಿ ಆಗಿದೆ, ಅದಕ್ಕಾಗಿಯೇ ಅವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೊಸ ಹೊಸ ದೂರುಗಳು ಬರುತ್ತಿವೆ ಎಂದು ಬೊಮ್ಮಾಯಿ ಶಂಕೆ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಆಯೋಗಕ್ಕೆ ಡಿಸೆಂಬರ್‌ನಲ್ಲಿ ವರದಿ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರೆ, ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಡಿಸೆಂಬರ್‌ನಲ್ಲಿ ಸಿಎಂ ಆಗುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಬಣ ಹೇಳುತ್ತಿದೆ.
ಹೀಗಾಗಿ ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಸಿಎಂ ತಂತ್ರ ರೂಪಿಸಿ, ಜಾತಿ ಸಮೀಕ್ಷೆ ವರದಿಯನ್ನು ರಾಜಕೀಯವಾಗಿ ಬಳಸಲು ಮುಂದಾಗಿದ್ದಾರೆ. ರಾಜಕೀಯ ಪ್ರೇರಿತವಾದ ಈ ಸಮೀಕ್ಷೆಯೇ ಸಂವಿಧಾನಬಾಹಿರ ಎಂದು ಟೀಕಿಸಿದರು.
ಗ್ಯಾರಂಟಿ ಯೋಜನೆಗಳಿಗೂ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೂ ಏನು ಸಂಬಂಧ. ಗ್ಯಾರಂಟಿ ಫಲಾನುಭವಿಗಳ ಪರಿಶೀಲನೆಗೆ ಮಾಹಿತಿ ಸಂಗ್ರಹ ಜಾತಿ ಜನಗಣತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಡಿಸಿಎಂ ಬಣ ಮುಂದಾಗಿದೆ ಎಂದು ಆರೋಪಿಸಿದರು.
ಸಂವಿಧಾನದಲ್ಲಿ ಕೇವಲ ಆರು ಧರ್ಮಗಳು ಇವೆ, ಅಷ್ಟೇ ಧರ್ಮಗಳ ಹೆಸರು ಬರೆಯಬೇಕು. ಮತಾತಂತರಗೊಂಡ ಕ್ರೈಸ್ತರು ಅನ್ನುವ ಹೊಸ ಕಾಲಂ ಮಾಡಿದ್ದಾರೆ. ಸಂವಿಧಾನಬಾಹಿರವಾದ ಈ ಕಾಲಂ ಸೃಷ್ಟಿಗೆ ಅಧಿಕಾರ ಕೊಟ್ಟವರು ಯಾರು ? ಎಂದು ಬೊಮ್ಮಾಯಿ ಕೇಳಿದರು.
ವೀರಶೈವ ಲಿಂಗಾಯತ ಮಹಾಸಭೆ ಸಂಪೂರ್ಣವಾಗಿ ಕಾಂಗ್ರೆಸ್‌ಮಯವಾಗಿದೆ.ಸಂವಿಧಾನದ ಪ್ರಕಾರ ನಡೆದುಕೊಳ್ಳುವ ಬದಲು ಗೊಂದಲ ಸೃಷ್ಟಿಸುವುದು ಸರಿಯಲ್ಲವೆಂದು ಆಕ್ಷೇಪಿಸಿದರು.
ಒಂದು ಕಡೆ ಹೊಸ ಧರ್ಮ, ಇನ್ನೊಂದು ಕಡೆ ವೀರಶೈವ, ಮತ್ತೊಂದೆಡೆ ಲಿಂಗಾಯತ ಎನ್ನುತ್ತಿದ್ದು, ಈ ಗೊಂದಲ ಬಗೆಹರಿಯಬೇಕು ಇಲ್ಲವಾದರೆ ಜನ ತೀರ್ಮಾನ ಮಾಡುತ್ತಾರೆ ಎಂದು ಬೊಮ್ಮಾಯಿ ಎಚ್ಚರಿಸಿದರು.