

ಕೊಲ್ಕತ್ತಾ: ಎರಡನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆಗೆ (SIR) ವಿರೋಧ ವ್ಯಕ್ತಪಡಿಸಿರುವ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ, ನಿಮ್ಮ ಪೂರ್ವಜರ ಪ್ರಮಾಣಪತ್ರಗಳನ್ನು ಕೇಳಿದರೆ ಅವರನ್ನು ಕಟ್ಟಿ ಹಾಕಿ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬ್ಯಾನರ್ಜಿ, ಸ್ಥಳೀಯ ಬಿಜೆಪಿ ನಾಯಕರು ನೀವಿರುವ ಪ್ರದೇಶಗಳಿಗೆ ಬಂದರೆ, ಅವರಿಗೆ ಅಲ್ಲಿಂದ ಘೇರಾವ್ ಹಾಕಿ, ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬಂದರೆ ಅವರ ತಂದೆ ಮತ್ತು ಅಜ್ಜನ ಪ್ರಮಾಣಪತ್ರವನ್ನು ತೋರಿಸಲು ಹೇಳಿ ಎಂದಿದ್ದಾರೆ.
ಇದನ್ನೂ ಓದಿ:ಬಸ್ ಪ್ರಯಾಣಿಕರ 100 ತಂಗುದಾಣ ನಿರ್ಮಾಣ ಗುರಿ
ಬಿಜೆಪಿ ನಾಯಕರಿಗೆ ಮೊದಲು ಅವರ ಪೂರ್ವಜರ ಪ್ರಮಾಣಪತ್ರಗಳನ್ನು ತರುವಂತೆ ಹೇಳಿ, ಆ ಬಳಿಕ ಪ್ರಚಾರಕ್ಕೆ ಅವಕಾಶ ನೀಡಿ. ಅಲ್ಲಿಯವರೆಗೆ ಅವರನ್ನು ಮರಗಳಿಗೆ ಕಟ್ಟಿಹಾಕಿ, ಆದರೆ ಅವರ ಮೇಲೆ ಕೈ ಎತ್ತಬೇಡಿ, ನಾನು ಶಾಂತಿಪ್ರಿಯನು, ಪ್ರಮಾಣಪತ್ರವನ್ನು ತಂದ ಬಳಿಕ ಅವರನ್ನು ಬಿಚ್ಚಿ ಬಿಡಿ ಎಂದರು. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಉದ್ದೇಶಿಸಿ, ನಿಮ್ಮ ಸರ್ಕಾರ ಕೇಳುತ್ತಿರುವ ಪ್ರಮಾಣಪತ್ರಗಳನ್ನು ಮೊದಲು ನೀವು ತೋರಿಸಿ ಎಂದರು.
ರಾಷ್ಟ್ರೀಯ ನಾಗರಿಕರ ನೋಂದಣಿಯ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದ ತೃಣಮೂಲ ಕಾಂಗ್ರೆಸ್, ವಿಶೇಷ ಪರಿಷ್ಕರಣೆಯ ವಿರುದ್ಧವೂ ಕೂಡ ಕಠಿಣ ನಿಲುವನ್ನು ತೆಗೆದುಕೊಂಡಿದೆ, ಇದು ತಮ್ಮ ಬೆಂಬಲಿಗರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ತಂತ್ರವಾಗಿದೆ ಎಂದು ಆರೋಪಿಸಿದೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಜನರಿಗೆ, ವಿಶೇಷವಾಗಿ ವೃದ್ಧರಲ್ಲಿ ಅನೇಕರು ಮನೆಯಲ್ಲೇ ಹೆರಿಗೆ ಮಾಡಿಕೊಂಡಿದ್ದಾರೆ. ಆದ್ದರಿಂದ ಜನನ ಪ್ರಮಾಣಪತ್ರಗಳನ್ನು ನೀಡುವುದು ಕಷ್ಟಕರವಾಗಿರುತ್ತದೆ ಎಂದು ಹೇಳಿದ್ದಾರೆ. ಈ ನಡುವೆ ಎಲ್ಲರೂ ಜನನ ಪ್ರಮಾಣಪತ್ರಗಳನ್ನು ತೋರಿಸುವ ಅಗತ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಎರಡು ದಿನಗಳ ಹಿಂದೆ ಚುನಾವಣಾ ಆಯೋಗವು ದೇಶಾದ್ಯಂತ ಎಸ್‌ಐಆರ್ ಅನ್ನು ಜಾರಿಗೆ ತರುವ ಘೋಷಣೆಯ ಮಾಡಿದ ಬಳಿಕ ವಿರೋಧ ಪಕ್ಷಗಳಿಂದ ದೇಶ್ಯಾದ್ಯಂತ ವಿರೋಧ ವ್ಯಕ್ತವಾಗಿದೆ.
ಎಸ್‌ಐಆರ್ ಮತ್ತು ಎನ್‌ಆರ್‌ಸಿ ಪ್ರಕ್ರಿಯೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ 57 ವರ್ಷದ ಪ್ರದೀಪ್ ಕರ್ ಅವರ ಕುಟುಂಬವನ್ನು ಭೇಟಿ ಮಾಡಿದ ನಂತರ ಅಭಿಷೇಕ್ ಬ್ಯಾನರ್ಜಿ ಇಂದು ಈ ಹೇಳಿಕೆ ನೀಡಿದ್ದಾರೆ. ಕರ್ ಅವರ ಸಾವನ್ನು ಎಸ್‌ಐಆರ್‌ಗೆ ಹೋಲಿಕೆ ಮಾಡಿರುವ ಬ್ಯಾನರ್ಜಿ, ಎನ್‌ಆರ್‌ಸಿ ಮತ್ತು ಎಸ್‌ಐಆರ್ ಬಗ್ಗೆ ಆತಂಕದಿಂದ ಕರ್ ನಿಧನರಾಗಿದ್ದಾರೆ.
ಮೃತ ಕರ್ ಹೆದರಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕಾರಣ ಎಂದು ಆರೋಪಿಸಿರುವ ಸಂಸದ ಬ್ಯಾನರ್ಜಿ, ಸಾಮಾನ್ಯ ನಾಗರಿಕರಿಂದ ಕೇಳುತ್ತಿರುವ ದಾಖಲೆಗಳನ್ನು, ನಿಮ್ಮಿಂದ ಒದಗಿಸಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು.(ಏಜೆನ್ಸೀಸ್)