SIRಗೆ ಒತ್ತಡ ಹೇರಿದರೆ ಬಿಜೆಪಿ, ಚುನಾವಣಾ ಆಯೋಗದ ಕಾಲು ಮುರಿಯುತ್ತೇವೆ ಎಂದ ಬಂಗಾಳದ ಸಚಿವ Firhad Hakim

Firhad Hakim
Published on

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (SIR), ಪೌರತ್ವ ತಿದ್ದುಪಡಿ ಕಾಯ್ದೆ (CAA) ಯೊಂದಿಗೆ ಜೋಡಿಸಲು ಬಿಜೆಪಿ ಮತ್ತು ಚುನಾವಣಾ ಆಯೋಗ ಒತ್ತಡ ಹೇರಿದರೆ ನಾನು ಅವರ ಕಾಲುಗಳನ್ನು ಮುರಿಯುತ್ತೇನೆ ಎಂದು ಸಚಿವ ಫಿರ್ಹಾದ್ ಹಕೀಮ್ (Firhad Hakim) ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಕೀಮ್, ರಾಜ್ಯದ ಒಬ್ಬನೇ ಒಬ್ಬ ಅರ್ಹ ಮತದಾರರ ಹೆಸರನ್ನು ತೆಗೆದುಹಾಕಿದರೂ, ನಾವು SIR ಅನ್ನು ವಿರೋಧಿಸುತ್ತೇವೆ ಎನ್ನುವುದನ್ನು ಪಕ್ಷದ ಪರವಾಗಿ ಸ್ಪಷ್ಟಪಡಿಸಿದ್ದೇನೆ, ಮತದಾನ ಪಟ್ಟಿ ಪರಿಷ್ಕರಣೆಯನ್ನು "ಹಿಂಬಾಗಿಲಿನ NRC" ಎಂದು ಕರೆದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮಾತನ್ನು ಸಮರ್ಥಿಸಿಕೊಂಡರು.

ಬಿಜೆಪಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಹಕೀಮ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರದಲ್ಲಿ ಇರುವವರೆಗೂ, ರಾಜ್ಯದಲ್ಲಿ NRC ಜಾರಿಗೆ ತರುವ ಸಾಧ್ಯವಿಲ್ಲ ಎಂದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಂಗಾಳ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್, ರಾಜ್ಯದ ಒಬ್ಬನೇ ಒಬ್ಬ ನೈಜ ಮತದಾರನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ. ಪಟ್ಟಿಯು ಶೇಕಡಾ 100 ರಷ್ಟು ನ್ಯಾಯಯುತ ಮತ್ತು ಪಾರದರ್ಶಕವಾಗಿರುತ್ತದೆ ಎಂದರು.

ವಿರೋಧ ಪಕ್ಷಗಳು ಎಸ್​​ಐಆರ್​​ ಪ್ರಕ್ರಿಯೆಯನ್ನು, ಬಡವರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿರುವ ಆಯಾಮ ಎಂದು ಆರೋಪಿಸಿದ್ದು, ಈ ಹೇಳಿಕೆಗಳನ್ನು ಅಲ್ಲಗಳೆದಿರುವ ಚುನಾವಣಾ ಆಯೋಗ, ವಲಸೆ ಬಂದವರು, ನಕಲಿ ಗುರುತಿನ ಚೀಟಿಗಳನ್ನು ಹೊಂದಿರುವವರು ಅಥವಾ ಮರಣ ಹೊಂದಿದವರ ಹೆಸರುಗಳನ್ನು ಮಾತ್ರ ತೆಗೆದುಹಾಕಲಾಗುತ್ತದೆ ಎಂದು ತಿಳಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲು ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮಂಗಳವಾರ(ಅ 29) ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಮತದಾರರ ಗುರುತಿನ ಕಾರ್ಯವಿಧಾನಗಳು ಮತ್ತು ಹೊಸ ಎಣಿಕೆ ನಮೂನೆಗಳ ಬಗ್ಗೆ ಪಕ್ಷದ ಪ್ರತಿನಿಧಿಗಳು ಆಯೋಗದ ಮುಖ್ಯಸ್ಥರೊಂದಿಗೆ ಘರ್ಷಣೆ ನಡೆಸಿದರು ಎಂದು ವರದಿಯಾಗಿದೆ.

ಬಿಹಾರದಲ್ಲಿ ಪರಿಚಯಿಸಲಾಗಿರುವ ಎಸ್‌ಐಆರ್ ಪ್ರಕ್ರಿಯೆಯು ಭಾರಿ ವಿವಾದಕ್ಕೆ ಕಾರಣವಾಗಿದೆ. ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ಮತದಾರರ ಪಟ್ಟಿಯಿಂದ ಸುಮಾರು 66 ಲಕ್ಷ ಹೆಸರುಗಳನ್ನು ಹೊರಗಿಡಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net