

ಶಿವಮೊಗ್ಗ: ಸರ್ ಎಂ.ವಿಶ್ವೇಶ್ವರಯ್ಯ ಅವರು ರಾಷ್ಟ್ರವನ್ನು ನಿರ್ಮಾಣ ಮಾಡಿದಂತಹ ಮಹಾನ್ ಮೇಧಾವಿ ಎಂದು ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು.
ಬಿ.ಎಚ್.ರಸ್ತೆಯ ಮೈನ್‌ಮಿಡ್ಲ್ ಸ್ಕೂಲ್ ಆವರಣದಲ್ಲಿ ಗುರುವಾರ ಸರ್ ಎಂವಿ ಅಭಿಮಾನಿ ಬಳಗ, ತಾಲೂಕು ಬ್ರಾಹ್ಮಣ ಸೇವಾ ಸಂಘ ಹಾಗೂ ಅನೇಕ ಸಂಘ ಸಂಸ್ಥೆಗಳು ನಿರ್ಮಿಸಿದ ಸರ್ ಎಂವಿ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.
ವಿಶ್ವೇಶ್ವರಯ್ಯ ಅವರು ಪ್ರಪಂಚದಲ್ಲಿರುವ ಮೇಧಾವಿಗಳಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಇಡೀ ಪ್ರಪಂಚಕ್ಕೆ ಅವರ ಕೊಡುಗೆ ಅಮೂಲ್ಯವಾದದ್ದು. ಅವರ ಮಾದರಿಯಲ್ಲಿ ವಿದ್ಯೆ ಕಲಿತು ವಿದ್ಯಾರ್ಥಿಗಳು ಜೀವನದಲ್ಲಿ ಬಹಳ ಉತ್ತುಂಗಕ್ಕೆ ಬೆಳೆಯಬೇಕಿದೆ. ಎಲ್ಲ ಇಂಜಿನಿಯರ್‌ಗಳಿಗೂ ಸರ್ ಎಂವಿ ಮಾದರಿಯಾಗಿದ್ದರು. ಅವರ ಕಾಲದಲ್ಲಿ ಕೇವಲ ಸೇತುವೆ, ಕೈಗಾರಿಕೆ, ಡ್ಯಾಮ್‌ಗಳಷ್ಟೇ ನಿರ್ಮಾಣ ಮಾಡದೆ ಮಹಾನ್ ರಾಷ್ಟ್ರಭಕ್ತರಾಗಿ ಇಡೀ ರಾಷ್ಟ್ರವನ್ನು ನಿರ್ಮಾಣ ಮಾಡಿದಂತಹ ಕೊಡುಗೆ ಅವರಿಗೆ ಸಲ್ಲುತ್ತದೆ ಎಂದರು.
ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ವೆಂಕಟೇಶ್‌ರಾವ್ ಮಾತನಾಡಿ, ವಿಶ್ವೇಶ್ವರಯ್ಯ ಅವರ ಹೆಸರಿನ ನಾಮಫಲಕವನ್ನು ಶೀಘ್ರವೇ ಈ ರಸ್ತೆಯಲ್ಲಿ ಹಾಕಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ್ ಭಾಗವತ್, ಅಂಕಣಕಾರ ಸುಂದರ್‌ರಾಜ್, ಕೆಎಸ್‌ಎಸ್‌ಐಡಿಸಿ ಮಾಜಿ ಉಪಾಧ್ಯಕ್ಷ ಎಸ್.ದತ್ತಾತ್ರಿ, ಕರ್ನಾಟಕ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಹಯವಧನ ಉಪಾಧ್ಯಾಯ, ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿಶಂಕರ್ ಉಪಸ್ಥಿತರಿದ್ದರು.