ಸರ್ ಬೇಗ ಮದುವೆಯಾಗಿ, ನಿಮ್ಮ ಸ್ವೀಟ್ ಆರ್ಡರ್​ಗೆ ಕಾಯುತ್ತಿದ್ದೇವೆ ಎಂದಿದ್ದಕ್ಕೆ ನಾಚಿ ನೀರಾದ ರಾಹುಲ್ ಗಾಂಧಿ| Rahul Gandhi

ವಿಜಯವಾಣಿ (81)
Published on

New Delhi: ದೀಪಾವಳಿ ಸಂದರ್ಭದಲ್ಲಿ ಇಂದು(ಅ. 20) ಹಳೆ ದೆಹಲಿಯ 200 ವರ್ಷಗಳ ಹಳೆಯ ಐತಿಹಾಸಿಕ ಘಂಟೆವಾಲ ಸ್ವೀಟ್ ಅಂಗಡಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಅಂಗಡಿಯಲ್ಲಿ ಇಮಾರ್ತಿ ಮತ್ತು ಬೇಸನ್ ಲಡ್ಡಸ್‌ಗಳನ್ನು ತಯಾರಿಸಿದ್ದರು.

ತಮ್ಮ ಎಕ್ಸ್​​ ಖಾತೆಯಲ್ಲಿ ರಾಹುಲ್ ಗಾಂಧಿ ಹಂಚಿಕೊಂಡಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋದಲ್ಲಿ ಘಂಟೆವಾಲ ಸ್ವೀಟ್ ಅಂಗಡಿ ಮಾಲೀಕ ಸುಶಾಂತ್ ಜೈನ್ ಹೇಳಿದ ಮಾತೊಂದು ಸಖತ್ ವೈರಲ್ ಆಗುತ್ತಿದೆ. ಸರ್ ನೀವು ಬೇಗನೆ ಮದುವೆಯಾಗಿ, ನಿಮ್ಮ ಮದುವೆಯ ಸ್ವೀಟ್ ಆರ್ಡರ್ ಪಡೆಯಲು ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಮಾಲೀಕ ಸುಶಾಂತ್ ಜೈನ್ ಮಾತಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಚಿ ನೀರಾಗಿದ್ದು, ಮುಗುಳ್ನಕ್ಕಿದ್ದಾರೆ.

ಇನ್ನೂ ಈ ಕುರಿತು ಎಎನ್​ಐ ಜೊತೆ ಮಾತನಾಡಿರುವ ಅಂಗಡಿ ಮಾಲೀಕ ಸುಶಾಂತ್, ರಾಹುಲ್ ಗಾಂಧಿಯನ್ನು ಭಾರತದ ಅತ್ಯಂತ ಮೋಸ್ಟ್ ಎಲೆಜೆಬಲ್ ಬ್ಯಾಚುಲರ್ ಎಂದು ಕರೆದಿದ್ದಾರೆ. ಅವರು ತಮ್ಮ ಸ್ನೇಹಿತರು, ಕುಟುಂಬಕ್ಕಾಗಿ ಸ್ವೀಟ್ ಖರೀದಿಸಲು ಬಯಸಿದ್ದರು. ಅವರನ್ನು ಸ್ವಾಗತ ಮಾಡಿ, ಇದು ನಿಮ್ಮದೇ ಅಂಗಡಿ ಸರ್ ಅಂತ ಹೇಳಿದೆ. ಅವರು ಸ್ವೀಟ್ ತಯಾರಿಸುವ ಮತ್ತು ಅದನ್ನು ರುಚಿ ನೋಡುವುದಾಗಿ ಹೇಳಿದರು.

ಅವರ ತಂದೆ ದಿವಂಗತ ರಾಜೀವ್ ಗಾಂಧಿ ಜಿ, ಇಮಾರ್ತಿಯನ್ನು ಇಷ್ಟಪಡುತ್ತಿದ್ದರು. ನಾನು ಅದನ್ನು ಮಾಡಲು ಪ್ರಯತ್ನಿಸಿ ಎಂದು ಹೇಳಿದೆ. ಆದ್ದರಿಂದ ಅವರು ಇಮಾರ್ತಿ ತಯಾರಿಸಿದರು. ಅವರಿಗೆ ಬೇಸನ್ ಲಡ್ಡುಗಳು ತುಂಬಾ ಇಷ್ಟ, ಅದನ್ನು ಸಹ ತಯಾರಿಸಿದರು. ಈ ವೇಳೆ ನಾನು ನೀವು ರಾಹುಲ್ ಜೀ ದಯವಿಟ್ಟು ನೀವು ಬೇಗ ಮದುವೆಯಾಗಿ, ನಿಮ್ಮ ಮದುವೆಯ ಸಿಹಿ ತಿಂಡಿಯ ಆರ್ಡರ್ ಪಡೆಯಲು ನಾವು ಕಾಯುತ್ತಿದ್ದೇವೆ ಅಂತ ಹೇಳಿದೆ ಎಂದು ತಿಳಿಸಿದರು.

ಇಂದು ಮುಂಜಾನೆ ಘಂಟೆವಾಲಾ ಸ್ವೀಟ್ ಅಂಗಡಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲಿ ಇಮಾರ್ತಿ ಮತ್ತು ಬೇಸನ್ ಲಡ್ಡಸ್‌ಗಳನ್ನು ತಯಾರಿಸಲು ಪ್ರಯತ್ನಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು. ಈ ಬಗ್ಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಜೊತೆಗೆ, ಹಳೆ ದೆಹಲಿಯ ಪ್ರಸಿದ್ಧ ಮತ್ತು ಐತಿಹಾಸಿಕ ಘಂಟೆವಾಲಾ ಸಿಹಿತಿಂಡಿ ಅಂಗಡಿಯಲ್ಲಿ ನನ್ನ ಕಯಲ್ಲಿ ಇಮಾರ್ತಿ ಮತ್ತು ಬೇಸನ್ ಲಡ್ಡಸ್‌ಗಳನ್ನು ತಯಾರಿಸಲು ನಾನು ಪ್ರಯತ್ನಿಸಿದೆ. ಶತಮಾನಗಳಷ್ಟು ಹಳೆಯದಾದ ಈ ಪ್ರತಿಷ್ಠಿತ ಅಂಗಡಿಯ ಮಾಧುರ್ಯ ಇಂದಿಗೂ ಹಾಗೆಯೇ ಇದೆ.  ಶುದ್ಧ, ಸಾಂಪ್ರದಾಯಿಕ ಮತ್ತು ಹೃದಯಸ್ಪರ್ಶಿ. ದೀಪಾವಳಿಯ ನಿಜವಾದ ಮಾಧುರ್ಯವು ಕೇವಲ ತಟ್ಟೆಯಲ್ಲಿ ಮಾತ್ರವಲ್ಲ, ಸಂಬಂಧಗಳು ಮತ್ತು ಸಮಾಜದಲ್ಲಿಯೂ ಇದೆ ಎಂದು ಬರೆದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net