ಲಾಕ್​ಡೌನ್​ನಲ್ಲಿ 'ಸಿಂಗಲ್ಸ್​' ಕಷ್ಟಕ್ಕೆ ಸ್ಪಂದಿಸಿದೆ ಈ ಸರ್ಕಾರ; ಸೆಕ್ಸ್​ಗೆ ಸಂಗಾತಿ ಹುಡುಕಿಕೊಳ್ಳಲು ಸಲಹೆ

Covid 19
Published on

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕರೊನಾ ಲಾಕ್​ಡೌನ್ ಇದೆ. ಇದರಿಂದಾಗಿ ಜನರು ದಿನದ ಬಹುಪಾಲು ಸಮಯ ಮನೆಯಲ್ಲಿಯೇ ಕಳೆಯಬೇಕು. ಕೆಲಸಕ್ಕೆಂದು ಕಚೇರಿಗಳಿಗೆ ಹೋಗುವಂತಿಲ್ಲ. ಆಯಾ ರಾಷ್ಟ್ರಗಳು ನೀಡಿದ ಮಾರ್ಗಸೂಚಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಮನೆಯಲ್ಲಿ ಕುಟುಂಬದವರೊಟ್ಟಿಗೆ ಇರುವವರಿಗೆ ಅಷ್ಟೊಂದು ಏಕತಾನತೆ ಕಾಡದು. ಬೇಸರ ಉಂಟಾಗದು. ಆದರೆ ಸಿಂಗಲ್​ (ಏಕಾಂಗಿ) ಆಗಿರುವವರಿಗೆ ಸಮಯ ಕಳೆಯುವುದೇ ಕಷ್ಟವಾಗಿದೆ. ಅಂತಹ ಏಕಾಂಗಿ ಮಹಿಳೆ, ಪುರುಷರಿಗೆ ಡಚ್​ ಸರ್ಕಾರ ಒಂದು ವಿಶಿಷ್ಟ ಸಲಹೆ ನೀಡಿದೆ. ಅದಕ್ಕೆ ಸಂಬಂಧಪಟ್ಟಂತೆ ಹೊಸ ಮಾರ್ಗಸೂಚಿಯನ್ನೇ ಬಿಡುಗಡೆ ಮಾಡಿದೆ.

ಲಾಕ್​ಡೌನ್​ನಲ್ಲಿ ಕಾಡುವ ಏಕತಾನತೆಯಿಂದ ಪಾರಾಗಲು ಒಬ್ಬಂಟಿ (ಪುರುಷ/ಮಹಿಳೆ)ಯಾಗಿ ಇರುವವರು ಸೆಕ್ಸ್​ಗಾಗಿ ಸಂಗಾತಿಗಳನ್ನು ಹುಡುಕಿಕೊಳ್ಳಿ ಎಂದು ನೆದರ್​​ಲ್ಯಾಂಡ್​ನ ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕಾಗಿ ಇರುವ ರಾಷ್ಟ್ರೀಯ ಸಂಸ್ಥೆ ತನ್ನ ಹೊಸ ಮಾರ್ಗಸೂಚಿಯಲ್ಲಿ ಹೇಳುವ ಮೂಲಕ, ಸಿಂಗಲ್​ ಇರುವವರಿಗೆ ಬಂಪರ್​ ಐಡಿಯಾ ಕೊಟ್ಟಿದೆ.

ಲಾಕ್​ಡೌನ್​ ವೇಳೆ ಸಮಯ ಕಳೆಯಲು ಲೈಂಗಿಕ ಸಂಪರ್ಕ ಹೊಂದಿ. ಆದರೆ ಸೂಕ್ತ ಸಂಗಾತಿಯನ್ನು ನೀವೇ ಹುಡುಕಿಕೊಳ್ಳಿ. ಹೀಗೆ ಸೆಕ್ಸ್​ ಜತೆಗಾರನನ್ನು/ ಜತೆಗಾರ್ತಿಯನ್ನು ಹುಡುಕಿಕೊಳ್ಳುವಾಗ ಎಚ್ಚರವಿರಲಿ. ಅವರಲ್ಲಿ ಕರೊನಾ ಲಕ್ಷಣಗಳು ಇರಬಾರದು. ಒಮ್ಮೆ ಅವರನ್ನು ಮನೆಗೆ ಕರೆದುಕೊಂಡು ಬಂದ ಮೇಲೆ ಸೋಂಕಿನ ಲಕ್ಷಣಗಳು ಕಂಡುಬಂದರೆ, ಯಾವ ಕಾರಣಕ್ಕೂ ಲೈಂಗಿಕ ಕ್ರಿಯೆ ನಡೆಸಬೇಡಿ ಎಂದು ಡಚ್​ ಸರ್ಕಾರ ಸಲಹೆ ನೀಡಿದೆ.

ಇದು ಪತಿ ಅಥವಾ ಪತ್ನಿಯಿಂದ ದೂರ ಆಗಿ ಒಂಟಿಯಾಗಿ ಜೀವಿಸುತ್ತಿರುವವರಿಗೆ ನೀಡಲಾದ ಮಾರ್ಗಸೂಚಿ. ಡಚ್​ ಸರ್ಕಾರ ಲಾಕ್​ಡೌನ್​ ಮಾರ್ಗಸೂಚಿ ಬಿಡುಗಡೆ ಮಾಡುತ್ತಿದ್ದಂತೆ ಅಲ್ಲಿನ ಕೆಲವು ವಿಶ್ಲೇಷಕರು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಸಿಂಗಲ್ ಆಗಿರುವವರ ದೈಹಿಕ ವಾಂಛೆಯ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದ್ದರು.

ಹಾಗಾಗಿ ಪರಿಷ್ಕೃತ ಗೈಡ್​ಲೈನ್​ ನೀಡಿರುವ ಸರ್ಕಾರ, ಒಬ್ಬಂಟಿಯಾಗಿರುವವರೂ ಲೈಂಗಿಕ ಸಂಪರ್ಕವನ್ನು ಬಯಸುತ್ತಾರೆ ಎಂಬುದು ಸತ್ಯ. ಹಾಗಾಗಿ ಈ ಅವಕಾಶ ನೀಡಲಾಗಿದೆ. ನೀವು ಇಷ್ಟು ದಿನ ಯಾರೊಂದಿಗಾದರೂ ನಿರಂತರವಾಗಿ ಸೆಕ್ಸ್​ನಲ್ಲಿ ತೊಡಗಿದ್ದರೆ ಮೊದಲು ಅವರನ್ನೇ ಸಂಪರ್ಕಿಸಿ. ಇಲ್ಲವಾದರೆ ಜಾಗರೂಕತೆಯಿಂದ ಹುಡುಕಿಕೊಳ್ಳಿ ಎಂದು ಹೇಳಿದೆ.

ಹಾಗೇ ತುಂಬ ಜನರ ಸಂಪರ್ಕಕ್ಕೆ ಹೋದರೆ, ಅಲ್ಲಿ ಕೂಡ ಕರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದನ್ನು ಮರೆಯದಿರಿ ಎಂದೂ ತಿಳಿಸಿದೆ.

ನೆದರ್​ಲ್ಯಾಂಡ್​ನಲ್ಲಿ 43,880 ಸೋಂಕಿತರು ಇದ್ದು, 5,500 ಜನರು ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net