ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ; ಮತ್ತಿಬ್ಬರನ್ನು ಬಂಧಿಸಿದ ಎಸ್​ಐಟಿ; ಬಂಧಿತರ ಸಂಖ್ಯೆ 4ಕ್ಕೆ ಏರಿಕೆ| Zubeen Garg

Untitled design - 2025-09-27T112857.104
Published on

Zubeen Garg: ಖ್ಯಾತ ಬಾಲಿವುಡ್ ಮತ್ತು ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಅಸ್ಸಾಂ ಎಸ್​ಐಟಿ ತಂಡ, ಜುಬೀನ್ ಬ್ಯಾಂಡ್​ಮೇಟ್ ಶೇಖರ್ ಜ್ಯೋತಿ ಗೋಸ್ವಾಮಿ ಮತ್ತು ಸಹ ಗಾಯಕ ಅಮೃತಪ್ರವ ಮಹಾಂತ ಅವರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂದು ಶುಕ್ರವಾರ(ಅ. 03) ವರದಿಯಾಗಿದೆ.

ಸೆ. 19ರಂದು ಈಶಾನ್ಯ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಲು ಸಿಂಗಾಪುರಕ್ಕೆ ತೆರಳಿದ್ದ ಜುಬೀನ್, ಈ ವೇಳೆ ಸಮುದ್ರ ವಿಹಾರ ನೌಕೆಯಲ್ಲಿ ಹಠಾತ್ ನಿಧನರಾಗಿದ್ದರು. ಈ ವೇಳೆ ಸಂದರ್ಭದಲ್ಲಿ ಗೋಸ್ವಾಮಿ ಮತ್ತು ಮಹಾಂತ ಇಬ್ಬರೂ ಗಾರ್ಗ್ ಅವರೊಂದಿಗೆ ಇದ್ದರು ಎನ್ನಲಾಗಿದೆ. ಗೋಸ್ವಾಮಿ, ಜುಬೀನ್ ಈಜುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ಮಹಾಂತಾ ಇಡೀ ಘಟನೆಯನ್ನು ತಮ್ಮ ಸೆಲ್‌ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಕಳೆದ ಆರು ದಿನಗಳಿಂದ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಸ್​ಐಟಿ ಮೂಲಗಳು ತಿಳಿಸಿವೆ.

ಜುಬೀನ್ ಅವರ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಮತ್ತು ಈಶಾನ್ಯ ಭಾರತ ಉತ್ಸವ ವ್ಯವಸ್ಥಾಪಕ ಶ್ಯಾಮಕಾನು ಮಹಾಂತ ಅವರನ್ನು ಬುಧವಾರ ಬಂಧಿಸಲಾಗಿದ್ದು, ಗೋಸ್ವಾಮಿ ಮತ್ತು ಮಹಾಂತ ಅವರೊಂದಿಗೆ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಗುರವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಶರ್ಮಾ ಮತ್ತು ಶ್ಯಾಮಕಾನು ಮಹಾಂತ ವಿರುದ್ಧ ಕೊಲೆ, ಕೊಲೆಗೆ ಸಮಾನವಾದ ಅಪರಾಧಿ ನರಹತ್ಯೆ, ಕ್ರಿಮಿನಲ್ ಪಿತೂರಿ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪಗಳ ಸೆಕ್ಷನ್​ಗಳನ್ನು ಹಾಕಿದೆ.

ಈ ಕುರಿತು ಎಎನ್​ಐ ಜೊತೆ ಮಾತನಾಡಿರುವ ಜುಬೀನ್ ಪತ್ನಿ ಗರಿಮಾ ಗಾರ್ಗ್​, ತನಿಖೆ ನಡೆಯುತ್ತಿದ್ದು, ಈಗ ನಾವು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡವುದು ಸರಿಯಲ್ಲ. ನನಗೆ ಅದರ ಬಗ್ಗೆ ಹೆಚ್ಚಿನ ಜ್ಞಾನವಿಲ್ಲ, ಆದ್ದರಿಂದ ಕಾನೂನು ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನಮ್ಮ ಕಾನೂನು ವ್ಯವಸ್ಥೆಯ ಮೂಲಕ ನಮಗೆ ನ್ಯಾಯ ಸಿಗುತ್ತದೆ. ತನಿಖೆ ಸರಿಯಾಗಿ ನಡೆಯುತ್ತದೆ ಎಂಬ ನಂಬಿಕೆ ಇದೆ. ಆ ದಿನ ನಿಜವಾಗಿಯೂ ಏನಾಯಿತು ಎಂದು ನಮಗೆ ಶೀಘ್ರದಲ್ಲೇ ತಿಳಿಯುತ್ತದೆ. ಯಾರು ತಪ್ಪಿತಸ್ಥರು ಎಂದು ನಾವು ತಿಳಿದುಕೊಳ್ಳುತ್ತೇವೆ. ಯಾರಾದರೂ ಜವಾಬ್ದಾರರಾಗಿದ್ದರೆ, ಅವರಿಗೆ ಶೀಘ್ರದಲ್ಲೇ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net