ಮಣ್ಣಲ್ಲಿ ಮಣ್ಣಾದ ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ

spb
Published on

ಚೆನ್ನೈ: ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ(74) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ, ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ನೆರವೇರಿತು.

ಸಂಗೀತ ಸ್ವರ ಲೋಕದ ಮಾಂತ್ರಿಕ ಎಂದೇ ಪ್ರಸಿದ್ಧರಾಗಿದ್ದ ಎಸ್​ಪಿಬಿ ಅವರು ಅನಾರೋಗ್ಯದಿಂದ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಎಸ್​ಪಿಬಿ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ರಾತ್ರಿ ತಿರುವಳ್ಳೂರು ಜಿಲ್ಲೆಯ ತಾಮರೈಪಾಕಂನಲ್ಲಿರುವ ಅವರ ತೋಟದ ಮನೆಗೆ ಸ್ಥಳಾಂತರಿಸಲಾಗಿತ್ತು. ಮನೆಯ ಬಳಿ ಜಮಾಯಿಸಿದ ಸಾವಿರಾರು ಅಭಿಮಾನಿಗಳು ಎಸ್​ಪಿಬಿ ಅವರ ಅಂತಿಮ ದರ್ಶನ ಪಡೆದರು. ಬಾಲು ಫಾರ್ಮ್​ಹೌಸ್​ನಲ್ಲೇ ಎಸ್​ಪಿಬಿ ಅಂತ್ಯಕ್ರಿಯೆ ಮಾಡಲಾಯಿತು. ಅವರ ಪುತ್ರ ಚರಣ್​ ಅವರು ಅಂತ್ಯಕ್ರಿಯೆ ವಿಧಿವಿಧಾನಗಳನ್ನು ನೆರವೇರಿಸಿದರು. ಎಸ್​ಪಿಬಿ ಅಂತ್ಯಕ್ರಿಯೆಯಲ್ಲಿ ಅನೇಕ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು. ಬಾರದ ಲೋಕಕ್ಕೆ ತೆರಳಿದ ಸಂಗೀತ ಲೋಕದ 'ಧ್ರುವತಾರೆ' ಎಸ್​.ಪಿ. ಬಾಲಸುಬ್ರಹ್ಮಣ್ಯಂ ಇನ್ನು ನೆನಪು ಮಾತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net