ಕರೊನಾ ನಿರ್ಬಂಧ ಉಲ್ಲಂಘಿಸಿದ 10 ಭಾರತೀಯರ ಗಡಿಪಾರು; ಮತ್ತೆ ಆ ದೇಶಕ್ಕೆ ಕಾಲಿಡುವಂತಿಲ್ಲ

Singapore- deport
Published on

ನವದೆಹಲಿ: ಕರೊನಾ ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಲಾಕ್​ಡೌನ್​ ಮಾಡಲಾಗುತ್ತಿದೆ. ಹಲವು ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ ಇದು ಜಾರಿಯಲ್ಲಿದೆ. ಇದನ್ನು ಪಾಲಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಅಂಥವರ ವಿರುದ್ಧ ಕೇಸ್​ ಕೂಡ ದಾಖಲಿಸಲಾಗುತ್ತಿದೆ.

ಆದರೆ, ಕರೊನಾ ನಿರ್ಬಂಧ ಪಾಲಿಸದ 10 ಭಾರತೀಯರನ್ನು ದೇಶದಿಂದಲೇ ಗಡಿಪಾರು ಮಾಡಿದೆ ಸಿಂಗಾಪುರ. ಅಷ್ಟೇ ಅಲ್ಲ, ಮತ್ತೆಂದೂ ತನ್ನ ದೇಶಕ್ಕೆ ಕಾಲಿರಿಸದಂತೆ ಸೂಚಿಸಿದೆ.

ವ್ಯಾಸಂಗ ವೀಸಾ ಹಾಗೂ ಉದ್ಯೋಗ ವೀಸಾ ಪಡೆದು ಸಿಂಗಾಪುರದಲ್ಲಿ ನೆಲೆಸಿದ್ದ ಭಾರತೀಯರು ಈ ಶಿಕ್ಷೆಗೆ ಗುರಿಯಾಗಿದ್ದಾರೆ. ನಿಯಮ ಉಲ್ಲಂಘಿಸಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 50 ಸಾವಿರ ರೂ.ದಿಂದ ಒಂದು ಲಕ್ಷ ರೂ.ವರೆಗೆ ದಂಡವನ್ನೂ ವಿಧಿಸಲಾಗಿದೆ.

ಲಾಕ್​ಡೌನ್​ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿ ಅಥವಾ ತುರ್ತು ಸಂದರ್ಭ ಹೊರತು ಪಡಿಸಿ ಬೇರಾವುದಕ್ಕೂ ಮನೆ ಬಿಟ್ಟು ಹೊರಬರುವಂತಿರಲಿಲ್ಲ. ಆದರೆ, ಬಾಡಿಗೆ ಅಪಾರ್ಟ್​ಮೆಂಟ್​ವೊಂದರಲ್ಲಿ ಭಾರತೀಯರು ಪಾರ್ಟಿ ನಡೆಸಿದ್ದರು. ಇದು ಗೊತ್ತಾಗಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಅಪರಾಧ ಸಾಬೀತಾಗಿದ್ದರಿಂದ ನ್ಯಾಯಾಲಯ ಗಡಿಪಾರು ಶಿಕ್ಷೆ ವಿಧಿಸಿದೆ. ಅವರ ಪರವಾನಗಿಯನ್ನು ರದ್ದು ಪಡಿಸಲಾಗಿದೆ. ಮತ್ತೆಂದೂ ಸಿಂಗಾಪುರಕ್ಕೆ ಕಾಲಿಡದಂತೆಯೂ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net