ಭೋವಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡಿ

Published on

ಸಿಂಧನೂರು: ಭೋವಿ-ವಡ್ಡರ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ದುರುಗಪ್ಪ ಹಂಚಿನಾಳ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ.ಸದಾಶಿವ ಆಯೋಗ, ನ್ಯಾ.ರಾಮದಾಸ ಆಯೋಗ ಹಾಗೂ ನ್ಯಾ. ನಾಗಮೋಹನ್ ದಾಸ್ ಆಯೋಗ ರಚಿಸಿದ್ದು, ಕೊನೆಯದಾಗಿ ನ್ಯಾ. ನಾಗಮೋಹನ್ ದಾಸ್ ವರದಿ ಆಧರಿಸಿ

ರಾಜ್ಯ ಸರ್ಕಾರ ಆ.19 ರಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದಲ್ಲಿ ಒಳ ಮೀಸಲಾತಿಯನ್ನು ಮಾರ್ಪಾಡುಗಳೊಂದಿಗೆ ಜಾರಿ ಮಾಡಿ ಎಡಗೈಗೆ ಶೇ.6, ಬಲಗೈಗೆ ಶೇ.6, ಸ್ಪಶ್ಯ ಸಮುದಾಯಗಳಿಗೆ ಶೇ.5 ಮೀಸಲಾತಿ ನೀಡಿದೆ. ಇದರಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿ ಪರಿಶೀಲಿಸಿದಾಗ ಅದರಲ್ಲಿ ಭೋವಿ-ವಡ್ಡರ ಸಮಾಜಕ್ಕೆ ಅನ್ಯಾಯವಾಗಿದೆ.

ಭೋವಿ-ವಡ್ಡರ ಸಮಾಜದಿಂದ ಸ್ಪಶ್ಯ ಸಮುದಾಯದಲ್ಲಿ ಬರುವ ಇತರ ಜಾತಿಗಳೊಂದಿಗೆ ಶಿಕ್ಷಣ, ಉದ್ಯೋಗದಲ್ಲಿ ಪೈಪೋಟಿ ನಡೆಸಲು ಸಾಧ್ಯವಾಗಲ್ಲ. ಭೋವಿ-ವಡ್ಡರ ಜಾತಿಯನ್ನು ಬೇರ್ಪಡಿಸಿ, ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.

ಸಮಾಜದ ತಾಲೂಕು ಅಧ್ಯಕ್ಷ ಲಕ್ಷ್ಮಣ ಭೋವಿ, ಅಂಬಣ್ಣ ಗುಂಜಳ್ಳಿ, ರವಿ ಗುಂಜಳ್ಳಿ, ಶ್ಯಾಮಣ್ಣ ಕುರುಕುಂದ, ನಾಗರಾಜ ಕಲ್ಲೂರು, ವಿ.ಮರಿಯಪ್ಪ ಬಂಡಿ, ವೀರೇಶ ರಾಗಲಪರ್ವಿ, ಮಾರೆಪ್ಪ ರಾಗಲಪರ್ವಿ, ಜಿ.ಪಂಪಾಪತಿ, ವೆಂಕಟೇಶ ಹುಡಾ, ಮೇಘರಾಜ ಸೋಮಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net