

ಸಮ್ಯಕ್ ದೃಷ್ಟಿ ನಮ್ಮನ್ನು ರೂಪಾಂತರಗೊಳಿಸುತ್ತದೆ. ಯಾವುದನ್ನು ನಾವು ಸರಿಯಾಗಿ ತಿಳಿದುಕೊಳ್ಳುವೆವೋ ಆ ತರದ ಕೆಲಸಗಳನ್ನೇ ನಾವು ಮಾಡುತ್ತೇವೆ. ಆದ್ದರಿಂದ ನಾವು ಎನು ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ, ನಾವು ಏನು ತಿಳಿದುಕೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಸಮ್ಯಕ್ ದೃಷ್ಟಿ ನಮ್ಮನ್ನು ರೂಪಾಂತರ ಮಾಡುತ್ತದೆ. ನಮಗೊಂದು ಹೊಸ ದೃಷ್ಟಿಕೋನವನ್ನು ಕೊಡುತ್ತದೆ. ಆದ್ದರಿಂದ ಈ ಜಗತ್ತಿನಲ್ಲಿ ಪಾಪವನ್ನು ಮಾಡಬೇಡಿ ಎಂದು ಹೇಳುವುದು ವ್ಯರ್ಥವಾದ ಉಪದೇಶವಾಗುತ್ತದೆ. ಕಾರಣ ನಾವು ಯಾವತ್ತೂ ಪಾಪವನ್ನು ಹಿಡಿದುಕೊಂಡೇ ಇಲ್ಲ. ನಮ್ಮ ಕೈಯಲ್ಲಿ ಯಾವತ್ತು ಕೂಡ ಪುಣ್ಯವೇ ಇರುತ್ತದೆ. ಪುಣ್ಯ ಎಂದು ಹಿಡಿದುಕೊಂಡೇ ಪಾಪ ಕೃತ್ಯಗಳನ್ನು ಮಾಡುತ್ತಾ ಹೋಗುತ್ತೇವೆ. ನಾವು ಏನೇ ಕೆಲಸವನ್ನು ಮಾಡಲಿ ನಮಗೆ ಮಾತ್ರ ಒಳ್ಳೆಯದಾಗಿಲ್ಲ, ಕೆಟ್ಟದ್ದೇ ಆಗಿದೆ. ಒಳ್ಳೆಯದನ್ನೇ ಮಾಡಲು ಆರಂಭ ಮಾಡುತ್ತೇವೆ, ಆದರೆ ಕೊನೆಗೆ ಕೈಯಲ್ಲಿ ದುಃಖ ಸಮಸ್ಯೆ ದೌರ್ಭಾಗ್ಯಗಳೇ ಉಳಿಯುತ್ತವೆ. ಆದ್ದರಿಂದ ನಾವು ಯಾವ ಕರ್ಮಗಳನ್ನು ಮಾಡುತ್ತೇವೆ ಅದು ಮುಖ್ಯವಲ್ಲ, ನಮ್ಮ ಅಂತಃಕರಣದ ಒಳಗಡೆಗೆ ಯಾವ ದೃಷ್ಟಿಕೋನ ಇದೆ ಎನ್ನುವುದು ಬಹಳ ಮುಖ್ಯ.