

ಲಾಲ್ ಬಹಾದ್ದೂರ್ ಶಾಸ್ತ್ರಿ ತಾವು ಸನ್ಮಾರ್ಗದಲ್ಲಿ ನಡೆದರು. ಮಾತ್ರವಲ್ಲದೆ ಮಕ್ಕಳು ತಪ್ಪು ಮಾಡಿದಾಗ ತಿದ್ದಿ, ಬುದ್ಧಿ ಹೇಳಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಿದರು. ತಮ್ಮ ಅಧಿಕಾರವನ್ನು ಎಂದಿಗೂ ದುರುಪಯೋಗಪಡಿಸಿಕೊಳ್ಳದೇ ಭಾರತದ ಶ್ರೇಯೋಭಿವೃದ್ಧಿಗೋಸ್ಕರ ದುಡಿದ ಅವರ ಬದುಕು ಹಾಗೂ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾದರಿ.
ಓದುವುದೆಂದರೆ ನನಗೆ ಅಚ್ಚುಮೆಚ್ಚು. ಅದರಲ್ಲೂ ಹೊಸ-ಹೊಸ ವಿಷಯಗಳ ಪುಸ್ತಕಗಳೆಂದರೆ ಬಲು ಇಷ್ಟ. ಇತ್ತೀಚೆಗೆ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಕುರಿತಾದ ಅವರ ಜೀವನಚರಿತ್ರೆಯ ಪುಸ್ತಕ ಓದಿದಾಗ ಅವರ ಖಾಸಗಿ ಜೀವನದ ಬಗ್ಗೆ ಸಾಕಷ್ಟು ಕುತೂಹಲ ಹಾಗೂ ಆಶ್ಚರ್ಯವೂ ಉಂಟಾಯಿತು. ಅವರ ಜೀವನದ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದೆನಾದರೂ ‘ನಮ್ಮ ಹೆಮ್ಮೆಯ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ’ ಪುಸ್ತಕದಲ್ಲಿ ಶಾಸ್ತ್ರಿಯವರ ಖಾಸಗಿ ಜೀವನವನ್ನು ಲೇಖಕರು ಮನೋಜ್ಞವಾಗಿ ವಿವರಿಸಿದ್ದಾರೆ.
ಶಾಸ್ತ್ರೀಜಿ ಭಾರತದ ಪ್ರಧಾನಿಯಾಗಿದ್ದರು. ಇಡೀ ರಾಷ್ಟ್ರದ ಬಗ್ಗೆ ಚಿಂತೆ, ಚಿಂತನೆಗಳು, ಒತ್ತಡಗಳು ಸಾಮಾನ್ಯ. ಆದರೆ ಅವರು ಮನೆಗೆ ಬಂದಾಗ ಪ್ರಧಾನಿಯಾಗಿರುತ್ತಿರಲಿಲ್ಲ. ರಾಷ್ಟ್ರದ ಉನ್ನತ ಅಧಿಕಾರ ಸ್ಥಾನವನ್ನು ಏರಿದ್ದೇನೆ ಎಂಬ ಭಾವನೆಯೇ ಇರಲಿಲ್ಲವಂತೆ. ಕಚೇರಿಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಒತ್ತಡವಿರಲಿ, ಎಂತಹ ಸಮಸ್ಯೆಗಳೇ ಇರಲಿ ಅಥವಾ ದಣಿದಿರಲಿ, ಬಾಹ್ಯ ಒತ್ತಡವಿರಲಿ ಅದನ್ನು ಮನೆಯಲ್ಲಿ ಸ್ವಲ್ಪವೂ ತೋರಿಸುತ್ತಿರಲಿಲ್ಲ. ಮನೆಯಲ್ಲಿ ಸಂಬಂಧಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದರು. ಮನೆಯಲ್ಲಿ ತಾಯಿಗೆ ಮಗ, ಪತ್ನಿಗೆ ಪತಿ ಮತ್ತು ಮಕ್ಕಳಿಗೆ ತಂದೆಯಾಗಿದ್ದರು. ಕಚೇರಿಯಿಂದ ಮನೆಗೆ ಬಂದೊಡನೆ, ಧ್ಯಾನದ ಕೊಠಡಿಯಲ್ಲಿರುತ್ತಿದ್ದ ಅವರ ತಾಯಿ ರಾಮ್ುಲಾರಿ ದೇವಿ ಅವರು ಮೆಲುವಾಗಿ. ‘ಮಗೂ, ಬಂದೆಯಾ?’ ಎಂದು ಕೇಳುತ್ತಿದ್ದರಂತೆ. ಆಗ ಶಾಸ್ತ್ರಿಯವರು ತಾಯಿಯ ಕೊಠಡಿಗೆ ಹೋಗಿ ಅವರ ಪಕ್ಕದಲ್ಲಿ ಕುಳಿತು 5-10 ನಿಮಿಷ ಮಾತನಾಡಿದ ಬಳಿಕವಷ್ಟೇ ಅವರು ವಿಶ್ರಾಂತಿ ಪಡೆಯುತ್ತಿದ್ದರಂತೆ. ಶಾಸ್ತ್ರಿಯವರು ಪ್ರಧಾನಿಯಾಗಿ ಸೋವಿಯತ್ ರಷ್ಯಾ ಮುಂತಾದ ಕಡೆ ಭೇಟಿ ಕೊಟ್ಟಾಗಲೂ ಜೊತೆಯಲ್ಲಿ ಪತ್ನಿ ಲಲಿತಾದೇವಿಯವರನ್ನು ಕರೆದುಕೊಂಡು ಹೋಗಿದ್ದರಂತೆ. ಲಲಿತಾರವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಆದರೆ ಅವರ ಸೌಮ್ಯತೆ, ನಗುಮುಖಕ್ಕೆ ಎಲ್ಲ ದೇಶದವರೂ ಅವರನ್ನು ಗೌರವಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ದೆಹಲಿಯಲ್ಲಿ ಸೈಂಟ್ ಕೊಲಂಬಸ್ ಶಾಲೆಯಲ್ಲಿ ಆಡಳಿತ ಮಂಡಳಿ ನಿಗದಿಪಡಿಸಿದ ದಿನವೇ ವಿದ್ಯಾರ್ಥಿಗಳ ಪಾಲಕರು ಶಾಲೆಗೆ ಬಂದು ಮಕ್ಕಳ ರಿಪೋರ್ಟ್ ಕಾರ್ಡ್ನ್ನು ಪಡೆದುಕೊಳ್ಳಬೇಕೆಂಬ ನಿಯಮವಿತ್ತು. ಅನೇಕ ಮಕ್ಕಳ ತಂದೆ ಅಥವಾ ತಾಯಿ, ತಾವು ಅನ್ಯ ಕಾರ್ಯ ನಿಮಿತ್ತ ಒತ್ತಡದಲ್ಲಿದ್ದೇವೆ. ಹಾಗಾಗಿ ಶಾಲೆಗೆ ಬರಲಾಗುವುದಿಲ್ಲ ಎಂದು ಶಾಲೆಗೆ ಹೋಗದೆ ಬೇರೆ ಯಾರನ್ನಾದರೂ ರಿಪೋರ್ಟ್ ಕಾರ್ಡ್ ಪಡೆದುಕೊಳ್ಳಲು ಕಳುಹಿಸಿಬಿಡುತ್ತಿದ್ದರು. ಆದರೆ, ಶಾಸ್ತ್ರಿಯವರು ಕೇಂದ್ರ ಮಂತ್ರಿಯಾಗಿದ್ದುಕೊಂಡು, ಎಷ್ಟೇ ಕಾರ್ಯದ ಒತ್ತಡವಿದ್ದರೂ, ಬಿಡುವು ಮಾಡಿಕೊಂಡು ಶಾಲೆಗೆ ಹೋಗಿ ಮಗನ ವರದಿ ಪಡೆದುಕೊಳ್ಳುತ್ತಿದ್ದರು. ಆತನ ವಿದ್ಯಾಭ್ಯಾಸ, ಚಟುವಟಿಕೆಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುತ್ತಿದ್ದರಂತೆ.
ಒಂದು ಬಾರಿ ಶಾಲಾ ಅಧಿಕಾರಿಗಳು ಪಾಲಕರು ವರದಿ ಪಡೆದುಕೊಳ್ಳುವ ದಿನವನ್ನು ನಿಗದಿಪಡಿಸಿದ್ದರಂತೆ. ಶಾಸ್ತ್ರೀಜಿ ಆಗ ಪ್ರಧಾನಿಯಾಗಿದ್ದರೂ ಅಧಿಕಾರಿಗಳನ್ನು ಭೇಟಿ ಮಾಡಲು ಕಡಿಮೆ ಅಂಗರಕ್ಷಕರೊಡನೆ ಶಾಲೆಗೆ ತೆರಳಿದ್ದರಂತೆ. ಶಾಲೆಯ ಗೇಟಿನ ಹೊರಗೇ ಕಾರನ್ನು ನಿಲ್ಲಿಸಿ ಅಲ್ಲಿಂದ ನಡೆದುಕೊಂಡೇ ಶಾಲೆ ಆವರಣಕ್ಕೆ ತೆರಳಿದ್ದರು. ಕಾವಲುಗಾರನು ‘ಕಾರನ್ನು ಒಳಕ್ಕೇ ತೆಗೆದುಕೊಂಡು ಹೋಗಿ’ ಎಂದು ಒತ್ತಾಯಿಸಿದರೂ ಕೇಳಲಿಲ್ಲವಂತೆ. ಶಾಲೆಗೆ ಅವರು ಹೋಗಿರುವುದು ವಿದ್ಯಾರ್ಥಿಯ ತಂದೆಯಾಗಿಯೇ ಹೊರತು ಪ್ರಧಾನಿಯಾಗಿ ಅಲ್ಲ- ಎನ್ನುವುದು ಅವರ ನಿಲುವಾಗಿತ್ತು.
ಶಾಸ್ತ್ರೀಜಿ ಮಗ ಅನಿಲ್ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ. ಶಾಲೆಯಲ್ಲಿ ಆತನ ತರಗತಿ ಕೋಣೆ ಒಂದನೇ ಮಹಡಿಯಲ್ಲಿತ್ತು. ಶಾಸ್ತ್ರಿಯವರು ಮಗನ ಜೊತೆ ಮೆಟ್ಟಿಲು ಹತ್ತಿಕೊಂಡೇ ಅಲ್ಲಿಗೆ ಹೋದರು. ಅವರನ್ನು ನೋಡಿ ತರಗತಿಯ ಉಪಾಧ್ಯಾಯರಾದ ರೆವೆರೆಂಡ್ ಬ್ರದರ್ ಟೈನನ್ರವರು ಅವಾಕ್ಕಾದರು. ಅವರು ವಿನಯವಾಗಿ, ‘ವರದಿ ಪಡೆಯುವುದಕ್ಕೆ ನೀವೇ ಬರುವ ಅವಶ್ಯಕತೆ ಇರಲಿಲ್ಲ. ಬೇರೆ ಯಾರನ್ನಾದರು ಕಳುಹಿಸಬಹುದಾಗಿತ್ತು’ ಎಂದರಂತೆ. ಆಗ, ಶಾಸ್ತ್ರಿಯವರು, ‘ನಾನು ಹಿಂದಿನಿಂದಲೂ ಹೀಗೇ ಮಾಡುತ್ತಿದ್ದೇನೆ. ಅದನ್ನೇ ಮುಂದುವರಿಸುತ್ತೇನೆ’ ಎಂದರು. ‘ಆದರೆ ಈಗ ನೀವು ಪ್ರಧಾನ ಮಂತ್ರಿ’ ಎಂದರು ಟೈನನ್ರವರು. ‘ಬ್ರದರ್ ಟೈನನ್, ಪ್ರಧಾನಮಂತ್ರಿಯಾದ ಮೇಲೆ ನಾನು ಬದಲಾಗಿಲ್ಲ. ಆದರೆ ನೀವು ಬದಲಾಗಿರುವ ಹಾಗೆ ಕಾಣುತ್ತದೆ’ ಎಂದ ಶಾಸ್ತ್ರಿಯವರು ನಕ್ಕರಂತೆ.
ಶಾಸ್ತ್ರಿಯವರ ಮಕ್ಕಳು ಸ್ವಂತ ಕಾರಿಗಾಗಿ ಆಸೆ ಪಡುತ್ತಿದ್ದರು, ಆದರೆ ಶಾಸ್ತ್ರಿಯವರು ಒಪ್ಪಿರಲಿಲ್ಲ. ಅವರು ಪ್ರಧಾನಮಂತ್ರಿಯಾದಾಗ ಮಕ್ಕಳು ತಮ್ಮ ಬೇಡಿಕೆಯನ್ನು ಮತ್ತೆ ತಂದೆಯ ಮುಂದಿಟ್ಟರು. ಆಗ ಶಾಸ್ತ್ರೀಜಿ ಯೋಚಿಸಿ, ಮಕ್ಕಳನ್ನು ಕರೆದು ಕಾರು ಕೊಳ್ಳುವುದಾಗಿ ತೀರ್ವನಿಸಿದ್ದೇನೆ, ಎಂದರು. ಮಕ್ಕಳಿಗೆ ಸಂತೋಷವಾಯಿತು. ಅವರು ಮನಸ್ಸು ಮಾಡಿದರೆ ದುಬಾರಿ ಬೆಲೆಯ ಕಾರು ಖರೀದಿಸಬಹುದಿತ್ತು. ಆಸ್ತಿ-ಪಾಸ್ತಿಯನ್ನೂ ಗಳಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಬದಲಾಗಿ ತಮ್ಮ ಒಬ್ಬ ಸಿಬ್ಬಂದಿಯನ್ನು ಕರೆದು ಒಂದು ಸಾಧಾರಣ ಫಿಯಟ್ ಕಾರಿನ ಬೆಲೆ ಎಷ್ಟಾಗುತ್ತದೆ ಮತ್ತು ತಮ್ಮ ಬ್ಯಾಂಕಿನಲ್ಲಿ ಎಷ್ಟು ಹಣ ಇದೆ ಎಂದು ವಿಚಾರಿಸಿ ಹೇಳುವಂತೆ ಸೂಚಿಸಿದರು. ಆಗ ಒಂದು ಫಿಯಟ್ ಕಾರಿನ ಬೆಲೆ ರೂ. 12,000ವಿತ್ತು. ಅವರ ಬ್ಯಾಂಕ್ ಬ್ಯಾಲೆನ್ಸ್ ಕೇವಲ ರೂ 7,000 ಇತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ರೂ. 5,000 ಸಾಲ ಪಡೆದು ಕಾರನ್ನು ಕೊಂಡುಕೊಂಡರು. ಬ್ಯಾಂಕ್ನಿಂದ ಸಾಲ ಪಡೆದು ಕಾರು ಕೊಂಡುಕೊಂಡ ಪ್ರಧಾನಮಂತ್ರಿ ಇಡೀ ವಿಶ್ವದಲ್ಲಿ ಶಾಸ್ತ್ರಿಯವರೊಬ್ಬರೇ ಎಂದು ಅನಿಸುತ್ತದೆ. ಅಷ್ಟು ಸರಳ ಜೀವನವನ್ನು ಅವರು ನಡೆಸುತ್ತಿದ್ದರು. ಅದರೊಂದಿಗೆ ಕರ್ತವ್ಯಕ್ಕೆ ದ್ರೋಹ ಬಗೆಯಬಾರದು ಎನ್ನುವ ಚಿಂತನೆ ಹೊಂದಿದ ವ್ಯಕ್ತಿತ್ವ ಅವರದಾಗಿತ್ತು. ಸರ್ಕಾರ ತಮ್ಮ ಬಳಕೆಗಾಗಿ ನೀಡಿರುವ ಕಾರನ್ನು ಖಾಸಗಿ ಕೆಲಸಕ್ಕೆ ಎಂದೂ ಬಳಸುತ್ತಿರಲಿಲ್ಲ ಎನ್ನುವುದು ಅವರ ನಿಷ್ಠೆಗೆ ಮತ್ತೊಂದು ನಿದರ್ಶನ.
ಶಾಸ್ತ್ರಿಯವರ ಜೊತೆಯಲ್ಲಿದ್ದ ಎರಡನೆಯ ಮಗ ಅನಿಲ್ಗೆ 15 ವರ್ಷ. ಆತ 14 ವರ್ಷದವನಾಗಿದ್ದಾಗಲೇ ಗುಟ್ಟಾಗಿ ಕಾರು ಚಾಲನೆ ಕಲಿತಿದ್ದನು. ಶಾಸ್ತ್ರಿಯವರ ಡ್ರೈವರ್ ಸಹಾಯದಿಂದ ಒಬ್ಬನೇ ಚಾಲನೆ ಮಾಡುವ ಮಟ್ಟಕ್ಕೆ ಚೆನ್ನಾಗಿ ಕಲಿತನು. ಆದರೆ ವಾಹನ ಚಾಲನಾ ಲೈಸೆನ್ಸ್ ಪಡೆಯಲು 18 ವರ್ಷ ಆಗಿರಬೇಕು. ಆದರೆ ಅವರ ಮಗನು ಈಗಲೇ ಲೈಸೆನ್ಸ್ ಪಡೆಯಲು ಶಾಸ್ತ್ರಿಯವರ ಆಡಿಷನಲ್ ಆಪ್ತ ಕಾರ್ಯದರ್ಶಿರವರ ಸಹಾಯ ಕೋರಿದನು. ಅವರು ಒಂದೇ ದಿವಸದಲ್ಲಿ ಅವನಿಗೆ ಲೈಸೆನ್ಸ್ ಮಾಡಿಸಿಕೊಟ್ಟಿದ್ದರು. ಅಂದು ರಾತ್ರಿ ಶಾಸ್ತ್ರಿಯವರು ಮನೆಗೆ ಬಂದಾಗ ಅನಿಲ್ ಹೆಮ್ಮೆಯಿಂದ ಅವರಿಗೆ ತನ್ನ ವಾಹನ ಚಾಲನೆಯ ಲೈಸೆನ್ಸ್ ತೋರಿಸಿದ. ಅದನ್ನು ಕಂಡ ಶಾಸ್ತ್ರಿಯವರಿಗೆ ನೋವು ಮತ್ತು ಬೇಸರ ಉಂಟಾಯಿತು. ಆದರೆ ಅವರದನ್ನು ಮಾತಿನಲ್ಲಿ ತೋರಗೊಡಲಿಲ್ಲ. ಮಾರನೇ ದಿನ ಬೆಳಗ್ಗೆ ಆಪ್ತ ಕಾರ್ಯದರ್ಶಿಯವರನ್ನು ಕರೆಸಿ ತಮ್ಮ ಮನೆಯಲ್ಲೇ ಕಾನೂನಿನ ಉಲ್ಲಂಘನೆ ಆದದ್ದು ನೋವನ್ನು ಉಂಟುಮಾಡಿದೆ. ಕನಿಷ್ಠ ವಯೋಮಿತಿ ಇಲ್ಲದವನಿಗೆ ಯಾವ ಪರೀಕ್ಷೆಯನ್ನೂ ನಡೆಸದೆ ಲೈಸೆನ್ಸ್ ನೀಡಿ ಎರಡು ನಿಯಮಗಳನ್ನು ಮುರಿಯಲಾಗಿದೆ ಎಂದು ಶಾಸ್ತ್ರಿಯವರು ಗೃಹ ಇಲಾಖೆಗೆ ಟಿಪ್ಪಣಿ ಕಳುಹಿಸಿ ಮಗನ ಲೈಸೆನ್ಸ್ ರದ್ದು ಮಾಡಿಸಿದ್ದರು.
ಸೈಂಟ್ ಕೊಲಂಬಸ್ ಶಾಲೆಯಲ್ಲಿ ವ್ಯಾಸಂಗ ಮುಗಿದ ನಂತರ ಅವರ ಮಗ ಅನಿಲ್ ಸ್ಟೀಫನ್ ಕಾಲೇಜು ಸೇರಲು ಹೋಗಿ ಅರ್ಜಿ ಫಾರಂ ಭರ್ತಿ ಮಾಡಿ ನೀಡಿದನು. ಅವನು ತನ್ನ ಹೆಸರನ್ನು ಅನಿಲ್ ಕುಮಾರ್ ಎಂದೂ ತಂದೆಯ ಹೆಸರನ್ನು ಎಲ್.ಬಿ. ಶಾಸ್ತ್ರಿ ಎಂದೂ, ಅವರ ಉದ್ಯೋಗವನ್ನು ‘ಸರ್ಕಾರಿ’ ಎಂದೂ, ನಮೂದಿಸಿದ್ದನು. ವಿಳಾಸವನ್ನು ದೆಹಲಿ ‘ನಂ. ‘10, ಜನ್ಪಥ್’ ಎಂದು ನಮೂದಿಸಿದ್ದನು. ‘ನಂ.10, ಜನ್ಪಥ್’ ಪ್ರಧಾನಮಂತ್ರಿಯವರ ನಿವಾಸ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಅನಿಲ್ ಸರದಿ ಬಂದಾಗ, ಸಂದರ್ಶಕ, ‘ನೀನು ‘ನಂ.10, ಜನ್ಪಥ್’ ಬರೆದಿದ್ದೀಯ ಅದು ನಿನ್ನ ನಿವಾಸವೇ?’ ಎಂದು ಪ್ರಶ್ನಿಸಿದರು. ಅನಿಲ್ ‘ಹೌದು’ ಎಂದನು. ನಂತರ ಸಂದರ್ಶಕ ರಾಬರ್ಟ್. ‘ನಿಮ್ಮ ತಂದೆ ಜೀವನಕ್ಕೆ ಏನು ಮಾಡುತ್ತಿದ್ದಾರೆ?’ ಎಂದಾಗ ಅನಿಲ್, ‘ಅವರು ಸರ್ಕಾರದಲ್ಲಿ ಒಂದು ಸ್ಥಾನ ಪಡೆದಿದ್ದಾರೆ’ ಎಂದು ಉತ್ತರಿಸಿದ. ಆತನ ಉತ್ತರದಿಂದ ರಾಬರ್ಟ್ಗೆ ಸಮಾಧಾನವಾಗದಿದ್ದಾಗ ಅವರು, ‘ನಿಮ್ಮ ತಂದೆ ಹೊಂದಿರುವ ಸ್ಥಾನದ ಹೆಸರೇನು?’ ಎಂದು ಖಚಿತವಾಗಿ ಕೇಳಿದರು. ಅನಿಲ್, ‘ಭಾರತದ ಪ್ರಧಾನ ಮಂತ್ರಿ’ ಎಂದನು. ಅದನ್ನು ಕೇಳಿ ರಾಬರ್ಟ್ಗೆ ಷಾಕ್ ಆಯಿತು. ಅವರು ತಕ್ಷಣ ಅವನನ್ನು ಪ್ರಿನ್ಸಿಪಾಲ್ರ ಕೊಠಡಿಗೆ ಕರೆದುಕೊಂಡು ಹೋದರು. ನಂತರ ಮತ್ತೊಬ್ಬ ಅಧಿಕಾರಿ ಅನಿಲ್ನನ್ನು ಸ್ವಾಗತಿಸಿ ಅವನ ಸಂದರ್ಶನವನ್ನು ಬೇಗನೆ ಮುಗಿಸಿ ಕಳುಹಿಸಿದರು.
ಮನೆಯಲ್ಲಿ ರಾತ್ರಿ ವೇಳೆ, ಅನಿಲ್ ಕಾಲೇಜಿನಲ್ಲಿ ನಡೆದ ಸಂಗತಿಯನ್ನು, ತನಗೆ ಕಾಲೇಜಿನಲ್ಲಿ ವಿಶೇಷ ಆದ್ಯತೆ ನೀಡಿದುದನ್ನೂ ತಂದೆಗೆ ತಿಳಿಸಿದನು. ಶಾಸ್ತ್ರಿಯವರು, ‘ನೀನು ಸರದಿಯಲ್ಲಿ ಕಾದು ಸಂದರ್ಶನಕ್ಕೆ ಹೋದದ್ದು ಮೊದಲನೆಯ ಭಾಗ ಸರಿಯಾಗಿದೆ. ಆದರೆ ನಂತರ ನಿನ್ನ ಹಿನ್ನೆಲೆಯ ಆಧಾರದ ಮೇಲೆ ತಕ್ಷಣದ ಸಂದರ್ಶನ ನಡೆಸಿದ್ದು ಅಷ್ಟು ಸರಿಹೋಗಲಿಲ್ಲ, ಅವರು ಹಾಗೆ ಮಾಡಬಾರದಿತ್ತು’ ಎಂದು ಮಗನಲ್ಲಿ ತಿಳಿಸಿದ್ದರಂತೆ.
ಅನಿಲ್ ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ಅರ್ಥಶಾಸ್ತ್ರದ ವ್ಯಾಸಂಗಕ್ಕಾಗಿ ಸೇರಿಕೊಂಡನು. ಅವನಿಗೆ ಅನೇಕರು ಸ್ನೇಹಿತರಾದರು. ಅವರಲ್ಲಿ ಹುಡುಗಿಯರೂ ಇದ್ದರು. ಒಂದು ಮಧ್ಯಾಹ್ನ ಕಾಲೇಜು ಮುಗಿದ ಮೇಲೆ, ಊಟದ ವೇಳೆ ಕೆಲವು ಹುಡುಗಿಯರು ಅವನನ್ನು ನೋಡಲು ಅವನ ಮನೆಗೆ ಬಂದರು. ಅದು ಶಾಸ್ತ್ರಿಯವರು ಊಟಕ್ಕೆ ಮನೆಗೆ ಬರುವ ಸಮಯವಾಗಿತ್ತು. ತಾನು ಹುಡುಗಿಯರ ಜೊತೆಯಲ್ಲಿದ್ದರೆ ತಂದೆ ಏನನ್ನುವರೋ ಎಂದು ಭಾವಿಸಿ, ಭಯಪಟ್ಟ ಅನಿಲ್ ತಾನು ಮನೆಯಲ್ಲಿ ಇಲ್ಲವೆಂದು ಸಂದೇಶ ಕಳುಹಿಸಿ, ತಾನು ಬರುವವರೆಗೆ ಹುಡುಗಿಯರನ್ನು ದ್ವಾರದ ಬಳಿ ನಿಲ್ಲುವಂತೆ ತಿಳಿಸಿ, ಕಾವಲುಗಾರನಿಗೆ ಸಂದೇಶ ಕಳುಹಿಸಿದ್ದನು. ಅಷ್ಟರಲ್ಲಿ ಶಾಸ್ತ್ರಿಯವರು ಬಂದುಬಿಟ್ಟರು. ದ್ವಾರದಲ್ಲಿ ನಿಂತಿದ್ದ ಹುಡುಗಿಯರನ್ನು ಕಂಡು ವಿಚಾರಿಸಿದರು. ಅವರು ಅನಿಲ್ ಭೇಟಿಗೆ ಬಂದಿದ್ದುದನ್ನು ತಿಳಿದು ಒಳಗೆ ಬನ್ನಿ ಎಂದು ಕರೆದುಕೊಂಡು ಬಂದರು. ಮನೆಯ ಒಳಗೆ ಅನಿಲ್ ಇರುವುದು ಕಂಡು ಅವರಿಗೆ ಆಶ್ಚರ್ಯವಾಯಿತು.
ಶಾಸ್ತ್ರೀಯವರು ಮಗನನ್ನು ಉದ್ದೇಶಿಸಿ ‘ಮನೆಯಲ್ಲಿ ಇದ್ದುಕೊಂಡು ಇಲ್ಲ ಎಂದು ಏಕೆ ಹೇಳಿದೆ? ಮನೆಗೆ ಬಂದ ಆ ಹುಡುಗಿಯರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ನಿನ್ನ ವರ್ತನೆ ಇಷ್ಟ ಆಗಲಿಲ್ಲ’ ಎಂದಾಗ, ಅವನು, ‘ನಾನು ಹುಡುಗಿಯರೊಡನೆ ಇರುವುದು ನಿಮಗೆ ಇಷ್ಟವಾಗಲಾರದು ಎಂದು ಹಾಗೆ ಮಾಡಿದೆ’ ಎಂದನು. ಅದಕ್ಕೆ ಅವರು, ‘ಹಾಗೆಲ್ಲ ಆತುರವಾಗಿ ತೀರ್ವನಕ್ಕೆ ಬರಬಾರದು. ನೀನು ನಿನ್ನ ವಯಸ್ಸಿನ ಹುಡುಗಿಯರನ್ನು ಭೇಟಿ ಮಾಡಿದರೆ ನಾನೇಕೆ ಆಕ್ಷೇಪಿಸಬೇಕು? ಅವರನ್ನು ಒಳಕ್ಕೆ ಕರೆದು ಸರಿಯಾಗಿ ನೋಡಿಕೊ’ ಎಂದರು. ನಂತರ, ‘ನಮ್ಮ ದೇಶದಲ್ಲಿ ಶತ-ಶತಮಾನಗಳಿಂದ ಅತಿಥಿಗಳನ್ನು ಗೌರವ ಮತ್ತು ಆದರದಿಂದ ಉಪಚರಿಸಲಾಗುತ್ತಿದೆ. ಅದರಿಂದ ಅತಿಥಿಗಳಿಗೆ ಸೂಕ್ತ ಮರ್ಯಾದೆಯನ್ನು ಕೊಡಬೇಕು. ಆತಿಥ್ಯ, ಭಾರತೀಯ ಸಂಸ್ಕ ೃಯ ಪ್ರಧಾನ ಲಕ್ಷಣ’ ಎಂದು ಬುದ್ಧಿ ಹೇಳಿದರು.
ಶಾಸ್ತ್ರಿಯವರು ಪ್ರಧಾನಿ ಆಗಿದ್ದಾಗ ಆಹಾರದ ಕೊರತೆ ಬಹಳ ಇತ್ತು. ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಲಿಂಡನ್ ಜಾನ್ಸನ್ರವರು ಅಮೆರಿಕವು ಭಾರತಕ್ಕೆ ಕೊಡುತ್ತಿದ್ದ ಗೋಧಿಯನ್ನು ನಿಲ್ಲಿಸಿದ್ದರು. ಆಹಾರದ ಕೊರತೆ ಸಮತೂಗಿಸಲು ಶಾಸ್ತ್ರಿಯವರು ತೆಗೆದುಕೊಂಡ ಕ್ರಮಗಳಲ್ಲಿ ‘ಜನರು ಒಂದು ಹೊತ್ತು ಊಟ ಬಿಡುವುದು’ ಒಂದು ವಿಧಾನವಾಗಿತ್ತು. ಅದರಂತೆ ಪ್ರತಿ ಸೋಮವಾರ ರಾತ್ರಿ ಒಂದು ಹೊತ್ತು ಊಟ ಬಿಡಬೇಕೆಂದು ಶಾಸ್ತ್ರೀಜಿಯವರು ಜನರಿಗೆ ಮನವಿ ಮಾಡಿದರು. ಹಾಗೆ ಮನವಿ ಮಾಡುವುದಕ್ಕೆ ಮುನ್ನ ತಮ್ಮ ಮಕ್ಕಳ ಪ್ರತಿಕ್ರಿಯೆ ಗಮನಿಸಲು ಬಯಸಿದರು. ಒಂದು ಹೊತ್ತು ಅಡುಗೆ ಮಾಡದಿರುವಂತೆ ಪತ್ನಿಗೆ ಅವರು ಸೂಚಿಸಿ, ಉಪವಾಸವಿರುವಂತೆ ನೋಡಿಕೊಂಡರು. ಮಕ್ಕಳು ಆರಾಮವಾಗಿ ಉಪವಾಸ ಇದ್ದುದನ್ನು ನೋಡಿದ ಮೇಲೆ, ದೇಶದ ಜನರಲ್ಲಿ ಮನವಿ ಮಾಡಿದರು. ಜನರೂ ಸಕಾರಾತ್ಮಕವಾಗಿ ಸ್ಪಂದಿಸಿ, ಪ್ರತಿ ಸೋಮವಾರ ಉಪವಾಸ ಮಾಡಿದರು. ಹೀಗೆ ಶಾಸ್ತ್ರೀಜಿ ಯಾವುದೇ ಕೆಲಸ ಮಾಡುವ ಮೊದಲು ಅದರ ಸಾಧ್ಯತೆ-ಬಾಧ್ಯತೆ ಬಗ್ಗೆ ಆಲೋಚಿಸುತ್ತಿದ್ದರು. ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದ ನಾನು ರಾತ್ರಿಯ ತಿಂಡಿ ತ್ಯಾಗ ಮಾಡಿದ್ದೆ.
ಲಾಲ್ ಬಹಾದ್ದೂರ್ ಶಾಸ್ತ್ರಿ ದೇಶದ ಉನ್ನತ ಅಧಿಕಾರದಲ್ಲಿದ್ದವರು. ಮನಸ್ಸು ಮಾಡಿದ್ದರೆ ಸಾಕಷ್ಟು ಆಸ್ತಿ-ಪಾಸ್ತಿ ಹೊಂದಬಹುದಾಗಿತ್ತು. ಆಳು-ಕಾಳುಗಳನ್ನು ಇಟ್ಟುಕೊಂಡು ಕಷ್ಟಪಡದೇ ಬದುಕನ್ನು ನಡೆಸಬಹುದಾಗಿತ್ತು. ಆದರೆ ಸರಳ ವ್ಯಕ್ತಿಯಾಗಿ ಸತ್ಯ, ನ್ಯಾಯ, ನೀತಿಗಳಿಗೆ ಬೆಲೆ ಕೊಡುವುದರ ಜೊತೆಗೆ ತಮ್ಮ ಬದುಕಿನಲ್ಲೂ ಅಳವಡಿಕೊಂಡು ಎಲ್ಲರಿಗೂ ಮಾದರಿಯಾದ ವ್ಯಕ್ತಿತ್ವವನ್ನು ಹೊಂದಿದ್ದವರು.