"ಒಂದು ಸರಳ ಪ್ರೇಮಕಥೆ'ಯ ಬಳಿಕ ನಿರ್ದೇಶಕ ಸಿಂಪಲ್ ಸುನಿ ಮತ್ತು ನಿರ್ಮಾಪಕ ಮೈಸೂರ್ ರಮೇಶ್ "ಮೋಡ ಕವಿದ ವಾತಾವರಣ' ಮೂಲಕ ಮತ್ತೆ ಒಂದಾಗಿದ್ದಾರೆ. ಶೀರ್ಷಿಕೆಯ ಮೂಲಕವೇ ಗಮನ ಸೆಳೆಯುತ್ತಿರುವ ಈ ಚಿತ್ರ ಸದ್ಯ ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದೆ. ಇದೊಂದು ಸೈಂಟಿಫಿಕ್ ಫಿಕ್ಷನಲ್ ಲವ್ಸ್ಟೋರಿಯಾಗಿದ್ದು, ಶೀಲಮ್ ಸ್ವಾಮಿ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಇಬ್ಬರು ನಾಯಕಿಯರಿದ್ದು, ಸಾತ್ವಿಕಾ ರಾವ್ ಮತ್ತು ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಇದೇ ತಿಂಗಳ 26ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದ್ದು, ಈಗಾಗಲೇ ಪ್ರಚಾರದ ಕೆಲಸಗಳು ಭರ್ಜರಿಯಾಗಿ ಸಾಗಿವೆ. ಅದರ ಭಾಗವಾಗಿ ಇತ್ತೀಚೆಗಷ್ಟೆ ಚಿತ್ರತಂಡ ನಾಯಕನನ್ನು ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿದೆ. ಸಿಂಪಲ್ ಸುನಿ, ""ಮೋಡ ಕವಿದ ವಾತಾವರಣ' ನನ್ನ ಸಿನಿಮಾ ಜೀವನದ ಸ್ಪೆಷಲ್ ಸಿನಿಮಾ. ನನ್ನ ಸಿನಿಮಾಗಳ ಟ್ರೇಲರ್ ಚೆನ್ನಾಗಿ ಕಟ್ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಈ ಚಿತ್ರದ ಟ್ರೇಲರ್ ಕಟ್ ಮಾಡುವುದೇ ಕಷ್ಟಸಾಧ್ಯವಾಗಿದೆ. ಹೀಗಾಗಿ ಸಿನಿಮಾದ ಅರ್ಧ ಭಾಗವನ್ನಷ್ಟೇ ಟ್ರೇಲರ್ ಕಟ್ ಮಾಡಿ, ಉಳಿದರ್ಧ ಚಿತ್ರವನ್ನು ಥಿಯೇಟರ್ನಲ್ಲೇ ತೋರಿಸಲು ನಿರ್ಧರಿಸಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ. ಇನ್ನು ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಮತ್ತು ಆದಿತ್ಯ ಕಶ್ಯಪ್ ಸಂಕಲನವಿರಲಿದೆ.