ಬರಗಾಲದ ಹಿನ್ನೆಲೆಯಲ್ಲಿ ಸರಳ ಸಹಕಾರ ಸಪ್ತಾಹ; ಆರು ಜನರಿಗೆ ಮಾತ್ರ ಸಹಕಾರ ರತ್ನ ಪ್ರಶಸ್ತಿ

KN Rajanna
Published on

ಬೆಂಗಳೂರು: ಬರಗಾಲದ ಹಿನ್ನೆಲೆಯಲ್ಲಿ ಈ ವರ್ಷ ಸರಳವಾಗಿ ಸಹಕಾರ ಸಪ್ತಾಹ ಆಚರಿಸಲು ನಿರ್ಧರಿಸಲಾಗಿದೆ. ನವೆಂಬರ್ 14 ರಿಂದ 20ರ ವರೆಗೆ ರಾಜ್ಯಾದ್ಯಂತ ಆಚರಣೆ ಮಾಡುತ್ತೇವೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದೇವೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ತಿಳಿಸಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಹಕಾರ ದಿನಾಚರಣೆ ನಡೆಯಲಿದೆ. ಸಹಕಾರ ರತ್ನ ಪ್ರಶಸ್ತಿಯನ್ನೂ ನೀಡಲಾಗುವುದು. ಸಹಕಾರಿ ರಂಗದಲ್ಲಿ ಗುರ್ತಿಸಿಕೊಂಡವರನ್ನು ಆ ಮೂಲಕ ಗೌರವಿಸುತ್ತೇವೆ ಎಂದು ಹೇಳಿದರು.

70ನೇ ಅಖಿಲ ಭಾರತ ಸಹಕಾರ ಸಪ್ತಾಯದ ಮುಖ್ಯ ಧ್ಯೇಯ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು ಎಂಬುದಾಗಿ ಘೋಷಿಸಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಎಲ್ಲ ರಾಜ್ಯ ಮಟ್ಟದ ಸಹಕಾರ ಮಹಾಮಂಡಳುಗಳು, ಶೃಂಗ ಸಂಸ್ಥೆಗಳು, ಸಹಕಾರ ಇಲಾಖೆ ಹಾಗೂ ಸ್ಥಳೀಯ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಪ್ತಾಹದ ಅಂಗವಾಗಿ 7 ದಿನಗಳೂ ರಾಜ್ಯದ ವಿವಿಧೆಡೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಕಾರ ಸಂಘ-ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಎಂಬ ಶೀರ್ಷಿಕೆಯಡಿ ಮೊದಲ ದಿನದ ಕಾರ್ಯಕ್ರಮ ನಡೆಯಲಿವೆ. ಸಹಕಾರ ಸಂಘಗಳ ಪುನಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ, ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ, ಸಹಕಾರ ಸಂಸ್ಥೆಗಳಲ್ಲಿನ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದ್ಯೋನ್ಮುಖ ವಲಯಗಳು, ಸಾರ್ವಜನಿಕ- ಖಾಸಗಿ- ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವುದು. ಮಹಿಳೆಯರು, ಯುವಜನರು ಮತ್ತು ಅಬಲವರ್ಗಕ್ಕೆ ಸಹಕಾರ ಸಂಸ್ಥೆಗಳು. ಸಹಕಾರ ಶಿಕ್ಷಣ, ತರಬೇತಿಯ ಪರಿಷ್ಕರಣೆ ಕುರಿತು 7 ದಿನಗಳ ಕಾಲ ಗೋಷ್ಠಿಗಳು ನಡೆಯಲಿವೆ ಎಂದರು.

6 ಮಂದಿಗೆ ಸಹಕಾರ ರತ್ನ ಪ್ರಶಸ್ತಿ

ಈ ಬಾರಿ ಹತ್ತಾರು ಜನರಿಗೆ ಸಹಕಾರ ರತ್ನ ಪ್ರಶಸ್ತಿಗಳನ್ನು ಕೊಡುವುದಿಲ್ಲ. ಬದಲಿಗೆ ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ಕಂದಾಯ ವಿಭಾಗಗಳಿಂದ ತಲಾ ಒಬ್ಬರು ಸಹಕಾರಿ ಗಣ್ಯರು, ಬೆಂಗಳೂರು ನಗರದಿಂದ ಇಬ್ಬರು ಸಹಕಾರಿ ಗಣ್ಯರು, ಇಲಾಖೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಓರ್ವ ನಿವೃತ್ತ ಅಧಿಕಾರಿ ಸೇರಿ ಒಟ್ಟು 6 ಜನರಿಗೆ ಮಾತ್ರ ಸಹಕಾರ ರತ್ನ ಪ್ರಶಸ್ತಿ ಕೊಡಲು ನಿರ್ಧರಿಸಲಾಗಿದೆ. ಈ ಪ್ರಶಸ್ತಿಯು ಚಿನ್ನದ ಪದಕ ಮತ್ತು ಪ್ರಶಸ್ತಿಪತ್ರ ಒಳಗೊಂಡಿರುತ್ತದೆ ಎಂದು ದೇವೇಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net