

ಕಾರ್ಗಿಲ್ ವಿಜಯ ದಿವಸಕ್ಕೆ ಇಂದು ರಜತ ಸಂಭ್ರಮ. ಭಾರತೀಯ ಸೇನೆಯ ಶೌರ್ಯ, ಸಾಹಸಗಾಥೆ ಎಂದೆಂದಿಗೂ ಪ್ರೇರಣಾದಾಯಿ. ಭಾರತದ ವೀರಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಜತೆಗೆ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ಸಂಭ್ರಮವನ್ನು ಆಚರಿಸುವ ಕ್ಷಣವೂ ಹೌದು. ರಾಷ್ಟ್ರಭಕ್ತಿ, ಭಾವೈಕ್ಯತೆಯನ್ನು ಜಾಗೃತಗೊಳಿಸಿದ ಕಾರ್ಗಿಲ್ ಯುದ್ಧ ‘ದೇಶ ಮೊದಲು’ ಎಂಬ ಉದಾತ್ತ ಭಾವಕ್ಕೆ ಜೀವತುಂಬಿತು. ಭಯೋತ್ಪಾದನೆ ಹಾಗೂ ರಾಷ್ಟ್ರದ್ರೋಹಿಗಳ ವಿರುದ್ಧ ಕಠಿಣ ಕ್ರಮವೇ ಅನಿವಾರ್ಯ ಎಂಬುದನ್ನೂ ಕಾರ್ಗಿಲ್ ಸಮರ ಸಾಬೀತು ಮಾಡಿತು. ಕಾರ್ಗಿಲ್ ಸಮರ ಪಾಕಿಸ್ತಾನಕ್ಕೆ ಹಲವು ಪಾಠಗಳನ್ನು ಕಲಿಸಿತಲ್ಲದೆ, ಅಂತಾರಾಷ್ಟ್ರೀಯ ವಲಯದಲ್ಲಿ ಅದರ ಮುಖವಾಡವನ್ನು ಬಯಲು ಮಾಡಿತು. ಗಡಿಯನ್ನು ಕಾಯುವ ಯೋಧರನ್ನು ಗೌರವಿಸುತ್ತ ರಾಷ್ಟ್ರಕ್ಕಾಗಿ ಜೀವಿಸುವ ಸಂಕಲ್ಪವನ್ನು ಕೈಗೊಳ್ಳಲು ಈ ವಿಜಯ ದಿನ ಸುಸಂದರ್ಭ. ಕಾರ್ಗಿಲ್ ವಿಜಯ ದಿವಸದ 25ನೇ ವರ್ಷಾಚರಣೆಯ ರಾಷ್ಟ್ರೀಯ ಕಾರ್ಯಕ್ರಮ ಈ ಬಾರಿ ಲಡಾಕ್ನ ದ್ರಾಸ್ನಲ್ಲಿ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದಾರೆ. ರಾಷ್ಟ್ರಾದ್ಯಂತ ವಿವಿಧ ಕಾರ್ಯಕ್ರಮಗಳು ಆಯೋಜನೆಯಾಗಿವೆ.
ಸೈನಿಕರನ್ನು ಹುರಿದುಂಬಿಸಿದ ವಾಜಪೇಯಿ: ದೇಶಕ್ಕಾಗಿ ಪ್ರಾಣವನ್ನೇ ಒತ್ತೆ ಇಟ್ಟು ಹೋರಾಡುವ ಸೈನಿಕರಿಗೆ ದೂರದಿಂದ ಶುಭಾಶಯ ಹಾರೈಸುವ ರಾಜಕಾರಣಿಗಳು ಬೇಕಾದಷ್ಟು ಸಿಗುತ್ತಾರೆ. ಆದರೆ, ಯುದ್ಧ ನಡೆಯುವಾಗಲೇ ಸ್ವಯಂ ಯುದ್ಧರಂಗಕ್ಕೆ ಹೋಗಿ ಅಲ್ಲಿನ ಸೈನಿಕರ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಅಟಲ್ ಬಿಹಾರಿ ವಾಜಪೇಯಿ ನಮ್ಮ ಮುಂದೆ ಆದರ್ಶರಾಗಿ ನಿಲ್ಲುತ್ತಾರೆ. ಕಾರ್ಗಿಲ್ ಯುದ್ಧ ನಡೆಯುತ್ತಿರುವಾಗಲೇ ಜೂನ್ 13 ರಂದು ಅವರು ಕಾರ್ಗಿಲ್ ವಲಯಕ್ಕೆ ಹೋಗುವುದು ನಿಶ್ಚಯವಾಗಿತ್ತು. ಸೈನಿಕರಿಗೆ ಇದು ಅತ್ಯಂತ ಸಡಗರದ ಸಂಗತಿಯಾಗಿತ್ತು. ಆದರೆ, ಶತ್ರುರಾಷ್ಟ್ರ ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ಉಗ್ರಗಾಮಿಗಳಂತೂ ಹೇಗೆ ಭೇಟಿ ನೀಡುತ್ತಾರೋ ನೋಡೋಣ ಎಂದು ಸವಾಲೆಸೆದಿದ್ದರು. ಅದಕ್ಕೆ ತಕ್ಕಂತೆ ಹಿಂದಿನ ದಿನದಿಂದಲೇ ಪಾಕ್ ಸೈನಿಕರಿಂದ ಸತತ ಶೆಲ್ ದಾಳಿ ನಡೆಯತ್ತಲೇ ಇತ್ತು. ಆದರೂ ವಾಜಪೇಯಿ ಧೃತಿಗೆಡಲಿಲ್ಲ, ನಿರ್ಧಾರ ಬದಲಿಸಲಿಲ್ಲ. ಕಾರ್ಗಿಲ್ನ ಮುಂಚೂಣಿ ಪ್ರದೇಶವಾದ ಬರೂ ಗ್ರಾಮಕ್ಕೆ ಹೊರಟೇಬಿಟ್ಟರು. ಅವರು ಇಳಿದ ಹೆಲಿಪ್ಯಾಡ್ನಿಂದ ಎರಡು-ಮೂರು ಕಿ.ಮೀ. ಅಂತರದಲ್ಲೇ ಐದು ಶೆಲ್ಗಳು ಸ್ಪೋಟಿಸಿದವು. ಸೈನಿಕರು ಮತ್ತು ಸ್ಥಳೀಯ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಬೇಕೆಂದಿದ್ದ ವಿಭಾಗೀಯ ಆಯುಕ್ತರ ಕಚೇರಿ ಶೆಲ್ ದಾಳಿಯಿಂದ ಸಂಪೂರ್ಣ ಧ್ವಂಸವಾಯಿತು. ಆದರೂ ಹಿಂಜರಿಯದ ವಾಜಪೇಯಿ ಬೇರೊಂದು ಸ್ಥಳದಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ‘ಇಡೀ ದೇಶ ನಿಮ್ಮೊಂದಿಗಿದೆ, ನಿಮ್ಮ ಬಗ್ಗೆ ಎಲ್ಲರಿಗೂ ಅಭಿಮಾನವಿದೆ, ಮುನ್ನುಗ್ಗಿ ಶತ್ರುಗಳನ್ನು ಸದೆ ಬಡಿಯಿರಿ’ ಎಂದು ಸೈನಿಕರ ದೇಶಪ್ರೇಮವನ್ನು ಕೊಂಡಾಡಿ, ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಮೇ 3: ಪಾಕಿಸ್ತಾನಿಯರು ಅಕ್ರಮವಾಗಿ ಕಾರ್ಗಿಲ್ ಪ್ರವೇಶಿಸಿದ ಮಾಹಿತಿ ಸ್ಥಳೀಯ ಕುರಿಕಾಯುವವರಿಂದ ತಿಳಿದುಬಂತು.
ಮೇ 5: ಭಾರತೀಯ ಸೇನೆಯ ಗಸ್ತುದಳವನ್ನು ಕಳುಹಿಸಲಾಯಿತು. ಆದರೆ ಪಾಕ್ ಸೇನೆ ಐವರು ಭಾರತೀಯ ಸೈನಿಕರನ್ನು ಸೆರೆಹಿಡಿದು ಹಿಂಸಿಸಿ ಸಾಯಿಸಿತು.
ಮೇ 27: ಮಿಗ್-21, ಮಿಗ್-27 ಎಂಬ 2 ಯುದ್ಧವಿಮಾನ ಗಳನ್ನು ವಾಯುಪಡೆ ಕಳೆದುಕೊಂಡಿತು, ಫ್ಲೈಟ್ ಲೆಫ್ಟಿನೆಂಟ್ ನಚಿಕೇತ್ರನ್ನು ಯುದ್ಧಕೈದಿಯನ್ನಾಗಿ ಹಿಡಿಯಲಾಯಿತು.
ಮೇ 28: ಭಾರತೀಯ ವಾಯುಪಡೆಯ ಎಂಐ-17 ವಿಮಾನ ಹೊಡೆದುರಳಿಸಲಾಯಿತು, ನಾಲ್ವರು ಸಿಬ್ಬಂದಿ ಮೃತರಾದರು.
ಜೂನ್ 1: ಪಾಕಿಸ್ತಾನ ದಾಳಿಯ ತೀವ್ರತೆ ಹೆಚ್ಚಿಸಿತು.
ಜೂನ್ 5: ಮೂವರು ಪಾಕಿಸ್ತಾನಿ ಸೈನಿಕರಿಂದ ವಶಪಡಿಸಿಕೊಳ್ಳ ಲಾದ ದಾಖಲೆಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿತು.
ಜೂನ್ 6: ಕಾರ್ಗಿಲ್ನಲ್ಲಿ ಪಾಕ್ ಸೈನಿಕರ ವಿರುದ್ಧ ದಾಳಿ ಆರಂಭ.
ಜೂನ್ 9: ಬಟಾಲಿಕ್ ವಲಯದಲ್ಲಿನ 2 ಪ್ರಮುಖ ಸೇನಾಠಾಣೆ ಗಳನ್ನು ಭಾರತೀಯ ಸೇನೆ ಮರುವಶಪಡಿಸಿಕೊಂಡಿತು.
ಜೂನ್ 13: ಭಾರತೀಯ ಸೇನೆಯು ದ್ರಾಸ್ನಲ್ಲಿನ ಟೊಲೊ ಲೊಂಗ್ನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಜೂನ್ 15: ಕಾರ್ಗಿಲ್ನಿಂದ ಹಿಂದೆ ಸರಿಯುವಂತೆ ಅಮೆರಿಕ ಅಂದಿನ ಅಧ್ಯಕ್ಷ ಕ್ಲಿಂಟನ್ರಿಂದ ನವಾಜ್ ಷರೀಫ್ಗೆ ಸೂಚನೆ.
ಜೂನ್ 29: ಟೈಗರ್ ಹಿಲ್ ಸಮೀಪದ ಪಾಯಿಂಟ್ 5060 ಮತ್ತು ಪಾಯಿಂಟ್ 5,100 ಎಂಬ ಎರಡು ಪ್ರಮುಖ ಸಿಪಾಯಿ ನೆಲೆಗಳನ್ನು ಭಾರತೀಯ ಸೇನೆ ವಶಕ್ಕೆ ತೆಗೆದುಕೊಂಡಿತು.
ಜುಲೈ 4: ದಿಟ್ಟ ಕಾರ್ಯಾಚರಣೆಯ ಮೂಲಕ ಟೈಗರ್ ಹಿಲ್ನ್ನು ಮರುವಶಪಡಿಸಿಕೊಂಡ ಭಾರತೀಯ ಸೇನೆ.
ಜುಲೈ 5: ಭಾರತೀಯ ಸೇನೆ ದ್ರಾಸ್ನ್ನು ತನ್ನ ಹತೋಟಿಗೆ ತೆಗೆದುಕೊಂಡಿತು. ಕ್ಲಿಂಟನ್ ಜತೆಗಿನ ಸಭೆಯ ನಂತರ ಷರೀಫ್, ಕಾರ್ಗಿಲ್ನಿಂದ ಪಾಕ್ ಸೇನೆ ವಾಪಸಾತಿಯ ಬಗ್ಗೆ ಘೊಷಿಸಿದರು.
ಜುಲೈ 7: ಜುಬಾರ್ ಹೈಟ್ಸ್ ಶಿಖರ ಮರುವಶ.
ಜುಲೈ 11: ಪಾಕಿಸ್ತಾನವು ಸೇನಾ ವಾಪಸಾತಿ ಪ್ರಕ್ರಿಯೆ ಆರಂಭಿಸಿತು ಹಾಗೂ ಬಟಾಲಿಕ್ನಲ್ಲಿನ ಪ್ರಮುಖ ಶಿಖರಗಳನ್ನು ಭಾರತ ಮರುವಶಪಡಿಸಿಕೊಂಡಿತು.
ಜುಲೈ 14: ‘ಆಪರೇಷನ್ ವಿಜಯ’ ಕಾರ್ಯಾಚರಣೆ ಯಶಸ್ವಿ ಎಂದು ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಘೊಷಣೆ.
ಜುಲೈ 26: ಕಾರ್ಗಿಲ್ ಯುದ್ಧ ಅಧಿಕೃತವಾಗಿ ಕೊನೆಗೊಂಡಿತು. ಒಳನುಗ್ಗಿದ ಪಾಕಿಸ್ತಾನಿಯರನ್ನು ಸಂಪೂರ್ಣವಾಗಿ ಹೊರದಬ್ಬಲಾಗಿದೆ ಎಂದು ಭಾರತೀಯ ಸೇನೆ ಘೊಷಿಸಿತು.
ಮನೋಜ್ ಕುಮಾರ್ ಪಾಂಡೆ: ಇಪ್ಪತ್ತೆರೆರಡರ ತರುಣ ಮನೋಜ್ ಕುಮಾರ್ ಪಾಂಡೆ ‘ನನ್ನ ರಕ್ತದ ಸಾಮರ್ಥ್ಯ ತೋರುವ ಮುನ್ನ ಮೃತ್ಯು ಬಂದರೆ, ಆ ಮೃತ್ಯುವನ್ನೇ ಕೊಂದುಬಿಡುತ್ತೇನೆ’ ಎಂದು ತನ್ನ ಡೈರಿಯಲ್ಲಿ ಬರೆದುಕೊಂಡಿದ್ದರು. ಅಂತೆಯೇ ರಕ್ತದ ಶಕ್ತಿ ಸಾಬೀತುಪಡಿಸಿಯೇ ಪ್ರಾಣ ಕಳೆದುಕೊಂಡಿದ್ದ. ಅವರಿಗೆ ಪರಮವೀರ ಚಕ್ರವನ್ನು ಮರಣೋತ್ತರವಾಗಿ ಕೊಡಲಾಯ್ತು.
ವಿಕ್ರಮ್ ಬಾತ್ರಾ: ಜುಲೈ 5ಕ್ಕೆ ಟೈಗರ್ ಹಿಲ್ ನಮ್ಮದಾಯ್ತು. ಪಾಯಿಂಟ್ 4875 ನಮ್ಮ ಕೈಸೇರಿತು. ಒಂದೊಂದು ಬೆಟ್ಟ ವಶಪಡಿಸಿಕೊಳ್ಳುತ್ತ ನಡೆದಂತೆ ಭಾರತದ ಶಕ್ತಿ ವೃದ್ಧಿಸಿತು, ಪಾಕಿಗಳದ್ದು ಕ್ಷೀಣ ದನಿಯಾಯ್ತು. ಒಂದು ಬೆಟ್ಟವನ್ನು ವಶಪಡಿಸಿಕೊಂಡು ಕೆಳಗಿಳಿದು ಬಂದ ವಿಕ್ರಮ್ ಬಾತ್ರಾ ಅವರು ಟೆಲಿವಿಷನ್ ಚಾನಲ್ಗಳಲ್ಲಿ ಕಾಣಿಸಿಕೊಂಡು, ‘ಒಂದು ಬೆಟ್ಟ ಸಾಲದು, ಇನ್ನೂ ಬೇಕು. ಯೇ ದಿಲ್ ಮಾಂಗೆ ಮೋರ್’ ಎಂದರು. ಅದಾದ ಎರಡೇ ದಿನಗಳಲ್ಲಿ ಮತ್ತೆ ಬೆಟ್ಟ ಹತ್ತಿ ಶತ್ರುಗಳೊಂದಿಗೆ ಹೋರಾಡುತ್ತ, ಗುಂಡಿಗೆ ಬಲಿಯಾದರು. ಇಡಿಯ ದೇಶ ಕಣ್ಣೀರಿಟ್ಟಿತು.
ಲೆಫ್ಟಿನೆಂಟ್ ಕೀಶಿಂಗ್: ಲೆಫ್ಟಿನೆಂಟ್ ಕೀಶಿಂಗ್ ಕ್ಲಿಫೋರ್ಡ್ ನೋನ್ಗ್ರುಮ್ ನೇತೃತ್ವದಲ್ಲಿ ಸೈನಿಕರ ಪಡೆಯೊಂದು ಪಾಯಿಂಟ್ 4812ನ್ನು ವಶಪಡಿಸಿಕೊಳ್ಳಲೆಂದು ದಾಂಗುಡಿಯಿಟ್ಟಿತು. ತೋಲೋಲಿಂಗ್ಗೆ ಹೊಂದಿಕೊಂಡಂತಹ ಪರ್ವತ ಅದು. ಸುತ್ತಲೂ ಶತ್ರುಗಳಿದ್ದುದರಿಂದ, ಬೆಟ್ಟದ ಮೇಲಿನ ಪಾಕಿಗಳಿಗೆ ಮಾಹಿತಿಯೂ ಸರಿಯಾಗಿ ತಲುಪುತ್ತಿತ್ತು. ಪಾಕ್ ಸೈನಿಕರ ವ್ಯವಸ್ಥೆಯೂ ಜೋರಾಗಿತ್ತು. ನೋನ್ಗ್ರುಮ್ ಪಡೆಗೆ ಆಘಾತಗಳ ಮೇಲೆ ಆಘಾತ. ಬಹಳ ಹೊತ್ತು ಕಾದ ನೋನ್ಗ್ರುಮ್ ಅವರಿಗೆ ತಡೆಯಲಾಗಲಿಲ್ಲ. ಸುರಿಯುತ್ತಿದ್ದ ಗುಂಡಿನ ಮಳೆಯ ನಡುವೆ ನುಗ್ಗಿದರು. ಕೈಲಿದ್ದ ಗ್ರೆನೇಡುಗಳನ್ನು ಒಂದಾದಮೇಲೆ ಒಂದರಂತೆ ಎಸೆದರು. ಒಂದು ಬಂಕರ್ ಛಿದ್ರವಾಯ್ತು. ಆರು ಜನ ಸತ್ತರು. ಶತ್ರುಗಳ ಸ್ವಯಂಚಾಲಿತ ಗನ್ ಕಸಿಯಲು ಹೋದ ನೋನ್ಗ್ರುಮ್ ಅವರತ್ತ ಗುಂಡುಗಳು ತೂರಿಬಂದವು. ಪೂರ್ಣ ಬೆಟ್ಟ ವಶವಾಗುವವರೆಗೂ ನೋನ್ಗ್ರುಮ್ ಕೆಳಗಿಳಿಯಲು ಒಪ್ಪಲೇ ಇಲ್ಲ. ಆ ಬೆಟ್ಟವೇ ಅವರ ಅಂತಿಮ ಧಾಮವಾಯ್ತು. ತೋಲೋಲಿಂಗ್ ವಶಪಡಿಸಿಕೊಳ್ಳುವಲ್ಲಿ ಪಾಯಿಂಟ್ 4812ನ ಪಾತ್ರ ಅತಿ ದೊಡ್ಡದು.
ಕರ್ನಲ್ ವಿಶ್ವನಾಥನ್: ರುವಾಂಡ, ಅಂಗೋಲಾಗಳಲ್ಲೆಲ್ಲ ಶಾಂತಿಸ್ಥಾಪನಾ ಪಡೆಯ ಪರವಾಗಿ ಸೇವೆ ಸಲ್ಲಿಸಿದ್ದ ಕರ್ನಲ್ ವಿಶ್ವನಾಥನ್ ಕಾರ್ಗಿಲ್ ಕದನ ಭೂಮಿಯಲ್ಲಿ ಹುತಾತ್ಮರಾದರು. ಹೆಂಡತಿ ಜಲಜಾ ಕಣ್ಣುಗಳು ತೇವಗೊಂಡಿದ್ದವು. ಆಗ ತಾನೇ ಮಾತು ಕಲಿತಿದ್ದ ಮಗುವಿಗೆ ತಂದೆಗೇನಾಯ್ತೆಂಬುದೇ ಗೊತ್ತಿರಲಿಲ್ಲ. ಆದರೆ ವಿಶ್ವನಾಥನ್ರ ತಂದೆ ಮಾತ್ರ ಗಂಭೀರವಾಗಿದ್ದರು. ಮಗನ ಪಾರ್ಥೀವಶರೀರ ನೋಡಲು ಬಂದಿದ್ದ ನೂರಾರು ಜನರಿಗೆ ಮಗನ ಸಾಹಸ ವಿವರಿಸಿದರು. ಮಗನ ಕೊನೆಯ ದಿನದ ಅಂಗಿಯನ್ನು ಎತ್ತಿಟ್ಟ ತಂದೆ ಯಾರು ಬಂದರೂ ‘ದೇಹಕ್ಕಾಗಿರುವ ಗುಂಡುಗಳ ಗಾಯ ನೋಡಿ’ ಎನ್ನುತ್ತ ಆ ಅಂಗಿ ತೋರುತ್ತಿದ್ದರಂತೆ!