

ನವದೆಹಲಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕಾಗಿ ಆ.5ರ ಮಧ್ಯಾಹ್ನ 12:15:15ರ ಸುಮುಹೂರ್ತದಲ್ಲಿ ಶಿಲ್ಯಾನ್ಯಾಸ ನೆರವೇರುತ್ತಿದೆ. ಇದಕ್ಕಾಗಿ ಸಿದ್ಧವಾಗಿರುವ 22 ಕೆ.ಜಿ. ಬೆಳ್ಳಿ ಇಟ್ಟಿಗೆ ಅಯೋಧ್ಯೆಗೆ ರವಾನೆಗೊಂಡಿದೆ.
ಬಿಜೆಪಿಯ ವಕ್ತಾರ ಸುರೇಶ್ ನಕುವಾ 22,600 ಗ್ರಾಂ ಭಾರವಿರುವ ಬೆಳ್ಳಿ ಇಟ್ಟಿಗೆಯ ಎರಡು ಚಿತ್ರಗಳನ್ನು ಟ್ವಿಟ್ಟರ್ನಲ್ಲಿ ಬಿಡುಗಡೆ ಮಾಡಿದ್ದು, ಅದರ ಮೇಲೆ, ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿಜಿ ಅವರು ಶಿಲ್ಯಾನ್ಯಾಸ ನೆರವೇರಿಸಿದರು... ಜೈ ಶ್ರೀರಾಮ್... ಆಗಸ್ಟ್ 5, 2020, ಸಮಯ 12:15:15 ಎಂದು ಕೆತ್ತನೆ ಮಾಡಲಾಗಿದೆ.
ಲಭ್ಯ ಮಾಹಿತಿಯ ಪ್ರಕಾರ ಶಿಲ್ಯಾನ್ಯಾಸ ಕಾರ್ಯಕ್ರಮ ಆ.5ರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. 200 ಜನ ಅತಿಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ 11.30ಕ್ಕೆ ಆಗಮಿಸಲಿದ್ದಾರೆ. ಭೂಮಿ ಪೂಜೆ 1 ಗಂಟೆ ನಡೆಯಲಿದ್ದು, ನಂತರ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.