

ತೆಲಂಗಾಣ: ನೋಡುಗರಿಗೆ ಎದೆ ಝಲ್ ಎನಿಸುವ ಸಿಸಿಟಿವಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಪಾಯಕ್ಕೆ ಸಿಲುಕಿದ ಮಹಿಳೆಯೋರ್ವಳನ್ನು ರೈಲ್ವೆ ಪೊಲೀಸ್ ಅಧಿಕಾರಿ ರಕ್ಷಿಸಿರುವ ಘಟನೆ ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲನ್ನು ಮಹಿಳೆ ಹತ್ತಲು ಮುಂದಾಗಿದ್ದಾರೆ. ಅವಸರದಲ್ಲಿದ್ದ ಮಹಿಳೆ ರೈಲಿನ ಮೆಟ್ಟಿಲುಗಳಿಂದ ಜಾರಿ ಇನ್ನೇನು ರೈಲಿನಡಿ ಬೀಳಬೇಕು ಎನ್ನುವಷ್ಟರಲ್ಲೇ, ಅಲ್ಲೇ ಇದ್ದ ಆರ್ಪಿಎಫ್ ಅಧಿಕಾರಿ ತಕ್ಷಣ ಕಾರ್ಯಪ್ರವೃತ್ತರಾಗಿ ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಈ ಎಲ್ಲಾ ದೃಶ್ಯ ರೈಲ್ವೆ ನಿಲ್ದಾಣದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳೆದ ತಿಂಗಳು ಕೂಡ ಇದೇ ರೀತಿಯ ವಿಡಿಯೋ ಒಂದು ವೈರಲ್ ಆಗಿತ್ತು. ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ ನಲ್ಲಿ ರೈಲು ಏರಲು ಹೋದ ಮಹಿಳೆ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪೊಲೀಸ್ ಕಾನ್ಸ್ಟೇಬಲ್ ಸಮಯಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಬಚಾವ್ ಆಗಿದ್ದರು. (ಏಜೆನ್ಸೀಸ್)