

ಸಾಮಾಜಿಕ ನ್ಯಾಯ ಎಂಬ ಆದರ್ಶ ಬರೀ ತಾತ್ವಿಕ ಚಿಂತನೆಗೆ, ಚರ್ಚೆಗೆ ಅಥವಾ ವೇದಿಕೆಯ ಭಾಷಣಗಳಿಗೆ ಸೀಮಿತವಾದರೆ ಯಾವುದೇ ಪ್ರಯೋಜನವಿಲ್ಲ. ಸಾಮಾಜಿಕ ನ್ಯಾಯದ ಅನುಷ್ಠಾನ ಆಳುಗರ ಬದ್ಧತೆಯಾಗಬೇಕು. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಈ ಅವಧಿಯಲ್ಲಿ ಸುಧಾರಣೆಗಳೇ ಆಗಿಲ್ಲ ಎಂದು ಹೇಳುವಂತಿಲ್ಲ. ಜನರ ಜೀವನಸ್ತರವನ್ನು ಉನ್ನತೀಕರಿಸಲು, ವಿವಿಧ ರಂಗಗಳನ್ನು ಶಕ್ತಿಶಾಲಿಯಾಗಿಸಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ದೇಶದಲ್ಲಿ ಜನಪರವಾದ ಶಿಕ್ಷಣ ಹಕ್ಕು, ಆಹಾರ ಹಕ್ಕು, ಮಾಹಿತಿ ಹಕ್ಕು, ಆರೋಗ್ಯ ಮಿಷನ್, ನರೇಗಾದಂಥ ಯೋಜನೆಗಳ ಪರಿಣಾಮವನ್ನು ಅವಲೋಕಿಸಿದರೆ, ಸುಧಾರಣೆಗಳ ಚಿತ್ರಣ ಒಂದಷ್ಟು ಅಂದಾಜಿಗೆ ಬರಬಹುದು.
ನಮ್ಮ ದೇಶ ಅನೇಕ ಜಾತಿ, ಉಪಜಾತಿ, ಧರ್ಮ, ಸಂಸ್ಕೃತಿಯನ್ನು ಒಳಗೊಂಡಿದ್ದು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುತ್ತದೆ. ಇದು ಇಲ್ಲಿಯ ಸಂಸ್ಕೃತಿಯ ಸೌಂದರ್ಯವೂ ಹೌದು. ಆದರೆ, ಶೋಷಿತರನ್ನು, ದುರ್ಬಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಅಷ್ಟೇ ಅವಶ್ಯ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಹಲವು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದು ಗೊತ್ತಿರುವಂಥದ್ದೇ. ಆದರೂ, ಕಾಲದ ಅಗತ್ಯಕ್ಕೆ ತಕ್ಕಂತೆ ಇನ್ನಷ್ಟು ಸುಧಾರಣಾ ಕ್ರಮಗಳು ಅವಶ್ಯ.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ದಿನದಂದೇ (ಗುರುವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಲವು ಮಹತ್ವದ ಕೊಡುಗೆಗಳನ್ನು ಘೋಷಿಸಿರುವುದು ಸ್ವಾಗತಾರ್ಹ. 75 ಯುನಿಟ್ ತನಕ ಉಚಿತ ವಿದ್ಯುತ್, ಸ್ವಯಂ ಉದ್ಯೋಗಕ್ಕೆ ನೀಡುವ ಸಹಾಯಧನವನ್ನು 50 ಸಾವಿರ ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಳ, ಭೂಮಿ ಒಡೆತನ ಯೋಜನೆಯಡಿ 20 ಲಕ್ಷ ರೂ. ನೆರವು, ಈ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಸತಿ ನಿಲಯಗಳ ಕ್ಲಸ್ಟರ್ ನಿರ್ವಣ, 75 ಸಾವಿರ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ಹಾಗೂ 50 ಸಾವಿರ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತರಬೇತಿ ಕೇಂದ್ರ ಸ್ಥಾಪನೆ, ಪ್ರಸಕ್ತ ವರ್ಷದಲ್ಲಿ 100 ಅಂಬೇಡ್ಕರ್ ವಸತಿನಿಲಯ ನಿರ್ವಣ, ಡಾ.ಅಂಬೇಡ್ಕರ್ ಸ್ಪೂರ್ತಿ ಭವನ ಕಟ್ಟಡ ಸ್ಥಾಪನೆಗೆ 52 ಕೋಟಿ ರೂ. ಅನುದಾನ ಸೇರಿದಂತೆ ಹಲವು ಘೋಷಣೆ ಮಾಡಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಸೇರಿದಂತೆ ಹಲವರಿಗೆ ಇದರಿಂದ ಲಾಭವಾಗಲಿದೆ. ಅಭಿವೃದ್ಧಿಯ ಹಾದಿಯಲ್ಲಿನ ತೊಡಕುಗಳನ್ನು ನಿವಾರಣೆಗೊಳಿಸಲು ಸಹಕಾರಿಯಾಗಲಿವೆ. ಆದರೆ, ಈ ಘೋಷಣೆಗಳು ಬರೀ ರಾಜಕೀಯ ಲಾಭಕ್ಕೆ ಸೀಮಿತವಾಗಬಾರದು. ಇಂಥ ಸುಧಾರಣೆಗಳು ಅನುಷ್ಠಾನಕ್ಕೆ ಬಂದಾಗ ಮಾತ್ರ ಸಮಾಜದ ಕೆಳಹಂತದ ವ್ಯಕ್ತಿಗಳಿಗೂ ಸಾಮಾಜಿಕ ನ್ಯಾಯ ದೊರಕಿಸಲು ಸಾಧ್ಯ ಎಂಬುದನ್ನು ಮರೆಯುವಂತಿಲ್ಲ. ಪ್ರಸಕ್ತ ಘೋಷಣೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ.