ಶ್ರೀಕೃಷ್ಣನ ಪಾದದ ಧೂಳಿಯ ಮಹತ್ವ

1-6797c163c081c
Published on
ಅಕ್ರೂರ ಶ್ರೀಕೃಷ್ಣನನ್ನು ನೋಡುವ ಮೊದಲು ವೃಂದಾವನದೊಳಗೆ ಪ್ರವೇಶ ಮಾಡಿ ಅಲ್ಲಲ್ಲಿ ಅವನ ಹೆಜ್ಜೆಗಳನ್ನು ನೋಡಿದ್ದಾನೆ. ತತ್ಕ್ಷಣವೇ ರಥದಿಂದ ಕೆಳಗೆ ಜಿಗಿದು ಪದ್ಮಾದಿಗಳಿಂದ ಚಿಹ್ನಿತವಾದ ಹೆಜ್ಜೆಗಳನ್ನು ನೋಡಿ ನಮಸ್ಕರಿಸಿದ್ದಾನೆ.

ನಾನು ಇನ್ನು ರಥ ಹತ್ತುವದರಲ್ಲಿ ಯಾವ ಅರ್ಥವೂ ಇಲ್ಲ. ಶ್ರೀಕೃಷ್ಣನ ಹೆಜ್ಜೆಯ ಗುರುತುಗಳು ಇವೆಯೋ ಅಲ್ಲಿ ನಾನು ರಥ ಓಡಿಸಿಕೊಂಡು ಹೋಗುವುದೇ? ಅದು ಸಾಧ್ಯವಿಲ್ಲ. ಅಕ್ರೂರ ಬ್ರಹ್ಮದೇವರಲ್ಲಿ ತರಬೇತಿ ಪಡೆದವ. ರಥದಿಂದ ಜಿಗಿದು ಹೊರಳಾಡುತ್ತಿದ್ದಾನೆ. ಶ್ರೀಕೃಷ್ಣನ ಹೆಜ್ಜೆಗಳ ಮೇಲೆ ರಥ ಓಡಿಸಿಕೊಂಡು ಹೋಗುವುದು ಸಾಧ್ಯವಿಲ್ಲ ಎಂದು ಭಾವಿಸಿ ಆ ಧೂಳಿಯ ಕಣಗಳ ಮೇಲೆ ಹೊರಳಾಡುತ್ತಿದ್ದಾನೆ.

ಬ್ರಹ್ಮಾದಿದೇವತೆಗಳು ತಲೆ ಗಟ್ಟಿಸಿ ಯಾವ ಪಾದಕ್ಕೆ ನಮಸ್ಕಾರ ಮಾಡುತ್ತಾರೋ, ಯಾವ ಪಾದದ ಧೂಳಿಯ ದರ್ಶನ ಅವರ ಕಿರೀಟಗಳ ಮಣಿಗಳಿಗೆ ಆಗುವುದೋ ಅಂದರೆ ಶ್ರೀಕೃಷ್ಣನ ಪಾದಗಳಿಗೆ ತಮ್ಮ ಕಿರೀಟಗಳನ್ನು ಗಟ್ಟಿಸುವರೋ ಅಂತಹ ಪಾದ ಧೂಳಿ ನನಗೆ ಈಗ ಸಿಕ್ಕಾಗ ನಾನು ಅದನ್ನು ತಿರಸ್ಕರಿಸುವುದಿಲ್ಲ. ಯಾವ ಭಗವಂತನ ಪಾದಧೂಳಿಯು ನಮ್ಮ ಎಲ್ಲ ಪಾಪಗಳನ್ನು ಸುಟ್ಟು ಹಾಕಿ ಮಹಾಪುಣ್ಯವನ್ನು ಸುರಿಯುತ್ತದೆಯೋ ಅಂತಹ ಪಾದಧೂಳಿಯನ್ನು ಶಿರಸಾ ಧರಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ.

ಆ ಪಾದಧೂಳಿ ಸಕಲ ದೇವತೆಗಳ ಸನ್ನಿಧಾನಕ್ಕೆ ಪಾತ್ರವಾದ ಅದ್ಭುತವಾದ ಒಂದು ಪ್ರತೀಕ. ಅದು ಭಗವಂತನ ಒಂದು ಅಧಿಷ್ಠಾನ. ಅದರಲ್ಲಿ ಹೊರಳಾಡಿ ನಾನು ಪವಿತ್ರ ಆಗಬೇಕು ಎಂಬುದು ಅಕ್ರೂರನ ಭಾವನೆ. ಮಹಾತ್ಮರ ಪಾದಧೂಳಿಯೇ ಹಾಗೆ. ಎಲ್ಲ ಆಪತ್ತುಗಳನ್ನು ಪರಿಹರಿಸಿ ಸಂಪತ್ತನ್ನು ಸುರಿಸುವ ಮಹಾಸಾಮರ್ಥ್ಯ ಅದರಲ್ಲಿ ಇರುತ್ತದೆ.

ಅಷ್ಟು ಆ ಪಾದದಧೂಳಿಗೆ ಮಹತ್ವ ಇದೆ. ಭಗವದ್ಭಕ್ತರ ಪಾದಧೂಳಿಗೆ ಈ ಮಹತ್ವ ಇರಬೇಕಾದರೆ ಭಗವಂತನ ಪಾದಧೂಳಿಗೆ ಇನ್ನೆಷ್ಟು ಮಹತ್ವ ಇದೆ. ಅದನ್ನು ಚೆನ್ನಾಗಿ ತಿಳಿದ ಅಕ್ರೂರ ಕೃಷ್ಣನ ಪಾದಧೂಳಿಯಲ್ಲಿ ಹೊರಳಾಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net