ನೀವು ಹೇಳಿದ ಎಲ್ಲ ಷರತ್ತುಗಳಿಗೂ ನಾನು ಒಪ್ಪುತ್ತೇನೆ! ವಧುವಿಗೆ ಚೆಕ್​ಮೇಟ್​ ಇಟ್ಟ ವರನ ಸ್ನೇಹಿತರು

Marriage Agreement
Published on

ಚೆನ್ನೈ: ಮದುವೆ ಆದಮೇಲೆ ನೀನು ಸಿಗೋದಿಲ್ಲ ಕಣಯ್ಯಾ…ಎಂಬ ಮಾತನ್ನು ಮದುವೆಯಾಗುವ ಹುಡುಗರಿಗೆ ಆತನ ಸ್ನೇಹಿತರು ಹೇಳುವುದನ್ನು ನೀವು ಕೇಳಿಯೇ ಇರುತ್ತೀರಿ. ಅದು ನಿಜ ಕೂಡ. ಏಕೆಂದರೆ, ಮದುವೆಯಾದ ಬಳಿಕ ಜವಾಬ್ದಾರಿ ಹೆಚ್ಚಾಗುತ್ತದೆ. ಅಲ್ಲದೆ, ಕುಟುಂಬಕ್ಕೆ ವಿಶೇಷ ಸಮಯ ನೀಡಬೇಕಾಗುತ್ತದೆ. ಕೆಲವೊಂದಕ್ಕೆ ಆಕ್ಷೇಪಗಳು ವ್ಯಕ್ತವಾಗುತ್ತವೆ. ಹೀಗಾಗಿ ಮದುವೆಯಾದ ಯುವಕರು ಈ ಹಿಂದಿನಂತೆ ಫ್ರೆಂಡ್ಸ್​ ಜತೆ ಇರಲು ಸಾಧ್ಯವಾಗುವುದಿಲ್ಲ. ಆದರೆ, ಇಲ್ಲೊಂದು ಸ್ನೇಹ ಬಳಗ ಮುಂಜಾಗ್ರತೆ ವಹಿಸಿ, ಒಪ್ಪಂದವೊಂದನ್ನು ಮಾಡಿಕೊಂಡಿದೆ. ಮದುವೆಯ ದಿನ ವಧು ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

ಇತ್ತೀಚೆಗಷ್ಟೇ ನಡೆದ ಮದುವೆಯಲ್ಲಿ ನವ ವಧು ತನ್ನ ಪತಿಗೆ ಸ್ವಾತಂತ್ರ್ಯ ನೀಡುವುದಾಗಿ ಮದುವೆಯ ಪ್ರಮಾಣ ಪತ್ರದ ಜತೆಗೆ ಸ್ಟ್ಯಾಂಪ್ ಪೇಪರ್​ಗೆ ಸಹಿ ಹಾಕಿದ್ದಾಳೆ. ಈ ವಿಚಿತ್ರ ಘಟನೆ ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯಲ್ಲಿ ನಡೆದಿದೆ. ಸೀರ್ಕಾಳಿ ಮೂಲಕ ಮುತ್ತುಕುಮಾರ್​ ಎಂಬ ಯುವಕ ಕುರಿಂಜಪಾಡಿ ಮೂಲದ ಪವಿತ್ರಾ ಎಂಬ ಯುವತಿಯನ್ನು ಭಾನುವಾರ (ಸೆ.15) ಮದುವೆಯಾದನು.

ಈ ಮದುವೆ ಸಂಭ್ರಮಾಚರಣೆಯಲ್ಲಿ ವರ ಮುತ್ತುಕುಮಾರ್ ಅವರ ಸ್ನೇಹಿತರು ಉಪಸ್ಥಿತರಿದ್ದರು. ಮದುವೆಯ ನಂತರ ಗೆಳೆಯ ತುಂಬಾ ಬಿಜಿಯಾಗಿಬಿಡುತ್ತಾನೆ, ಮತ್ತೆ ಸುಲುಭವಾಗಿ ನಮ್ಮ ಕೈಗೆ ಸಿಗುವುದಿಲ್ಲ ಎಂದು ಆತಂಕಗೊಂಡರು. ಹೀಗಾಗಿ ಒಂದು ಉಪಾಯ ಮಾಡಿದ ಸ್ನೇಹಿತರು 100 ರೂಪಾಯಿಯ ಸ್ಟ್ಯಾಂಪ್ ಪೇಪರ್ ತಂದು, ಒಂದು ಒಪ್ಪಂದ ಮಾಡಿಕೊಂಡು, ವಧುವಿನ ಕೈನಿಂದ ಸಹಿ ಹಾಕಿಸಿದ್ದಾರೆ.

ಒಪ್ಪಂದದ ಪ್ರಕಾರ ನಾನು ನನ್ನ ಗಂಡನಿಗೆ ಮದುವೆಯ ನಂತರವೂ ಸ್ವಾತಂತ್ರ್ಯವನ್ನು ನೀಡುತ್ತೇನೆ. ಸ್ನೇಹಿತರ ಜೊತೆ ಮೋಜು ಮಸ್ತಿ ಮಾಡಲು ಅನುಮತಿ ನೀಡುತ್ತೇನೆ. ರಜೆ ಇದ್ದಾಗ ಸ್ನೇಹಿತರ ಜತೆ ಎಲ್ಲಾದರೂ ಹೊರಗಡೆ ಹೋದರೆ ಅದನ್ನು ತಡೆಯುವುದಿಲ್ಲ. ಗೋವಾ, ಪಾಂಡಿಚೇರಿ ಹಾಗೂ ಥೈಲ್ಯಾಂಡ್ ಸೇರಿದಂತೆ ಇತ್ಯಾದಿಗಳಿಗೆ ಪ್ರವಾಸಕ್ಕೆ ಕಳುಹಿಸುತ್ತೇನೆ. ನನ್ನ ಗಂಡ ಅವನ ಸ್ನೇಹಿತರೊಂದಿಗೆ ಇರುವಾಗ, ಯಾವಾಗ ಬರುತ್ತೀರಿ? ಎಲ್ಲಿದ್ದೀರಿ? ಎಂಬ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದು ಸ್ಟ್ಯಾಂಪ್​ ಪೇಪರ್​ನಲ್ಲಿ ಬರೆಯಲಾಗಿತ್ತು. ಇದಕ್ಕೆ ವಧು ಸಂಪೂರ್ಣ ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದಾಳೆ.

ವಧುವಿನ ಜೊತೆ ಬಾಂಡ್​ಗೆ ಸಹಿ ಮಾಡಿದ ವರನ ಸ್ನೇಹಿತರು ನಾವು ಮೋಜಿಗಾಗಿ ಈ ರೀತಿ ಮಾಡಿಲ್ಲ ಎಂದು ಹೇಳಿದ್ದಾರೆ. ಪ್ರತಿಯೊಂದು ಸ್ನೇಹವು ಮದುವೆಯ ನಂತರ ಬೇರ್ಪಡುತ್ತದೆ. ಮದುವೆಯ ನಂತರ ಸ್ನೇಹ ಸಂಪೂರ್ಣವಾಗಿ ಮರೆಯಾಗುತ್ತದೆ. ಮುಂದೆ ಹೀಗಾಗಬಾರದು ಎಂಬ ಉದ್ದೇಶದಿಂದ ಈ ಪ್ರಯತ್ನ ಮಾಡಿದ್ದೇವೆ. ಇದು ಸಾಧ್ಯವೇ ಎಂದು ನಮಗೆ ತಿಳಿದಿಲ್ಲ ಆದರೆ, ಸ್ನೇಹಿತನ ಸಂಗಾತಿಯು ನಮ್ಮ ಸ್ನೇಹವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ಭರವಸೆಯಿಂದ ನಾವು ಇದನ್ನು ಮಾಡಿದ್ದೇವೆ ಎಂದು ವರನ ಸ್ನೇಹಿತರು ಹೇಳಿದ್ದಾರೆ.

ಮದುವೆಯ ನಂತರವೂ ತನ್ನ ಪತಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವುದಾಗಿ ಸಂತಸದಿಂದ ಪ್ರಮಾಣ ವಚನಕ್ಕೆ ಸಹಿ ಹಾಕಿದ ಈ ನವ ವಧುವಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net