

ನವದೆಹಲಿ: ಭಾರತದ ಶೂಟರ್ ಸಿಫ್ಟ್ ಕೌರ್ ಸಮ್ರಾ ಅಮೋ ನಿರ್ವಹಣೆ ತೋರುವ ಮೂಲಕ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದು ಶೂಟಿಂಗ್ ವಿಶ್ವಕಪ್ನಲ್ಲಿ ಅವರು ಗೆದ್ದ ಮೊಟ್ಟಮೊದಲ ವೈಯಕ್ತಿಕ ಸ್ವರ್ಣ ಪದಕವಾಗಿದೆ.
ಅರ್ಜೆಂಟೀನಾದ ಬ್ಯೂನಸ್ ಐರಿಸ್ನಲ್ಲಿ ನಡೆಯುತ್ತಿರುವ ಕೂಟದ ಫೈನಲ್ನಲ್ಲಿ 23 ವರ್ಷದ ಸಿಫ್ಟ್, ಮೊದಲ 15 ಶೂಟ್ ಬಳಿಕ 7.2 ಅಂಕಗಳ ಹಿನ್ನಡೆಯಲ್ಲಿದ್ದರು. ಆದರೆ ನಂತರದಲ್ಲಿ ಪ್ರೋನ್ ಮತ್ತು ಸ್ಟಾ$ಂಡಿಂಗ್ ವಿಭಾಗದಲ್ಲಿ ಪುನರಾಗಮನ ಕಾಣುವ ಮೂಲಕ ಅಗ್ರಸ್ಥಾನಕ್ಕೇರಿದರು. ಸಿಫ್ಟ್ 45 ಶೂಟ್ಗಳ ಫೈನಲ್ನಲ್ಲಿ ಅಂತಿಮವಾಗಿ 458.6 ಅಂಕ ಕಲೆಹಾಕಿದರು.
ಜರ್ಮನಿಯ ಅನಿತಾ ಮಾನ್ಗೋಲ್ಡ್ 455.3 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕಜಾಕ್ಸ್ತಾನದ ಅರಿನಾ ಅಲ್ತುಖೋವಾ (445.9) 3ನೇ ಸ್ಥಾನ ಗಳಿಸಿದರು. ಪುರುಷರ ರೈಫಲ್ 3 ಪೊಸಿಷನ್ ವಿಭಾಗದಲ್ಲಿ ಭಾರತದ ಚೈನ್ ಸಿಂಗ್ ಕಂಚಿನ ಪದಕ ಗೆದ್ದುಕೊಂಡರು.